ಕನ್ನಡಪ್ರಭ ವಾರ್ತೆ ಉಡುಪಿ
ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆಯ ಐತಿಹಾಸಿಕ ಕ್ಷಣವನ್ನು ಪ್ರತಿಮನೆಗಳಲ್ಲಿ ಆಚರಿಸಲು ಸಹಾಯವಾಗುವಂತೆ ಜ.22ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.ಜ.22ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶ್ರೀ ರಾಮ ದೇವರ ವಿಗ್ರಹಕ್ಕೆ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮಕ್ಕೆ ಇಡೀ ಜಗತ್ತು ಸಾಕ್ಷಿಯಾಗಲಿದೆ. ಈ ದಿನವನ್ನು ಮನೆಮನೆಗಳಲ್ಲಿ ದೀಪಾವಳಿಯಂತೆ ಆಚರಿಸಲು ಮೋದಿ ಅವರು ಕರೆ ನೀಡಿದ್ದು, ಅಂದು ದೇಶಾದ್ಯಂತ ದೇವಸ್ಥಾನ, ಮಂದಿರ, ಸಂಘ ಸಂಸ್ಥೆಗಳಲ್ಲಿ ವಿಶೇಷ ಪೂಜೆ, ಭಜನೆ, ಸಂಕೀರ್ತನೆ, ಅನ್ನ ಸಂತರ್ಪಣೆಯ ಮೂಲಕ ಅತ್ಯಂತ ಸಂಭ್ರಮ ಸಡಗರದಿಂದ ಅಚರಿಸಲುದ್ದೇಶಿಸಲಾಗಿದೆ. ಆದ್ದರಿಂದ ಅಂದು ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಪವಿತ್ರ ದಿನವನ್ನು ಸಂಭ್ರಮದಿಂದ ಆಚರಿಸಲು ರಾಜ್ಯದ ಜನತೆಗೆ ಅವಕಾಶ ಕಲ್ಪಿಸಬೇಕು ಎಂದು ಪತ್ರ ಬರೆದು ಮನವಿ ಮಾಡಿದ್ದಾರೆ.
* ಉಡುಪಿಯಲ್ಲಿ ರಾಮೋತ್ಸವಸಮಸ್ತ ಹಿಂದೂಗಳ ಶತಮಾನದ ಕನಸು ಶ್ರೀ ರಾಮಮಂದಿರದ ಲೋಕಾರ್ಪಣೆಯ ಐತಿಹಾಸಿಕ ದಿನದಂದು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರಾಗಿರುವ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರ ಆಶಯದಂತೆ, ಉಡುಪಿಯ ಜನತೆ ತಮ್ಮ ಮನೆ, ಕಚೇರಿ, ಕಟ್ಟಡಗಳಿಗೆ ದೀಪಾಲಂಕಾರ ಮಾಡಿ ಜ್ಯೋತಿಯನ್ನು ಬೆಳಗುವ ಮೂಲಕ ರಾಮೋತ್ಸವವವ್ನು ಆಚರಿಸಬೇಕು ಎಂದು ಯಶ್ಪಾಲ್ ಸುವರ್ಣ ಜನತೆಯಲ್ಲಿ ಮನವಿ ಮಾಡಿದ್ದಾರೆ.
* 10 ದಿನಗಳ ದೀಪೋತ್ಸವಜ.14ರಂದು ಮಕರ ಸಂಕ್ರಾತಿಯ ಶುಭದಿನದಿಂದ ಆರಂಭಗೊಂಡು, ಜ.18ರಂದು ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥ ಪರ್ಯಾಯ ಮಹೋತ್ಸವ ಹಾಗೂ ಜ.22ರಂದು ನಡೆಯುವ ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆ ಸಮಾರಂಭದ ಪ್ರಯುಕ್ತ, ಜ.25ರ ವರೆಗೆ ಒಟ್ಟು 10 ದಿನಗಳ ಕಾಲ ಉಡುಪಿ ನಗರದಲ್ಲಿ ದೀಪಾಲಂಕಾರ ಮಾಡುವಂತೆಯೂ ಯಶ್ಪಾಲ್ ಜನತೆಗೆ ಮನವಿ ಮಾಡಿದ್ದಾರೆ.
* ಕುಣಿತ ಭಜನೋತ್ಸವಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯ ಪ್ರಯುಕ್ತ ಜ.22ರಂದು ಶಾಸಕ ಯಶ್ಪಾಲ್ ಸುವರ್ಣ ಅವರ ಪ್ರಾಯೋಜಕತ್ವದಲ್ಲಿ ಶ್ರೀ ಕೃಷ್ಣಮಠದಲ್ಲಿ ವಿಶೇಷ ಹಾಲು ಪಾಯಸ ಸೇವೆ ಹಾಗೂ ಕುಣಿತ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾದ್ಯಂತದ ವಿವಿಧ ತಂಡಗಳು ಕುಣಿತ ಭಜನೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.