ಆಧುನಿಕ ಯುಗದಲ್ಲಿ ಮೊಬೈಲ್ ಒಂದೇ ಪ್ರಪಂಚವಾಗಿದೆ. ಶೈಕ್ಷಣಿಕವಾಗಿ ಅನೂಕೂಲತೆಗಾಗಿ ಇದನ್ನು ಬಳಸಿದರೆ ಇನ್ನಷ್ಟು ಸಾಧನೆ ಮಾಡಬಹುದಾಗಿದೆ.
ಹೊನ್ನಾವರ: ಸುಗ್ಗಿ ಮತ್ತು ಯಕ್ಷಗಾನ ಜಿಲ್ಲೆಯ ಹೆಮ್ಮೆಯ ಕಲೆಯಾಗಿದೆ. ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ಮುಂದಿನ ತಲೆಮಾರಿನವರಿಗೂ ಇದರ ಬಗ್ಗೆ ಆಸಕ್ತಿ ಮೂಡಲಿದೆ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ಅಭಿಪ್ರಾಯಪಟ್ಟರು.
ಸಾಲ್ಕೋಡ್ ಶಾಲಾ ಮೈದಾನದ ದಿ. ಶ್ರೀಧರ ಭಟ್ ಕಾಸರಕೋಡ ವೇದಿಕೆಯಲ್ಲಿ ಯಕ್ಷಕಲಾ ಕುಸುಮ ಹೊನ್ನಾವರ ಹಾಗೂ ಟೀಮ್ ಬಾಲಚಂದ್ರ ಮತ್ತು ಗೆಳೆಯರ ಬಳಗ ಸಾಲ್ಕೋಡ್ ಇವರ ಸಹಯೋಗದಲ್ಲಿ ಜರುಗಿದ ಶರದ್ ಯಕ್ಷ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಯುಗದಲ್ಲಿ ಮೊಬೈಲ್ ಒಂದೇ ಪ್ರಪಂಚವಾಗಿದೆ. ಶೈಕ್ಷಣಿಕವಾಗಿ ಅನೂಕೂಲತೆಗಾಗಿ ಇದನ್ನು ಬಳಸಿದರೆ ಇನ್ನಷ್ಟು ಸಾಧನೆ ಮಾಡಬಹುದಾಗಿದೆ. ಈ ದಿನ ಕಲೆ ಆರೋಗ್ಯದ ಸಮ್ಮಿಲನ ಕಾರ್ಯಕ್ರಮವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವರನ್ನು ಗುರುತಿಸಿ ಗೌರವಿಸುತ್ತಿರುವುದು ಮಾದರಿ ಕಾರ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡರಾದ ಸುಷ್ಮಾ ರಾಜಗೋಪಾಲ ರೆಡ್ಡಿ ಮಾತನಾಡಿ, ಸಾಂಸ್ಕತಿಕ ಕಾರ್ಯಕ್ರಮ ಆಗಬೇಕಾದರೆ ಸಂಘಟನೆಯು ಉತ್ತಮವಾಗಿರಬೇಕು. ಗ್ರಾಮದಲ್ಲಿ ಉತ್ತಮ ಯುವ ಸಮುದಾಯವು ಸಂಘಟಿತವಾಗಿರುದರಿಂದಲೇ ಕಾರ್ಯಕ್ರಮ ಯಶ್ವಸಿಯಾಗುತ್ತಿದೆ. ವೈದ್ಯರ ಸೇವೆ ಗುರುತಿಸಿ ಈ ರೀತಿ ಪ್ರಶಂಸೆ ನೀಡಿದರೆ, ಇನ್ನಷ್ಟು ಸೇವೆ ನೀಡಲು ಸಾಧ್ಯವಿದೆ ಎಂದು ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಜೆಡಿಎಸ್ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ ಮಾತನಾಡಿ, ಯಕ್ಷಗಾನದ ಜತೆ ಆರೋಗ್ಯದ ಬಗ್ಗೆ ಕಾಳಜಿ ತೋರಿಸುವವರನ್ನು ಗೌರವಿಸುವ ಕಾರ್ಯ ನಡೆದಿದೆ. ಕಲೆ ರಕ್ಷಣೆಯು ಪರಂಪರೆ ಉಳಿಸಿಕೊಂಡು ಸಾಮಾಜಿಕ ಭದ್ರತೆಗೂ ಮುಂದಾಗಿರುವ ಸಂಘಟಕರ ಕಾರ್ಯ ಹೆಮ್ಮೆಯೆನಿಸುತ್ತಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಪಂ ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಹವ್ಯಾಸಿ, ವೃತ್ತಿ ಕಲಾವಿದರಿಂದ ಯಕ್ಷಗಾನದ ಜತೆ ಆರೋಗ್ಯರತ್ನ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಗ್ರಾಮೀಣ ಪ್ರದೇಶದಲ್ಲಿ ಮನೊರಂಜನೆಯ ಜತೆ ಕಲೆಗೆ ಪೊತ್ಸಾಹ ನೀಡಿದಾಗ ಮಾತ್ರ ಕಲೆ ಹಾಗೂ ಕಲಾವಿದರಿಂದ ಇನ್ನಷ್ಟು ಸಾಧನೆ ಮಾಡಲಿದ್ದಾರೆ ಎಂದರು.
ಡಾ. ಕೃಷ್ಣ ಜಿ., ಡಾ. ಆಶಿಕ್ ಕುಮಾರ್ ಹೆಗಡೆ, ಡಾ. ಪ್ರಕಾಶ್ ನಾಯ್ಕ ಹಾಗೂ ಡಾ. ವಿನಾಯಕ ಆರ್. ಭಟ್ ಅವರಿಗೆ ಆರೋಗ್ಯ ರಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಸಾಧಕರು ಅನಿಸಿಕೆ ವ್ಯಕ್ತಪಡಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷರಾದ ಶ್ರೀಕಾಂತ ಮೋಗೇರ, ಗೋವಿಂದ ಗೌಡ, ಸಾಮಾಜಿಕ ಕಾರ್ಯಕರ್ತರಾದ ಎಸ್.ಕೆ. ನಾಯ್ಕ, ರಮೇಶ ನಾಯ್ಕ, ಗ್ರಾಮದ ಪ್ರಮುಖರಾದ ಪರಮೇಶ್ವರ ಭಟ್, ಗಣಪತಿ ನಾಯ್ಕ, ಶ್ರೀಧರ ನಾಯ್ಕ, ಎಸ್ಡಿಎಂಸಿ ಅಧ್ಯಕ್ಷ ದಿವಾಕರ ನಾಯ್ಕ, ಸಂಘಟಕ ಬಾಲಚಂದ್ರ ನಾಯ್ಕ ಉಪಸ್ಥಿತರಿದ್ದರು. ಅಮೋಘ ಹೆಗಡೆ ಸ್ವಾಗತಿಸಿ, ಶ್ರೀಧರ ನಾಯ್ಕ ವಂದಿಸಿದರು. ಕೆ.ಎಸ್. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಗೀತಾ ಹೆಗಡೆ ಪ್ರಾರ್ಥಿಸಿದರು. ಕೃಷ್ಣಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮದ ಮೊದಲು ಪ್ರಸಿದ್ಧ ಕಲಾವಿದರಿಂದ ರಾಜ ವತ್ಸಾಖ್ಯ, ನಂತರ ಮೋಕ್ಷ ಸಂಗ್ರಾಮ ಯಕ್ಷಗಾನ ಪ್ರದರ್ಶನ ಕಲಾಭಿಮಾನಿಗಳ ಮನಸೆಳೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.