ರಾಜ್ಯ ಕಾಂಗ್ರೆಸ್ಸಲ್ಲಿ ಮತ್ತೆ ಭುಗಿಲೆದ್ದ ಪೂರ್ಣಾವಧಿ ಮುಖ್ಯಮಂತ್ರಿ ವಿವಾದ!

KannadaprabhaNewsNetwork | Updated : Jan 18 2024, 04:32 PM IST

ಸಾರಾಂಶ

ಹೆಚ್ಚು ಎಂಪಿ ಸೀಟು ಗೆದ್ದರೆ ಸಿದ್ದು 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದು ಯತೀಂದ್ರ ಹೇಳಿಕೆ ನೀಡಿರುವುದು ಭಾರಿ ಸಂಚಲನ ಮೂಡಿಸಿದೆ. ಇದರ ತೀರ್ಮಾನ ಮಾಡೋದು ವರಿಷ್ಠರು ಎಂದು ಸಿಎಂ ಸಿದ್ದರಾಮಯ್ಯ ಸಮಜಾಯಿಷಿ ನೀಡಿದ್ದಾರೆ. 

ಕನ್ನಡಪ್ರಭ ವಾರ್ತೆ ಬೆಂಗಳೂರು

ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸಂವೇದನಾಶೀಲ ಹಾಗೂ ಉದ್ಭವ ಆಗುತ್ತಿರುವ ನಾಯಕ. ಅವರು ತಮಗೆ ಶಕ್ತಿ ನೀಡುವಂತೆ ಜನರನ್ನು ಕೇಳುವುದು ಸ್ವಾಭಾವಿಕ. ಆ ಹೇಳಿಕೆಯನ್ನು ತಿರುಚುವ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಇನ್ನು ಆಸೆ ಪಡುವುದು, ಜನರಿಗೆ ಶಕ್ತಿ ನೀಡುವಂತೆ ಕೇಳುವುದು ತಪ್ಪಲ್ಲ. ನಮ್ಮ ಭಾಗದಲ್ಲಿ ನಾನು ಕೂಡ ಶಕ್ತಿ ನೀಡುವಂತೆ ಜನರ ಬಳಿ ಕೇಳುತ್ತೇನೆ. ಅದನ್ನು ತಿರುಚುವ ಅಗತ್ಯವಿಲ್ಲ. ಯತೀಂದ್ರ ಸಂವೇದನಾಶೀಲ ನಾಯಕ. ಉದ್ಭವ ಆಗುತ್ತಿರುವ ನಾಯಕ. ನಾವು ಅವರಿಗೆ ಪ್ರೋತ್ಸಾಹ ನೀಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ಆಗಾಗ್ಗೆ ಮುನ್ನೆಲೆಗೆ ಚರ್ಚೆಗೆ ಬರುವ ‘ಪೂರ್ಣಾವಧಿ ಸಿಎಂ’ ವಿವಾದ ಮತ್ತೆ ಭುಗಿಲೆದ್ದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಹೆಚ್ಚು ಸ್ಥಾನ ಗಳಿಸಿದರೆ ಮುಂದಿನ ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು, ರಾಜ್ಯದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಗ್ಗೆ ಪಕ್ಷದ ಹೈಕಮಾಂಡ್‌ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸುವುದು ಅಥವಾ ಬಿಡುವುದು ಹೈಕಮಾಂಡ್‌ ನಿರ್ಧಾರ ಮಾಡುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. 

ಇದೇ ವೇಳೆ, ಯತೀಂದ್ರ ಹೇಳಿಕೆಗೆ ಹೈಕಮಾಂಡ್ ಉತ್ತರ ಕೊಡುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಯತೀಂದ್ರ ಹೇಳಿಕೆ ವೈಯಕ್ತಿಕ. ಆ ಬಗ್ಗೆ ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ಲಕ್ಷ್ಮಣ ಸವದಿ ಕಲಬುರಗಿಯಲ್ಲಿ ಹೇಳಿದ್ದಾರೆ.

ಯತೀಂದ್ರ ಹೇಳಿದ್ದೇನು?
ಹಾಸನ ಜಿಲ್ಲೆ ಹೊಳೇನರಸೀಪುರ ತಾಲೂಕಿನ ಅಣ್ಣೆಚಾಕನಹಳ್ಳಿಯಲ್ಲಿ ಬುಧವಾರ ನಡೆದ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಯತೀಂದ್ರ, ಸಿದ್ದರಾಮಯ್ಯ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. 

ಹೆಚ್ಚು ಸ್ಥಾನ ಗೆದ್ದರೆ ಯಾವುದೇ ಅಡೆತಡೆ ಇಲ್ಲದೆ ಮುಂದಿನ 5 ವರ್ಷಗಳ ಕಾಲ ಅವರೇ ಸಿಎಂ ಆಗಿರುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಬಂದರೆ ಅವರಿಗೆ ನೈತಿಕವಾಗಿ ಮತ್ತಷ್ಟು ಬೆಂಬಲ ಸಿಗಲಿದೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದಲ್ಲಿ ಪೂರ್ಣಾವಧಿ ಮುಖ್ಯಮಂತ್ರಿ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ. ಈ ವಿಚಾರದಲ್ಲಿ ನಾನಾಗಲಿ, ನನ್ನ ಮಗನಾಗಲಿ ಏನೇ ಹೇಳಿದರೂ ಪಕ್ಷದ ವರಿಷ್ಠರೇ ತೀರ್ಮಾನ ಮಾಡುತ್ತಾರೆ ಎಂದರು.

ಈ ಮಧ್ಯೆ, ಉಡುಪಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿ ಎಂದು ಯತೀಂದ್ರ ಯಾವ ಕಾರಣಕ್ಕೆ ಹೇಳಿದ್ದಾರೋ ಗೊತ್ತಿಲ್ಲ. 

ಯತೀಂದ್ರ ಹೇಳಿಕೆಗೆ ಹೈಕಮಾಂಡ್ ಉತ್ತರ ಕೊಡುತ್ತದೆ. ಚುನಾವಣೆಯಲ್ಲಿ ಅತ್ಯಧಿಕ ಸೀಟು ಗಳಿಸುವುದೇ ನಮ್ಮ ಗುರಿ. ಲೋಕಸಭೆಯಲ್ಲಿ ಎಷ್ಟು ಸ್ಥಾನ ಗೆಲ್ಲಬೇಕು ಎಂದು ಹೈಕಮಾಂಡ್ ನಮಗೆ ಟಾರ್ಗೆಟ್ ಕೊಡುವ ಅವಶ್ಯಕತೆಯೇ ಇಲ್ಲ, ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ನಮ್ಮ ಜವಾಬ್ದಾರಿ ಎಂದರು.

ಲೋಕಸಭೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆದ್ದರೆ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ಸರ್ಕಾರ ಐದು ವರ್ಷ ಬಲಿಷ್ಠವಾಗಿರುತ್ತದೆ. ಸಿದ್ದರಾಮಯ್ಯ ಈಗ ನಮ್ಮ ಮುಖ್ಯಮಂತ್ರಿಗಳು. ಅವರು ಮುಖ್ಯಮಂತ್ರಿಯಾಗಿ, ನಾನು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷನಾಗಿ ಇಬ್ಬರೂ ಒಟ್ಟಿಗೆ ಚುನಾವಣೆ ನಡೆಸುತ್ತೇವೆ. ಅವರ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ ಅನುಮಾನವಿಲ್ಲ ಎಂದು ಸ್ಪಷ್ಟಪಡಿಸಿದರು.

Share this article