ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾನುವಾರ ರಂಗಸ್ಥಳ ಯಕ್ಷಮಿತ್ರ ಕೂಟ, ಕರ್ನಾಟಕ ಯಕ್ಷಗಾನ ಅಕಾಡೆಮಿ ‘ರಜತಪರ್ವ- 2025’ ಸಮಾರೋಪ ಕಾರ್ಯಕ್ರಮದಲ್ಲಿ ಸಾಧಕರಿಗೆ ರಂಗಸ್ಥಳ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಯಕ್ಷಗಾನ ಮನುಷ್ಯನನ್ನು ನೈತಿಕವಾಗಿ ಎತ್ತರಕ್ಕೆ ಕೊಂಡೊಯ್ಯುವ ಕಲೆಯಾಗಿದೆ. ಆದರೆ, ಈಗಿನ ಹಲವು ಮನರಂಜನ ಮಾಧ್ಯಮಗಳು ನೈತಿಕವಾಗಿ ಅಧಃಪತನಕ್ಕೆ ಕಾರಣವಾಗುತ್ತಿವೆ. ಮನಸ್ಸಿಗೆ ರಂಜನೆ ನೀಡುತ್ತ, ವ್ಯಕ್ತಿಗೆ ಗೊತ್ತಿಲ್ಲದಂತೆಯೆ ನೈತಿಕವಾಗಿ ಎತ್ತರಿಸಿ ಸಾಮಾಜಿಕ ಸಾಧನೆ, ಅಧ್ಯಾತ್ಮಿಕ ಸಾಧನೆ ಮಾಡಲು ನೆರವಾಗುತ್ತದೆ ಎಂದರು.
ಹಿಂದೆ ಅಕ್ಷರ ಗೊತ್ತಿಲ್ಲದವರಿಗೂ ರಾಮಾಯಣ, ಮಹಾಭಾರತ, ಭಾಗವತದ ಬಗ್ಗೆ ಜ್ಞಾನ ನೀಡಿದ್ದು ಯಕ್ಷಗಾನ. ಈ ಸಾಹಿತ್ಯ ಮಾನಸಿಕವಾಗಿ ಕುಗ್ಗಿದಾಗ ಮನೋಧೈರ್ಯ ಕೊಟ್ಟು ಆತ್ಮರಕ್ಷಣೆ ಮಾಡುತ್ತದೆ. ಕಷ್ಟದಿಂದ ಬಂದವರು ಜೀವನದಲ್ಲಿ ಎತ್ತರಕ್ಕೇರಲು ಬಾಲ್ಯದ ಪಾಠಗಳು ನೆರವಾಗುತ್ತವೆ. ಯಕ್ಷಗಾನ ಅಂತಹ ಪಾಠ ನೀಡುತ್ತದೆ. ಸಮಾಜದ ಒಳಿತಿಗಿರುವ ಯಕ್ಷಗಾನವನ್ನು ಸಕಾರಾತ್ಮಕ ಭಾವನೆಯೊಂದಿಗೆ ಉಳಿಸಿ ಬೆಳೆಸೋಣ ಎಂದು ಹೇಳಿದರು.ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಊರಿನವರು ಭಾಷೆ, ಕಲೆಗಾಗಿ ಒಂದಾಗುವುದು ಹೆಮ್ಮೆಯ ವಿಚಾರ. ಯಕ್ಷಗಾನ ಕಲೆ ಸಂಸ್ಕೃತಿ ಭಾಷೆಯನ್ನು ಬೆಳೆಸುತ್ತದೆ. ಊರಿನ ಸಂಸ್ಕೃತಿಯನ್ನು ಬೆಳೆಸುವವರು ನಮ್ಮ ನಿಜವಾದ ಆಸ್ತಿ ಎಂದರು.
ಸಂಗೀತ ನಿರ್ದೇಶಕ ರವಿ ಬಸ್ರೂರು, ಶಂಕರ್ ಎಲೆಕ್ಟ್ರಿಕಲ್ ಸರ್ವೀಸಸ್‌ನ ರಾಜೇಶ್ ಶೆಟ್ಟಿ, ಯಕ್ಷಗಾನ ಕಲಾರಂಗದ ಪ್ರಧಾನ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿದರು. ರಂಗಸ್ಥಳ ಅಧ್ಯಕ್ಷ ಆರ್.ಕೆ.ನಾಗೂರು, ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೇಖರ್ ಸೇರಿ ಇದ್ದರು. ಬೆಳಗ್ಗೆ ವಿಷ್ಣು ಸಹಸ್ರನಾಮ ಹೋಮ ನಡೆಯಿತು. ಚಂದ್ರಮಂಡಲ ಚರಿತೆ, ಶ್ರೀಕೃಷ್ಣ ಗಾರುಡಿ ಯಕ್ಷಗಾನ ಪ್ರದರ್ಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಯಕ್ಷಗಾನ ಭಾಗವತ ಕೆ.ಪಿ.ಹೆಗಡೆ ಗೊಳಗೋಡು, ಮುಮ್ಮೇಳ ಕಲಾವಿದ ಹೆರಿಯ ಮೊಗವೀರ ಮೊಗೆಬೆಟ್ಟು ಅವರಿಗೆ ರಂಗಸ್ಥಳ-2025 ಪ್ರಶಸ್ತಿ ಪ್ರದಾನ ಮಾಡಲಾಯಿತು. ಜತೆಗೆ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ಕಕ್ಕುಂಜೆ ಗೋಪಾಪ ಬಳೆಗಾರ, ನಾಗೇಶ್ ಭಂಡಾರಿ ಕರ್ವೆ, ಕೋಡಿ ವಿಶ್ವನಾಥ ಗಾಣಿಗರು, ಮಾರಣಕಟ್ಟೆ ನಾರಾಯಣ ನಾಯ್ಕ ಅವರಿಗೆ ಪ್ರದಾನ ಮಾಡಲಾಯಿತು.