ಶಿವಮೊಗ್ಗ: ಎಲ್ಲರೂ ಬಣ್ಣ ಹಚ್ಚಿಕೊಂಡು ನಾಟಕ ಮಾಡಿದರೆ ಯತ್ನಾಳ್ ಅವರು ಬಣ್ಣ ಹಚ್ಚಿಕೊಳ್ಳದೆ ನಾಟಕ ಮಾಡುವ ವ್ಯಕ್ತಿ. ಸಮಯ ಸಂದರ್ಭಕ್ಕೆ ತಕ್ಕಂತೆ ಆ್ಯಕ್ಟಿಂಗ್ ಮಾಡುತ್ತಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದರು.
ಬೆಂಗಳೂರಿನಲ್ಲಿ ಅಡ್ರೆಸ್ ಇಲ್ಲದವರ ಜೊತೆ ಯತ್ನಾಳ್ ವೀರಶೈವ ಲಿಂಗಾಯಿತ ಸಭೆ ನಡೆಸಿದ್ದಾರೆ. 10 ಲಕ್ಷ ಜನ ಸೇರುತ್ತಾರೆ ಎಂದು ಸುಳ್ಳು ಹೇಳುತ್ತಾರೆ. ನಾವ್ಯಾರು ಜಾತಿವಾದಿಗಳಲ್ಲ. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ವೀರಶೈವ ಲಿಂಗಾಯತರು ಬಿಜೆಪಿಯಿಂದ ದೂರವಾಗಿದ್ದರು. ನಾವು ಈಗಾಗಲೇ ರಾಜ್ಯದ 17 ಜಿಲ್ಲೆಗಳಲ್ಲಿ ಸಭೆ ನಡೆಸಿದ್ದು, ಎಲ್ಲಾ ಕಡೆ ಎರಡುವರೆ ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಇನ್ನೂ 10 ರಿಂದ 12 ಜಿಲ್ಲೆಗಳ ಸಭೆ ಬಾಕಿ ಇದ್ದು ನಂತರ ಸಮಾವೇಶ ನಡೆಸುತ್ತೇವೆ ಎಂದು ತಿಳಿಸಿದರು.
ನಾವು ಸಮಾವೇಶ ಮಾಡುತ್ತೇವೆ ಎಂದಾಗ ಯತ್ನಾಳ್ ಅವರು ದಾವಣಗೆರೆನಲ್ಲಿ 10 ಲಕ್ಷ ವೀರಶೈವ ಲಿಂಗಾಯತರ ಸಭೆ ನಡೆಸುತ್ತವೆ ಎಂದಿದ್ದರು. ಈಗ ಹಿಂದೂ ಮಹಾಸಂಗಮ ನಡೆಸುತ್ತೇವೆ ಎಂದು ಹೇಳುತ್ತಿದ್ದಾರೆ. ಅವರಿಗೆ ನಾಚಿಕೆ ಆಗಬೇಕು, ಬಿಜಾಪುರದ ಬಹಳಷ್ಟು ನಾಯಕರು ಈ ಮನುಷ್ಯನ ಭ್ರಷ್ಟಾಚಾರದ ದಾಖಲೆಗಳನ್ನು ನನಗೆ ಕೊಟ್ಟಿದ್ದಾರೆ. ಯತ್ನಾಳ್ ರದು ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್. ನನಗೆ ಲೀಡರ್ ಶಿಪ್ ಕೊಡದೆ ಇದ್ದರೆ ಸೋಲಿಸ್ತೀವಿ ಅಂತ ಹೇಳಿ 2024ರಲ್ಲಿ ಅದೇ ಮನುಷ್ಯನಿಗೆ ಲೀಡರ್ ಶಿಪ್ ಕೊಟ್ರೆ 12 ಸಾವಿರ ಮತಗಳು ಬಿಜೆಪಿ ಅಭ್ಯರ್ಥಿಗೆ ಕಡಿಮೆ ಬಂದಿತ್ತು. 2019ರಲ್ಲಿ 10,000 ಲೀಡಿಂಗ್ ಇದ್ದ ಕಡೆ ಈ ಬಾರಿ 12,000 ಮತಗಳು ಕಡಿಮೆ ಬರಲು ಕಾರಣ ಅಡ್ಜಸ್ಟ್ಮೆಂಟ್ ತಾನೇ ಎಂದು ಹರಿಹಾಯ್ದರು.ಯತ್ನಾಳ್ ರದು ನಕಲಿ ಹಿಂದುತ್ವ. ಬಿಜೆಪಿ ಹೈಕಮಾಂಡ್ ಬಗ್ಗೆ ನಮಗೆ ಗೌರವವಿದೆ. ನಮ್ಮ ಹೈಕಮಾಂಡ್ ದುರ್ಬಲವಾಗಿಲ್ಲ ಸ್ಟ್ರಾಂಗ್ ಆಗಿದೆ. ಯತ್ನಾಳ್ ನಂತಹವರು ನನಗೆ ಕೇಂದ್ರದಲ್ಲಿ ನಾಯಕರ ಬೆಂಬಲವಿದೆ ಎಂದು ಹೇಳುತ್ತಾರೆ. ನಿಮಗೆ ಯಾವ ನಾಯಕರು ಕೊಟ್ಟಿದ್ದಾರೆ ? ಪಕ್ಷದ ಮಾನ ಮರ್ಯಾದೆ ಹರಾಜು ಹಾಕಬೇಡಿ. ಹೈಕಮಾಂಡ್‌ಗೆ ತಪ್ಪು ಮಾಹಿತಿ ಮತ್ತು ಸುಳ್ಳು ಮಾಹಿತಿ ಕೊಡುತ್ತಿದ್ದಾರೆ. ನಿನಗೆ ಬೆಂಬಲ ಕೊಡುತ್ತಿರುವವರು ಯಾರು ? ಇವರನ್ನು ಕೆಲವರು ರಕ್ಷಣೆ ಮಾಡುತ್ತಿದ್ದಾರೆ. ಅಂಥವರು ಯತ್ನಾಳ್‌ರನ್ನು ಬಹಿರಂಗವಾಗಿ ಬೆಂಬಲಿಸಲಿ ಅದನ್ನು ಬಿಟ್ಟು ಯಾಕೆ ಈ ರೀತಿ ರಾಜಕಾರಣ ಮಾಡುತ್ತೀರಾ, ರಾಜ್ಯದಲ್ಲಿ ಬಿಜೆಪಿ ಬಲಿಷ್ಠ ಆಗಬಾರದಾ? ಎಂದು ಪ್ರಶ್ನಿಸಿದರು.
ಬಿ.ವೈ.ವಿಜೇಂದ್ರ ರಾಜ್ಯಾಧ್ಯಕ್ಷರಾದ ನಂತರ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ನಡೆಸಿ ಬಿಜೆಪಿ ಸಂಘಟನೆ ಕಟ್ಟುತ್ತಿದ್ದಾರೆ. ಆದರೆ, ಯತ್ನಾಳ್ ಅಂತವರು ಪಕ್ಷವನ್ನು ದುರ್ಬಲಗೊಳಿಸಲು ಮುಂದಾಗಿದ್ದಾರೆ. ಇವರೇನೇ ಮಾಡಿದರು ಬಿಜೆಪಿಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಬಿ.ವೈ.ವಿಜಯೇಂದ್ರ ನಾಯಕತ್ವದಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.