ಕನ್ನಡಪ್ರಭ ವಾರ್ತೆ ಬಾಗಲಕೋಟೆಸಿದ್ದರಾಮಯ್ಯನವರ ವಿರುದ್ಧ 36 ಶಾಸಕರ ಸಹಿ ಸಂಗ್ರಹಿಸಿ ಕೊಟ್ಟಿದ್ದೆ ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿಯಾಗಲು ಸಿದ್ದರಾಮಯ್ಯನವರ ಶಾಪವೇ ಕಾರಣ ಎಂಬ ಯತ್ನಾಳ್ ಹೇಳಿಕೆಗೆ ಸಚಿವ ವಿಜಯಾನಂದ ಕಾಶಪ್ಪನವರ ತಿರುಗೇಟು ನೀಡಿದ್ದು, ನೋಡ್ರಿ ಆ ವ್ಯಕ್ತಿಗೆ ಬಾಯಿ ಯಾವುದು, ಬಗದಾಳ ಯಾವುದು ಎಂಬುದೇ ಗೊತ್ತಿಲ್ಲ ಎಂದು ಜರಿದಿದ್ದಾರೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಿದ್ದರಾಮಯ್ಯನವರ ವಿರುದ್ಧ 36 ಶಾಸಕರ ಸಹಿ ಸಂಗ್ರಹಿಸಿ ಕೊಟ್ಟಿದ್ದೆ ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿಯಾಗಲು ಸಿದ್ದರಾಮಯ್ಯನವರ ಶಾಪವೇ ಕಾರಣ ಎಂಬ ಯತ್ನಾಳ್ ಹೇಳಿಕೆಗೆ ಸಚಿವ ವಿಜಯಾನಂದ ಕಾಶಪ್ಪನವರ ತಿರುಗೇಟು ನೀಡಿದ್ದು, ನೋಡ್ರಿ ಆ ವ್ಯಕ್ತಿಗೆ ಬಾಯಿ ಯಾವುದು, ಬಗದಾಳ ಯಾವುದು ಎಂಬುದೇ ಗೊತ್ತಿಲ್ಲ ಎಂದು ಜರಿದಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಏನು ಮಾತಾಡ್ತಾನೋ ಏನೋ. ಅವನಿಗೆ ಮೆದುಳಿಗೆ ನಾಲಿಗೆ ಕನೆಕ್ಷನ್ ತಪ್ಪಿದೆ. ಆ ಗಿರಾಕಿಗೆ, 28ಕ್ಕೆ ಹೊರಟಿದೆ ಮನೆಗೆ, ಸಿಎಂ ಅಂತ ಹಗಲುಗನಸು ಕಾಣು ಅಂತ ಹೇಳಿ ಎಂದು ಲೇವಡಿ ಮಾಡಿದರು.
ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ಹಿಂದೆ ಕಾಂಗ್ರೆಸ್‌ನವರದ್ದೇ ಕೈವಾಡ ಎಂಬ ವಿಷಯ, ಸಿದ್ದರಾಮಯ್ಯ ಮುಡಾ ವಿವಾದ ಹಿಂದೆಯೂ ಕಾಂಗ್ರೆಸ್ ನವರೇ ಇದ್ರು ಎಂಬ ಕೆ.ಎನ್.ರಾಜಣ್ಣ ಹೇಳಿಕೆಗೆ ಸಚಿವ ವಿಜಯಾನಂದ ಕಾಶಪ್ಪನವರ ಪ್ರತಿಕ್ರಿಯಿಸಿ, ಇವೆಲ್ಲ ಆರೋಪಗಳು ದಿನದಿಂದ ದಿನಕ್ಕೆ ಬರುತ್ತವೆ. ರಾಜಣ್ಣ ಅವರು ಮಾತನಾಡಿದ ಬಗ್ಗೆ ನಾನು ಗಮನಿಸಿಲ್ಲ. ಆದರಿಂದ ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಇದರಲ್ಲಿ ಕಾಂಗ್ರೆಸ್ ನವರ ಕೈವಾಡ ಇಲ್ಲ. ಅವೆಲ್ಲ ವಿನಾಕಾರಣ ಆರೋಪ ಮಾಡ್ತಾರೆ ಅವೆಲ್ಲ ಸರಿ ಅಲ್ಲ. ಒಪ್ಪುವಂತಹವು ಅಲ್ಲ ಎಂದರು.
