ಯಲಬುರ್ಗಾ: ತಾಲೂಕಿಗೆ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯನ್ನು ಪಟ್ಟಣದ ತಾಲೂಕಿನ ಸಂಗನಾಳ ಗ್ರಾಮದ ಬಳಿ ಸಕಲ ವಾಧ್ಯಮೇಳ ಕಲಾತಂಡಗಳು, ಮಹಿಳೆಯರು ಆರತಿ ತಟ್ಟೆಯಿಂದ ಬೆಳಗುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.
ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆಯು ಸೋಮವಾರ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮಕ್ಕೆ ಪ್ರವೇಶಿಸಿತು. ತಾಲೂಕಿನ ಮಾರ್ಗ ಮಧ್ಯೆದ ಸಂಗನಾಳ ಗ್ರಾಮದಲ್ಲಿ ರಥಯಾತ್ರೆ ಮುಂದೆ ಮಹಿಳೆಯರು ರಥದ ಮುಂದೆ ಕುಂಭ ಹೊತ್ತು ಸಾಗಿದರು. ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ರಥಯಾತ್ರೆಯನ್ನು ಅದ್ಧೂಯಾಗಿ ಸ್ವಾಗತಿಸಲಾಯಿತು.ಕನ್ನಡಪರ ಸಂಘಟನೆಗಳು, ನಾನಾ ಸಂಘಟನೆಗಳು, ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು ರಥಯಾತ್ರೆ ಸ್ವಾಗತಿಸಿದರು. ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಜಯಘೋಷ ಕೂಗುತ್ತಾ ಸಾಲಾಗಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ಬಳಿಕ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ ವೃತ್ತದ ಹತ್ತಿರ ಶಾಲಾ ಮಕ್ಕಳ ಸೇರಿದಂತೆ ನಾನಾ ಸಂಘಟನೆಗಳು, ತಾಲೂಕು ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧಿ ಓದಿದರು. ರಥಯಾತ್ರೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.ಬಳಿಕ ಸೋಮವಾರ ಸಂಜೆ ತಾಲೂಕಿನ ಕಲ್ಲೂರು ಗ್ರಾಮಕ್ಕೆ ತೆರಳಿತು. ಮಂಗಳವಾರ ಬೆಳಿಗ್ಗೆ ತಾಲೂಕಿನ ಮುಧೋಳ, ಕರಮುಡಿ, ಹಿರೇಮ್ಯಾಗೇರಿ, ಸಂಕನೂರ, ಬಳೂಟಗಿ ಹಾಗೂ ಫೆ.೭ರಿಂದ ೯ರವೆರೆಗೆ ತಾಲೂಕಿನ ನಾನಾ ಗ್ರಾಮಗಳಲ್ಲಿ ಸಂಚಾರ ನಡೆಸಿ ರಥಯಾತ್ರೆ ಸಂಚರಿಸಲಿದೆ.ತಹಸೀಲ್ದಾರ ಬಸವರಾಜ ತೆನ್ನಳ್ಳಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದೆ. ಪ್ರಪಂಚದ ಅತೀದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ ಭಾರತ. ಅನೇಕ ದೇಶಗಳ ಸಂವಿಧಾನವನ್ನು ಅಧ್ಯಯನ ನಡೆಸಿ, ದೇಶಕ್ಕೆ ಹೊಂದುವಂತೆ ಸಂವಿಧಾನ ರಚಿಸಿದ್ದಾರೆ ಎಂದರು.ತಾಪಂ ಇಒ ಸಂತೋಷ ಪಾಟೀಲ ಬಿರಾದಾರ ಮಾತನಾಡಿ, ಸಂವಿಧಾನ ಧ್ಯೇಯದಲ್ಲಿ ನಾವು ಬದುಕುತ್ತಿದ್ದೇವೆ. ಅದರ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ. ಜೊತೆಗೆ ಪ್ರತಿಯೊಬ್ಬರು ಸಂವಿಧಾನದ ಬಗ್ಗೆ ಅರಿತುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಸಮಾಜ ಕಲ್ಯಾಣಾಧಿಕಾರಿ ವಿ.ಕೆ. ಬಡಿಗೇರ, ಮುಖ್ಯಾಧಿಕಾರಿ ನಾಗೇಶ, ಗ್ರೇಡ್-೨ ನಾಗಪ್ಪ ಸಜ್ಜನ್, ಪ್ರಾಣೇಶ ಹಾದಿಮನಿ, ಲಿಂಗನಗೌಡ ಪಾಟೀಲ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಸ್.ವಿ. ಧರಣಾ, ಪಪಂ ಮಾಜಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸದಸ್ಯರಾದ ವಸಂತ ಭಾವಿಮನಿ, ಡಾ.ನಂದಿತಾ ದಾನರಡ್ಡಿ, ಕಳಕಪ್ಪ ತಳವಾರ, ರಿಯಾಜ್ ಖಾಜಿ, ಹನುಮಂತ ಭಜಂತ್ರಿ, ರೇವಣೆಪ್ಪ ಹಿರೇಕುರಬರ, ರಾಜಶೇಖರ ಶ್ಯಾಗೋಟಿ, ಕಳಕಪ್ಪ ತಳವಾರ, ಸ.ಶರಣಪ್ಪ ಪಾಟೀಲ, ಶರಣಪ್ಪ ಗಾಂಜಿ, ಸಿದ್ದಪ್ಪ ಕಟ್ಟಿಮನಿ, ಅಂದಪ್ಪ ಹಾಳಕೇರಿ, ಶಂಕರ ಜಕ್ಕಲಿ, ಗಣೇಶ ಕುಡಗುಂಟಿ, ನಾಗರಾಜ ಆಲೂರ, ರಮೇಶ ಚಲವಾದಿ, ವಿಜಯ ಜಕ್ಕಲಿ, ಶಿವು ಬಣಕಾರ, ಶರಣಗೌಡ ಪಾಟೀಲ, ನಾಗರಾಜ ತಲ್ಲೂರ, ಶಾಲಾ ಮಕ್ಕಳು, ಯುವಕರು ಇದ್ದರು.