ಹೊನ್ನಾವರ: ಬಡಗುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ತಾಲೂಕಿನ ಹಡಿನಬಾಳ ಕಪ್ಪೆಕೆರೆಯ ಮಹಾದೇವ ಹೆಗಡೆ(75) ಮಂಗಳವಾರ ರಾತ್ರಿ ನಿಧನರಾದರು.
ಮಹಾದೇವ ಹೆಗಡೆಯವರು ಖಳ ಮತ್ತು ಸಾತ್ವಿಕ ಎರಡೂ ರೀತಿಯ ಪಾತ್ರಗಳನ್ನೂ ಸಮರ್ಥವಾಗಿ ಪ್ರಸ್ತುತ ಪಡಿಸುತ್ತಿದ್ದರು. ಭೀಮ, ಸುಗ್ರೀವ, ವಾಲಿ. ರಾಮ, ಜಮದಗ್ನಿ, ರಾವಣ, ಮಾಗದ, ಹರಿಶ್ಚಂದ್ರ, ವಿಶ್ವಾಮಿತ್ರ ಮುಂತಾದ ಪಾತ್ರಗಳ ಮೂಲಕ ಖ್ಯಾತರಾಗಿದ್ದರು.
ಕಲಾರಂಗದ ಸೇವೆ ಅನನ್ಯ: ಹಂತ ಹಂತವಾಗಿ ಬೆಳೆದು ಬಂದ ಇವರು ಸ್ತ್ರೀವೇಷ, ಬಣ್ಣದ ವೇಷಗಳನ್ನು ಸಹ ಮಾಡಿದ್ದರು. ಮಂದಾರ್ತಿ ಮೇಳದ ಪ್ರಧಾನ ವೇಷಧಾರಿಯಾಗಿ ಸೇವೆ ಸಲ್ಲಿಸಿದ್ದರು. ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರು.ಪ್ರಸಿದ್ಧ ಭಾಗವತರಾದ ಇವರ ಸಹೋದರ ಕಪ್ಪೆಕೆರೆ ಸುಬ್ರಾಯ ಹೆಗಡೆ ಅವರಿಂದ ಯಕ್ಷಗಾನ ಕಲಿತು, ಕೆರೆಮನೆ ಮಹಾಬಲ ಹೆಗಡೆ ಅವರ ಗರಡಿಯಲ್ಲಿ ಶ್ರೇಷ್ಠ ಕಲಾವಿದರಾಗಿ ರೂಪುಗೊಂಡಿದ್ದರು. ಗುಂಡಬಾಳ, ಇಡಗುಂಜಿ, ಬಚ್ಚಗಾರು, ಶಿರಸಿ, ಪಂಚಲಿಂಗ, ಮಂದಾರ್ತಿ ಮೇಳಗಳಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆ ಮಾಡಿದ್ದರು. ಶಿರಸಿ ಮೇಳದಲ್ಲಿ ವ್ಯವಸ್ಥಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು.