ಕನ್ನಡಪ್ರಭ ವಾರ್ತೆ ಮಂಡ್ಯ
ಭಾರತೀಯ ಜನತಾ ಪಾರ್ಟಿ ವತಿಯಿಂದ ಡಿಸೆಂಬರ್ ೨೦೨೪ರಿಂದ ಒಂದು ವರ್ಷಗಳ ಕಾಲ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ಧಿ ವರ್ಷವನ್ನು ಇಡೀ ದೇಶಾದ್ಯಂತ ಸುಶಾಸನ ದಿನವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೈಸೂರು ವಿಭಾಗೀಯ ಸಂಚಾಲಕ ಎನ್.ವಿ.ಫಣೀಶ್ ತಿಳಿಸಿದರು.ಮುಂದಿನ ಡಿ.೨೫ರಂದು ದೇಶದ ಎಲ್ಲಾ ಬೂತ್‌ಗಳಲ್ಲಿ ಸುಶಾಸನ ದಿನ ಆಚರಿಸಲು ನಿರ್ಧರಿಸಿಲಾಗಿದೆ. ರಾಜ್ಯದ ೨೫ ಸಾವಿರ ಬೂತ್‌ಗಳಲ್ಲೂ ಆಚರಣೆ ಮಾಡಲು ಸಿದ್ಧತೆ ನಡೆಸಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜ.೧೪ರಿಂದ ಮಾ.೧೫ರವರೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಜ.೧೪ ರಿಂದ ಫೆ.೧೪ರವರೆಗೆ ಅಟಲ್ ಸ್ಮೃತಿ ಸಂಕಲನ ಮತ್ತು ಪ್ರಚಾರ ಅಭಿಯಾನ, ಫೆ.೧೫ ರಿಂದ ಮಾ.೧೫ರವರೆಗೆ ಅಟಲ್ ವಿರಾಸತ್ ಸಮ್ಮೇಳನ ಯೋಜಿಸಲಾಗಿದೆ. ಅಟಲ್ ವಿರಾಸತ್ ಸಮ್ಮೇಳನವನ್ನು ಪ್ರತಿ ಜಿಲ್ಲೆಯಲ್ಲಿ ನಡೆಯಲಿದ್ದು, ಸಮ್ಮೇಳನದಲ್ಲಿ ವಿಚಾರವಾದಿಗಳು ಮತ್ತು ಗಣ್ಯರನ್ನು ಆಹ್ವಾನಿಸಿ ವಾಜಪೇಯಿ ಅವರೊಂದಿಗೆ ಕೆಲಸ ಮಾಡಿದ ಹಿರಿಯ ಕಾರ್ಯಕರ್ತರನ್ನು, ಅಟಲ್ ಜೀ ಅವರ ವ್ಯಕ್ತಿತ್ವ ಮತ್ತು ಕೃತಿಗಳ ಮೇಲೆ ಅನೇಕ ಪುಸ್ತಕಗಳನ್ನು ಹಾಗೂ ಲೇಖಕರನ್ನು ಸನ್ಮಾನಿಸಲಾಗುವುದು ಎಂದರು.ಅಟಲ್ ಜನ್ಮಶತಮಾನೋತ್ಸವ ಆಚರಣಾ ಸಮಿತಿಯ ಪ್ರಮುಖ್ ಆಗಿ ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎ.ಹೆಚ್.ಶಿವಯೋಗಿಸ್ವಾಮಿ, ರಾಜ್ಯ ಸಂಚಾಲಕರಾಗಿ ಜಗದೀಶ್ ಹೀರೆಮನಿ ಹಾಗೂ ಸಮಿತಿಯ ಸದಸ್ಯ, ಮೈಸೂರು ವಿಭಾಗ ಮತ್ತು ದಕ್ಷಿಣ ಕರ್ನಾಟಕ ಭಾಗದ ಸಹ ಸಂಚಾಲಕರಾಗಿ ಎನ್.ವಿ.ಪಣೀಶ್ ನನ್ನನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ವಾಜಪೇಯಿ ಅವರ ತತ್ವಾದರ್ಶಗಳನ್ನು ಮುಂದಿನ ಯುವ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ಕಾರ‌್ಯಕ್ರಮ ಹಮ್ಮಿಕೊಂಡಿದ್ದು, ನಾವೂ ಸಹ ಅವರ ಒಂದಷ್ಟು ತತ್ವಗಳನ್ನು ಅಳವಡಿಸಿಕೊಂಡಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಬಿಜೆಪಿ ಈಗ ಒಡೆದ ಮನೆಯಾಗಿಲ್ಲ. ಎಲ್ಲರೂ ಒಗ್ಗಟ್ಟಾಗಿಯೇ ಹೋಗುತ್ತಿದ್ದೇವೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳೂ ಇವೆ. ಅವುಗಳನ್ನು ಹೈಕಮಾಂಡ್ ಮಟ್ಟದಲ್ಲಿ ಬಗೆಹರಿಸಲಾಗುತ್ತಿದೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ಒಂದೆರಡು ದಿನಗಳಲ್ಲಿ ಆಗಲಿದ್ದು, ಆಕಾಂಕ್ಷಿತರ ಪಟ್ಟಿಯನ್ನು ಕಳುಹಿಸಲಾಗಿದೆ. ಶೀಘ್ರ ನೇಮಕ ಆಗಲಿದೆ. ಯಾರನ್ನು ವರಿಷ್ಠರು ಆಯ್ಕೆ ಮಾಡುತ್ತಾರೆ ಎಂಬುದು ತಿಳಿದಿಲ್ಲ ಎಂದು ಹೇಳಿದರು.ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಮಂಜುನಾಥ್, ನಗರಾಧ್ಯಕ್ಷ ವಸಂತ್‌ಕುಮಾರ್, ಜಿಲ್ಲಾ ಸಂಚಾಲಕ ನಾಗಾನಂದ್, ಜಿಲ್ಲಾ ಸಂಚಾಲಕ ಸಿದ್ದರಾಜುಗೌಡ ಗೋಷ್ಠಿಯಲ್ಲಿದ್ದರು.