ಉಡುಪಿ: ಸರ್ಕಾರಿ ನೌಕರರು ದುಡಿಯುವ ಸಂದರ್ಭದಲ್ಲಿ ಹೆಚ್ಚಿನ ಒತ್ತಡ ಅನುಭವಿಸಬೇಕಾಗುತ್ತದೆ. ಆದ್ದರಿಂದ ದಿನನಿತ್ಯ ಕ್ರೀಡೆ, ಯೋಗ ಹಾಗೂ ವ್ಯಾಯಾಮದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಒತ್ತಡ ನಿವಾರಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘವು ಸರ್ಕಾರಿ ನೌಕರರಿಗೆ ಆಯೋಜಿಸಿರುವ ಕ್ರೀಡಾಕೂಟ ಅರ್ಥಪೂರ್ಣ ಎಂದು ಶಾಸಕ ಯಶ್‌ಪಾಲ್ ಎ. ಸುವರ್ಣ ಹೇಳಿದ್ದಾರೆ.
ಸರ್ಕಾರಿ ನೌಕರರ ಸಂಘವು ಸದಸ್ಯರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕೆಲಸಮಾಡುತ್ತಿದ್ದು ಕ್ರೀಡಾ ಕಾರ್ಯಕ್ರಮ ಅಭೂತಪೂರ್ವವಾಗಿ ಸಂಘಟಿಸಿದೆ ಎಂದು ಸಂಘದ ಪ್ರಯತ್ನವನ್ನು ಅಭಿನಂದಿಸಿದ ಅವರು, ಸಂಘದ ಬಹುಕಾಲದ ಸ್ವಂತ ಕಟ್ಟಡದ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದರು.
ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಮತ್ತು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಶುಭ ಹಾರೈಸಿದರು. ಸರ್ಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿಗಳಾದ ದಿನಕರ್ ನಾಯ್ಕ್ ಹಾಗೂ ದೀಪಾ ಕ್ರೀಡಾ ಪ್ರತಿಜ್ಷಾ ವಿಧಿ ಬೋಧಿಸಿದರು.ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಆನಂದ ಜತ್ತಣ್ಣ, ಜಿಲ್ಲಾ ಖಜಾಂಚಿ ದಯಾನಂದ ಬೆನ್ನೂರು, ಪ್ರಧಾನ ಕಾರ್ಯದರ್ಶಿ ರಾಜೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಶೆಟ್ಟಿ ಮತ್ತಿತರರಿದ್ದರು.
ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಹಾಗೂ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ ನಿರೂಪಿಸಿದರು.