ಬರಿ ಕಾಂಗ್ರೆಸ್ ನವರ ಮೇಲೆ ಇಡಿ ದಾಳಿ ಮಾಡುತ್ತಿದ್ದಾರೆ:
ಭಾರತೀಯ ಜನತಾ ಪಕ್ಷದವರು ನಮ್ಮ ನಾಯಕರ ಬೆಳವಣಿಗೆಯನ್ನು ಸಹಿಸದೆ ಮಾಡುತ್ತಿರುವ ಕುತಂತ್ರ ಇದಾಗಿದೆ. ಸಹಜವಾಗಿ ವಿರೋಧಿಗಳು ಮಾಡುವಂತ ಆರೋಪಗಳು. ಬರಿ ಕಾಂಗ್ರೆಸ್ ನವರ ಮೇಲೆ ಇಡಿ ದಾಳಿ ಮಾಡುತ್ತಿದ್ದಾರೆ. ನಾನು ಬಿಜೆಪಿಯವರಿಗೆ, ಇಡಿ ಅವರಿಗೆ ಕೇಳಲು ಬಯಸುತ್ತೇನೆ. ಒಬ್ಬರಾದರೂ ಬಿಜೆಪಿಯವರ ಮನೆ ಮೇಲೆ ಇವರು ದಾಳಿ ಮಾಡಿದ್ದಾರಾ? ಒಬ್ಬರ ಹೆಸರನ್ನಾದರೂ ತೋರಿಸಿ ಇಡೀ ರಾಜ್ಯದಲ್ಲಿ ರಾಷ್ಟ್ರದಲ್ಲಿ, ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ನವರ ಮೇಲೆ ದ್ವೇಷದ ಸೇಡಿನ ರಾಜಕಾರಣ ಮಾಡುವಂತದ್ದು ಎಷ್ಟು ಸರಿ. ಒಬ್ಬರಾದರೂ ಬಿಜೆಪಿಯವರ ಮೇಲೆ ಮಾಡಲಿ. ಬೊಮ್ಮಾಯಿ ಅವರ ಮೇಲೆ ಮಾಡಲಿ. ವಿಜಯೇಂದ್ರನ ಮನೆ ಮೇಲೆ ಮಾಡಲಿ. ಎಷ್ಟು ಹಗರಣಗಳು ಇವರ ಕಾಲಕ್ಕೆ ಆಗಿವೆ. ಅವುಗಳೆಲ್ಲವನ್ನು ಮುಚ್ಚಿ ಹಾಕಿ. ಕಾಂಗ್ರೆಸ್ ನವರ ಮೇಲೆ ದಾಳಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
ಸತೀಶ್ ಜಾರಕಿಹೊಳಿ ಅವರನ್ನು ಬಿಜೆಪಿಗೆ ಸೆಳೆಯುವ ತಂತ್ರನಾ ಇಡಿ ದಾಳಿ ಎಂಬ ಪ್ರಶ್ನೆಗೆ ನೋಡ್ರಿ ಇದು ಕುತಂತ್ರ, ಈ ಹಿಂದೆ 56 ಜನ ಕಾಂಗ್ರೆಸ್ ಶಾಸಕರ ಪಟ್ಟಿಯನ್ನು ಇವರು ಮಾಡಿದ್ರು. ಅನೇಕ ಜನ ನಮ್ಮ ಹೆಸರನ್ನು ಕೂಡ ಕೊಟ್ಟಿದ್ದರು. ಆ ಪಟ್ಟಿಯಲ್ಲಿ ನನ್ನ ಹೆಸರು ಕೂಡ ಇತ್ತು. ಬಿಜೆಪಿ ಪಕ್ಷಕ್ಕೆ ಬರ್ದಿದ್ರೆ ನಿಮ್ಮ ಮೇಲೆ ರೇಡ್ ಮಾಡುತ್ತೇವೆ ಅನ್ನೋದು. ನಾನು ಇಡಿ, ಐಟಿ ಎಲ್ಲದಕ್ಕೂ ತಯಾರಿದ್ದೇನೆ. ಯಾವಾಗಾದ್ರೂ ನನ್ನ ಮನೆಗೆ ಬರಬಹುದು ಎಂದು ಕಾಶಪ್ಪನವರ ಹೇಳಿದರು.
