ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ ನವೆಂಬರ್ ಕನ್ನಡ ಮಾಸಾಚರಣೆಯ ಅಂಗವಾಗಿ ‘ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮದಡಿಯಲ್ಲಿ ಕೋಡು ಪಾಲಮೆತೋಟದ ಮನೆಯಲ್ಲಿ ಖ್ಯಾತ ಶನಿಕಥಾ ಭಾಗವತರಾದ ಶ್ಯಾಮರಾಯ ರಾವ್ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾಪು
ಶುದ್ಧ ಕನ್ನಡ ಭಾಷೆ ಬಳಸುವ ಏಕೈಕ ಕಲೆ ಯಕ್ಷಗಾನ. ಅಂತಹ ಕಲೆಯನ್ನು ಸಂಪ್ರದಾಯ ಬದ್ಧವಾಗಿ ಅರಗಿಸಿಕೊಂಡವರು ಕೋಡು ಪಾಲಮೆ ತೋಟದಮನೆ ಶ್ಯಾಮರಾಯ ರಾವ್ ಅವರು. ಭಾಗವತಿಕೆಯನ್ನು ವೃತ್ತಿಯಾಗಿ ತೆಗೆದುಕೊಳ್ಳದೆ ಭಾವನಾತ್ಮಕವಾಗಿ ಭಕ್ತಿಪ್ರಧಾನವಾಗಿ ಕಳೆದ ೪೦ ವರ್ಷಗಳಿಂದ ಸೇವಾ ರೂಪದಲ್ಲಿ ಸಮರ್ಪಿಸಿ ಸಂತೃಪ್ತಿ ಕಂಡಿದ್ದಾರೆ ಎಂದು ಶ್ರೀಕ್ಷೇತ್ರ ಬಂಟಕಲ್ಲು ದೇವಳದ ನಿಕಟಪೂರ್ವ ಆಡಳಿತ ಮೊಕ್ತೇಸರ ಹಾಗೂ ಬೆಳ್ಳೆ ಗ್ರಾ.ಪಂ. ಉಪಾಧ್ಯಕ್ಷ ಶಶಿಧರ ವಾಗ್ಲೆ ಹೇಳಿದರು.ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ ನವೆಂಬರ್ ಕನ್ನಡ ಮಾಸಾಚರಣೆಯ ಅಂಗವಾಗಿ ‘ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮದಡಿಯಲ್ಲಿ ಕೋಡು ಪಾಲಮೆತೋಟದ ಮನೆಯಲ್ಲಿ ಖ್ಯಾತ ಶನಿಕಥಾ ಭಾಗವತರಾದ ಶ್ಯಾಮರಾಯ ರಾವ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಮನೋಹರ್ ಪಿ. ಮತ್ತು ಕಸಾಪ ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ಅವರು ಶ್ಯಾಮರಾಯ ರಾವ್, ದೇವಕಿ ರಾವ್ ದಂಪತಿ ಸಮೇತರಾಗಿ ಸನ್ಮಾನಿಸಿ ಅಭಿನಂದಿಸಿದರು.ಭಾಗವತರು ತಮ್ಮ ೪೦ ವರ್ಷಗಳ ಅನುಭವವನ್ನು ವಿವರಿಸಿ ಶನಿಕಥಾ ಪ್ರಸಂಗದಲ್ಲಿ ಬರುವ ಕೆಲವು ಹಾಡುಗಳನ್ನು ಸಾಂದರ್ಭಿಕವಾಗಿ ಹಾಡಿದರು. ಕಾರ್ಯಕ್ರಮದಲ್ಲಿ ಮಜೂರು ಗ್ರಾ.ಪಂ. ಅಧ್ಯಕ್ಷ ಪ್ರಸಾದ್ ಶೆಟ್ಟಿ, ಪಾಣಾರ ಸಂಘ ಅಧ್ಯಕ್ಷ ಸುಧಾಕರ ಪಾಣಾರ ಬೆಳ್ಳೆ, ಕಸಾಪ ಜಿಲ್ಲಾ ಸಮಿತಿ ಸದಸ್ಯ ಸರಸಿಂಹಮೂರ್ತಿ ವೇದಿಕೆಯಲ್ಲಿದ್ದರು.ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ನಿರೂಪಿಸಿದರು. ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.