ಯಲ್ಲಾಪುರ: ರಸ್ತೆ ದುರಸ್ತಿಗಾಗಿ ಮೂರು ಗಂಟೆ ರಸ್ತೆ ತಡೆ

KannadaprabhaNewsNetwork | Published : Feb 15, 2024 1:32 AM

ಸಾರಾಂಶ

ಹಿತ್ಲಳ್ಳಿ, ಹಾಸಣಗಿ, ಕಂಪ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಸ್ಥಳೀಯ ಚುನಾಯಿತ ಪ್ರತಿನಿಧಿಗಳೊಡಗೂಡಿ ಬೃಹತ್ ರಸ್ತೆ ತಡೆ ನಡೆಸಿದರು.

ಯಲ್ಲಾಪುರ:

ತಾಲೂಕಿನ ಮಂಚೀಕೇರಿಯ ಮಾಗೋಡು ಕತ್ರಿಯಲ್ಲಿ ಮಂಚೀಕೇರಿ-ಹರಿಗದ್ದೆ-ಹಿತ್ಲಳ್ಳಿ ಸಂಪರ್ಕಿಸುವ ರಸ್ತೆ ಕಾಮಗಾರಿ ಕುರಿತಾದ ಅಧಿಕಾರಿಗಳ ನಿರ್ಲಕ್ಷ್ಯ ವಿರೋಧಿಸಿ ಬುಧವಾರ ಹಿತ್ಲಳ್ಳಿ, ಹಾಸಣಗಿ, ಕಂಪ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಸ್ಥಳೀಯ ಚುನಾಯಿತ ಪ್ರತಿನಿಧಿಗಳೊಡಗೂಡಿ ಬೃಹತ್ ರಸ್ತೆ ತಡೆ ನಡೆಸಿದರು.ಸುದ್ದಿ ತಿಳಿದ ಶಿರಸಿಯ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಮನವೊಲಿಸಿ, ರಸ್ತೆಯನ್ನು ಶೀಘ್ರವಾಗಿ ಆರಂಭಿಸುವ ಸಮಜಾಯಿಷಿ ನೀಡಿದರು. ಇದನ್ನೊಪ್ಪದ ಸಾರ್ವಜನಿಕರು ತಮ್ಮ ಪ್ರತಿಭಟನೆ ಮುಂದುವರಿಸಿ, ಗುರುವಾರದಿಂದಲೇ ರಸ್ತೆ ದುರಸ್ತಿ ಕಾರ್ಯ ಆರಂಭಗೊಳಿಸುವಂತೆ ಆಗ್ರಹಿಸಿದರು. ಈ ವೇಳೆಗೆ ಸ್ಥಳದಲ್ಲಿದ್ದ ತಹಸೀಲ್ದಾರ್‌ ಎಂ. ಗುರುರಾಜ ಮಲ್ಲಿಕಾರ್ಜುನ ಮತ್ತು ಯಲ್ಲಾಪುರದ ಪಿಡಬ್ಲ್ಯೂಡಿ ಅಭಿಯಂತರ ವಿ.ಎಂ. ಭಟ್ಟ ಅವರೊಂದಿಗೆ ಚರ್ಚಿಸಿದ ನಂತರ ಫೆ. ೨೫ರೊಳಗಾಗಿ ರಸ್ತೆ ದುರಸ್ತಿ ಕಾರ್ಯ ಆರಂಭಿಸುವ ಭರವಸೆ ನೀಡಿದರು. ಬಳಿಕ ಸಾರ್ವಜನಿಕರು ತಮ್ಮ ಪ್ರತಿಭಟನೆ ಹಿಂತೆಗೆದುಕೊಂಡರು. ಭರವಸೆಯಂತೆ ಕಾಮಗಾರಿ ಆರಂಭಗೊಳ್ಳದಿದ್ದರೆ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.ಹಾಸಣಗಿ ಗ್ರಾಪಂ ಸದಸ್ಯ ಎಂ.ಕೆ. ಭಟ್ಟ ಯಡಳ್ಳಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಸಿಪಿಐ ರಮೇಶ ಹಾನಾಪುರ, ಪಿಎಸ್‌ಐ ಸಿದ್ದು ಗುಡಿ ನೇತೃತ್ವದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಉಪ ತಹಸೀಲ್ದಾರ್‌ ಎಚ್. ರಾಘವೇಂದ್ರ, ಕಾಮಗಾರಿ ಅಭಿಯಂತರ ಸುಧೀರ ಸಿದ್ದಾಪುರ, ಹಿತ್ಲಳ್ಳಿ ಗ್ರಾಪಂ ಅಧ್ಯಕ್ಷ ಸತ್ಯನಾರಾಯಣ ಹೆಗಡೆ, ಉಪಾಧ್ಯಕ್ಷ ಗೋಪಾಲ ಶಾಸ್ತ್ರಿ, ಸದಸ್ಯ ಪ್ರಸನ್ನ ಭಟ್ಟ, ಮಹಾಬಲೇಶ್ವರ ಭಟ್ಟ ಗುಂಡಾನಜಡ್ಡಿ, ಎಸ್.ಎಲ್. ಶೇಟ್ ಪುರದಮನೆ, ನಾಗೇಂದ್ರ ಪತ್ರೇಕರ, ಪ್ರಶಾಂತ ಶಾಸ್ತ್ರಿ, ಪವನಕುಮಾರ ದೇವಡಿಗ, ಬಿ.ಕೆ. ಭಟ್ಟ, ಜಗದೀಶ ಶೇಟ್, ದಿಲೀಪ್ ರೋಖಡೆ ಸೇರಿದಂತೆ 500ಕ್ಕೂ ಅಧಿಕ ಸಂಖ್ಯೆಯ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆ ಹಿಂತೆಗೆದುಕೊಂಡ ನಂತರ ಮಂಜೂರಾಗಿದ್ದರೂ ಆರಂಭಗೊಳ್ಳದ ಕೆಟ್ಟುಹೋಗಿರುವ ರಸ್ತೆಯ ವೀಕ್ಷಣೆಗೆ ತಹಸೀಲ್ದಾರ್‌ ಎಂ. ಗುರುರಾಜ, ಇ.ಇ. ಮಲ್ಲಿಕಾರ್ಜುನ, ಎಇಇ ವಿ.ಎಂ. ಭಟ್ಟ ತೆರಳಿದರು.ರಸ್ತೆ ತಡೆ ಕಾರ್ಯಕ್ರಮದ ವೇಳೆ ಯಲ್ಲಾಪುರದಿಂದ ಶಿರಸಿಗೆ ತೆರಳುವ ವಾಹನಗಳಿಗೆ ಕೆಟ್ಟುಹೋಗಿರುವ ಇದೇ ರಸ್ತೆಯ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂತೆಯೇ ಶಿರಸಿಯಿಂದ ಯಲ್ಲಾಪುರದ ಕಡೆ ಬರುವ ಎಲ್ಲ ವಾಹನಗಳಿಗೂ ಇದೇ ವ್ಯವಸ್ಥೆ ಮಾಡಲಾಗಿತ್ತು. ಆದರೂ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಸೇರಿದಂತೆ ವಿವಿಧ ವಾಹನಗಳ ಸಂಚಾರಕ್ಕೆ ತುಸು ವ್ಯತ್ಯಯ ಉಂಟಾಯಿತು. ೩ ಗಂಟೆ ನಡೆದ ಶಾಂತಿಯುತ ಪ್ರತಿಭಟನೆಯಲ್ಲಿ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ಪಕ್ಷಾತೀತವಾಗಿ ಪಾಲ್ಗೊಂಡಿದ್ದರು.

Share this article