ಶಿಗ್ಗಾಂವಿ: ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಬೆಂಬಲ ವ್ಯಕ್ತಪಡಿಸಿದ ಕಾರಣ ಯಾಸೀರ್ ಖಾನ್ ಪಠಾಣ ಗೆಲವು ಶತಸಿದ್ಧ ಎಂದು ಸಚಿವ ಜಮೀರ ಅಹ್ಮದ ಖಾನ್ ಹೇಳಿದರು.
ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ. ನಮ್ಮ ಸರ್ಕಾರ ಇರುವ ವರೆಗೂ ಗ್ಯಾರಂಟಿ ಕೊಡುತ್ತೇವೆ. ಅಲ್ಪಸಂಖ್ಯಾತರು ಬೊಮ್ಮಾಯಿ ಅವರಿಗೆ ಮತ ನೀಡಿದ್ದಾರೆ. ಆದರೆ, ಅವರು ನಮ್ಮ ಮಕ್ಕಳ ಶಿಕ್ಷಣ ನಿಧಿಯನ್ನು ರದ್ದು ಮಾಡಿದ್ದಾರೆ. ಇದರಿಂದ ಬಹಳ ಬೇಸರವಾಗಿದೆ ಎಂದರು.
ಅಭ್ಯರ್ಥಿ ಶಾಸಕ ಯಾಸೀರ್ ಖಾನ್ ಪಠಾಣ ಮಾತನಾಡಿ, ಕಳೆದ ೨೦ ವರ್ಷಗಳಿಂದ ನಾನು ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಸೇವೆ ಸಲ್ಲಿಸಿದ್ದೇನೆ. ನನ್ನಿಂದ ಅಜ್ಜಂಪೀರ ಖಾದ್ರಿ ಅವರಿಗೆ ಏನಾದರೂ ತಪ್ಪಾಗಿದ್ದರೆ ಕ್ಷಮಿಸಬೇಕು. ನಮ್ಮಲ್ಲಿರುವ ಭಿನ್ನಾಭಿಪ್ರಾಯ ಪರಿಹರಿಸಿಕೊಳೋಣ. ಒಂದಾಗಿ ಉಪಚುನಾವಣೆ ಎದುರಿಸೋಣ ಎಂದರು.ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಮಾತನಾಡಿ, ರೈತರ, ಮಹಿಳೆಯರ, ಯುವಕರ, ದಲಿತರ ಭವಿಷ್ಯದ ಚುನಾವಣೆ ಇದಾಗಿದೆ. ಪಕ್ಷದ ಸಲುವಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಿ ಸಿದ್ದರಾಮಯ್ಯನವರ ಕೈ ಬಲಪಡಿಸೋಣ ಎಂದರು.
ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ನಾಸೀರ ಅಹ್ಮದ ಮಾತನಾಡಿ, ಶಿಗ್ಗಾಂವಿ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುತ್ತದೆ. ಸಿದ್ದರಾಮಯ್ಯ ಅವರ ಮೇಲೆ ಬೇರೆ ಬೇರೆ ಹಗರಣಗಳ ಆರೋಪ ಮಾಡಿ ಅಪವಾದ ಎಸಗುತ್ತಿದ್ದಾರೆ. ನಮ್ಮದು ಕಾಂಗ್ರೆಸ್ ಕುಟುಂಬ, ೨೪ ತಾಸು ನಿರಂತರವಾಗಿ ಚುನಾವಣೆಯಲ್ಲಿ ಅಜ್ಜಂಪೀರ ಖಾದ್ರಿ ಮತಯಾಚಿಸುತ್ತಾರೆ ಎಂದರು.ಶಾಸಕ ಶ್ರೀನಿವಾಸ ಮಾನೆ, ಪ್ರೇಮಾ ಪಾಟೀಲ, ಅಲ್ತಾಫ್ ಅಹ್ಮದ ಕಿತ್ತೂರ, ಸುಲೇಮಾನ ಖಾಜೇಖಾನವರ, ಮಜೀದ ಮಾಳಗಿಮನಿ, ಗುಡ್ಡಪ್ಪ ಜಲದಿ, ಅಣ್ಣಪ್ಪ ಲಮಾಣಿ, ಇಸ್ಮಾಯಿಲ್ ತಮಟಗಾರ, ವಸಂತಾ ಬಾಗೂರ, ಗೌಸ್‌ಖಾನ್ ಮುನಸಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.