ಬಾಗಲಕೋಟೆಯಲ್ಲಿ ಕೂಡ ಸಚಿವ ಸಂಪುಟ ನಡೆಯುತ್ತದೆ ಎಂದು ಕಾಶಪ್ಪನವರ ವಿಸ್ವಾಸ:
ಮಂಗಳೂರು, ಕಲಬುರ್ಗಿ ಸೇರಿದಂತೆ ವಿವಿಧೆಡೆ ಕ್ಯಾಬಿನೆಟ್ ನಡೆಸುವ ಕುರಿತು ಮಾತನಾಡಿದ ಸಚಿವ ವಿಜಯಾನಂದ ಕಾಶಪ್ಪನವರ ಅವರು, ಮುಖ್ಯಮಂತ್ರಿಗಳು ಈಗಾಗಲೇ ಸಚಿವ ಸಂಪುಟದಲ್ಲಿ ನಮಗೆ ಸೂಚನೆಯನ್ನು ಕೊಟ್ಟಿದ್ದಾರೆ. ಆಯಾ ಜಿಲ್ಲೆಗಳಿಗೆ ಹೋಗಿ ಆಯಾ ಜಿಲ್ಲೆಯ ಸಮಸ್ಯೆಗಳನ್ನು ಆಲಿಸಿ, ಅಲ್ಲೇ ಸಂಪುಟ ಸಭೆ ನಡೆಸಿ ಆ ಜಿಲ್ಲೆಯ ಸಮಸ್ಯೆ ಇರಬಹುದು. ಬರಗಾಲ ಇರಬಹುದು, ರೈತರ ಸಮಸ್ಯೆ ಇರಬಹುದು. ಎಲ್ಲದಕ್ಕೂ ಸಮಯವನ್ನು ಕೊಡುತ್ತೇನೆ ಎಂದು ಹೇಳಿದ್ದಾರೆ.
ಖಂಡಿತವಾಗಿ ಬಾಗಲಕೋಟೆಯಲ್ಲೂ ಕೂಡ ಸಚಿವ ಸಂಪುಟ ನಡೆಸುವುದಕ್ಕೆ ಸಮಯ ಕೊಡ್ತೀನಿ ಅಂದಿದ್ದಾರೆ. ಮುಂದೆ ಬಾಗಲಕೋಟೆಯಲ್ಲಿ ಕೂಡ ಸಚಿವ ಸಂಪುಟ ನಡೆಯುತ್ತದೆ ಎಂದು ಕಾಶಪ್ಪನವರ ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಮನೆಯ ವಿಷಯ. ಅದೆಲ್ಲವನ್ನು ಕೂಡ ನಾವು ಸರಿ ಮಾಡಿಕೊಳ್ಳುತ್ತೇವೆ:
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕಾಂಗ್ರೆಸ್ ನವರಲ್ಲೇ ಅಸಮಾಧಾನ ಇರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಈಗಾಗಲೇ ಈ ವಿಷಯ ಮುಖ್ಯಮಂತ್ರಿಗಳ ಗಮನಕ್ಕೂ ಬಂದಿದೆ. ನಮಗೆ ಹಾಗೂ ಬಾಗಲಕೋಟೆಯ ಶಾಸಕ ಉಮೇಶ್ ಮೇಟಿ ಅವರಿಗೆ, ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆ. ಅದು ನಮ್ಮ ಮನೆಯ ವಿಷಯ. ಅದೆಲ್ಲವನ್ನು ಕೂಡ ನಾವು ಸರಿ ಮಾಡಿಕೊಳ್ಳುತ್ತೇವೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.