ಕನ್ನಡಪ್ರಭ ವಾರ್ತೆ ಉಡುಪಿ
ಕೇಂದ್ರ ಸರ್ಕಾರದ ರೈಲ್ವೇ ಹಾಗೂ ಜಲ ಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭೇಟಿಯಾಗಿ ರೈಲ್ವೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಮನವಿ ಮಾಡಿದರು.ಉಡುಪಿ ಜಿಲ್ಲೆಯ ಜನತೆಯ ಬಹುದಿನದ ಬೇಡಿಕೆಯಾದ ಮಡಗಾಂವ್ - ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಸ್ಲೀಪರ್ ಕ್ಲಾಸಿನೊಂದಿಗೆ ಬೆಂಗಳೂರಿಗೆ - ಮುಂಬೈಗೆ ವಿಸ್ತರಿಸಬೇಕು. ಅಂಬಾಗಿಲು, ಪೆರಂಪಳ್ಳಿ ಮತ್ತು ಚಾಂತಾರು ರೈಲ್ವೆ ಮೇಲ್ಸೇತುವೆಗಳನ್ನು ರಸ್ತೆಯ ಅಗಲೀಕರಣಕ್ಕೆ ಪೂರಕವಾಗಿ ಅಗಲಗೊಳಿಸಬೇಕು. ಇಂದ್ರಾಳಿ ರೈಲ್ವೇ ಸೇತುವೆ ಬಳಿ ರಸ್ತೆ ದಾಟುವ ಪಾದಚಾರಿಗಳಿಗಾಗಿ ಫುಟ್ ಬ್ರಿಡ್ಜ್ ನಿರ್ಮಿಸಬೇಕು, ಬೆಂಗಳೂರು ಕಾರವಾರ ರೈಲಿನ ಬೆಂಗಳೂರಿನಿಂದ ಹೊರಡುವ ಸಮಯವನ್ನು ರಾತ್ರಿ 8.30ಕ್ಕೆ ನಿಗದಿ ಮಾಡಿ ಸಂಚಾರ ಅವಧಿಯನ್ನು ಕಡಿತಗೊಳಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು, ಕರಾವಳಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಶಿರಾಡಿ ಘಾಟ್ ಅಗಲೀಕರಣ ಸಂದರ್ಭದಲ್ಲಿ ಮೆಟ್ರೋ ಮಾದರಿಯಲ್ಲಿ ಹೊಸ ರೈಲ್ವೇ ಹಳಿಗಳ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಕೆ ಮಾಡಬೇಕು ಎಂದು ಶಾಸಕರು ಮನವಿ ಮಾಡಿದರು.ಅಮೃತ ಯೋಜನೆಯಡಿ ಆಯ್ಕೆಯಾದ ಉಡುಪಿ ಇಂದ್ರಾಳಿ ರೈಲ್ವೇ ನಿಲ್ದಾಣವನ್ನು ಶೀಘ್ರವಾಗಿ ಮೂಲ ಸೌಕರ್ಯಗಳ ಮೇಲ್ದರ್ಜೆಗೇರಿಸಲು ಮತ್ತು ಶಿಕ್ಷಣ, ಧಾರ್ಮಿಕ, ಪ್ರವಾಸೋದ್ಯಮ, ಮೀನುಗಾರಿಕೆ ಕಾರಣಗಳಿಗಾಗಿ ದಿನಂಪ್ರತಿ ಸಾವಿರಾರು ಪ್ರಯಾಣಿಕರು ಅವಲಂಬಿಸಿರುವ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಹೆಚ್ಚುವರಿ ಭದ್ರತೆಗೆ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆಯೂ ಸಚಿವರಿಗೆ ಮನವಿ ಸಲ್ಲಿಸಿದರು.ಮನವಿಗೆ ಸ್ಪಂದಿಸಿದ ಸಚಿವ ಸೋಮಣ್ಣ, ಉಡುಪಿ ಜಿಲ್ಲೆಯ ರೈಲ್ವೇ ಸಂಬಂಧಿಸಿದ ಬೇಡಿಕೆಗಳ ಮನವಿಯನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಇಂದ್ರಾಳಿ ರೈಲ್ವೇ ನಿಲ್ದಾಣದ ಮೂಲಸೌಕರ್ಯ ಅಭಿವೃದ್ಧಿಗೆ ಶೀಘ್ರ ಕ್ರಮ ವಹಿಸುವ ಭರವಸೆ ನೀಡಿದರು.ಈ ಸಂದರ್ಭ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಗ್ರಾಮಾಂತರ ಅಧ್ಯಕ್ಷ ರಾಜೀವ್ ಕುಲಾಲ್, ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಕಪ್ಪೆಟ್ಟು, ಮಹಿಳಾ ಮೋರ್ಚಾದ ನಿಕಟಪೂರ್ವ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಪ್ರಮುಖರಾದ ಜಯಕರ ಸನಿಲ್, ಆನಂದ ಸುವರ್ಣ, ಸಂತೋಷ್ ಆಚಾರ್ಯ, ಗುರುರಾಜ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.