ಹುಟ್ಟುಹಬ್ಬ ಅಂಗವಾಗಿ ಶಿಕಾರಿಪುರ ದೇಗುಲಗಳಲ್ಲಿ ಯಡಿಯೂರಪ್ಪ ವಿಶೇಷ ಪೂಜೆ

KannadaprabhaNewsNetwork | Updated : Feb 28 2024, 01:14 PM IST

ಸಾರಾಂಶ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಹುಟ್ಟುಹಬ್ಬವನ್ನು ಕಾರ್ಯಕರ್ತರು, ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಂಡರು.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಗಳವಾರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಹುಟ್ಟುಹಬ್ಬವನ್ನು ಕಾರ್ಯಕರ್ತರು, ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಂಡರು.

ಹುಟ್ಟುಹಬ್ಬದ ಅಂಗವಾಗಿ ಸ್ವಕ್ಷೇತ್ರ ಶಿಕಾರಿಪುರಕ್ಕೆ ಸೋಮವಾರ ಸಂಜೆ ಆಗಮಿಸಿದ್ದ ಅವರು ಸ್ವಗೃಹದಲ್ಲಿ ರಾತ್ರಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಭಗವತ್ಪಾದರ ನೇತೃತ್ವದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಪುತ್ರ, ಸಂಸದ ರಾಘವೇಂದ್ರ, ಪತ್ನಿ ತೇಜಸ್ವಿನಿ, ಪುತ್ರಿ ಪದ್ಮಾವತಿ, ಅರುಣಾದೇವಿ, ಉಮಾ ಸೇರಿದಂತೆ ಕುಟುಂಬದ ಸದಸ್ಯರ ಜತೆ ಪಾಲ್ಗೊಂಡು ಪೂಜ್ಯರ ಆಶೀರ್ವಾದ ಪಡೆದರು.

ಗಣ್ಯರಿಂದ ಅಭಿನಂದನೆ ಸ್ವೀಕಾರ: ಮಂಗಳವಾರ ಬೆಳಗಿನಿಂದಲೇ ಗಣ್ಯರು ಅಧಿಕಾರಿಗಳು ಕಾರ್ಯಕರ್ತರು ಹುಟ್ಟುಹಬ್ಬದ ನಿಮಿತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಹಿನ್ನೆಲೆ ಮಾಳೇರಕೇರಿಯ ಪಕ್ಷದ ಕಚೇರಿಯಲ್ಲಿ ಎಲ್ಲರನ್ನು ಭೇಟಿಯಾಗಿ ಅಭಿನಂದನೆ ಸ್ವೀಕರಿಸಿದರು. 

ಮಾಜಿ ಸಚಿವ ಹಾಲಿ ಶಾಸಕ ಗೋವಿಂದ ಕಾರಜೋಳ, ವಿಪ ಸದಸ್ಯ ರುದ್ರೇಗೌಡ, ಮಾಜಿ ಶಾಸಕ ಡಿ.ಎನ್. ಜೀವರಾಜ್ ಸಹಿತ ಹಲವು ಪ್ರಮುಖರು ಭೇಟಿಯಾಗಿ ಶುಭ ಹಾರೈಸಿದರು.

ಅನಂತ ಗ್ರಾಮ ದೇವತೆ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ, ಸಮೀಪದ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ತೆರಳಿ, ಶ್ರೀ ಗುರುಗಳ ಬೃಂದಾವನದ ದರ್ಶನಾಶೀರ್ವಾದ ಪಡೆದರು. ಬಳಿಕ ಶಿರಾಳಕೊಪ್ಪದಲ್ಲಿ ಆಯೋಜಿಸಲಾಗಿದ್ದ ಇಷ್ಟಲಿಂಗ ಮಹಾಪೂಜೆ, ಧರ್ಮಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದರು.

ಈ ಸಂದರ್ಭ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಚನ್ನವೀರಪ್ಪ, ವಸಂತಗೌಡ, ಬಿಜೆಪಿ ನಗರಾಧ್ಯಕ್ಷ ರಾಘವೇಂದ್ರ, ಯುವ ಮೋರ್ಚಾ ಅಧ್ಯಕ್ಷ ವೀರಣ್ಣಗೌಡ, ಪ್ರವೀಣ ಬೆಣ್ಣೆ, ವಿನಯ ಸೇಬು ಸಹಿತ ನೂರಾರು ಪ್ರಮುಖರು ಹಾಜರಿದ್ದರು.

ರಕ್ತದಾನ ಶಿಬಿರ: ಜನನಾಯಕ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಭವಾನಿ ರಾವ್ ಕೇರಿಯಲ್ಲಿನ ಮೈತ್ರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು, ಶಾಲಾ ಶಿಕ್ಷಕ ಸಿಬ್ಬಂದಿ ವತಿಯಿಂದ ರಕ್ತದಾನ ಶಿಬಿರ ನಡೆಯಿತು.

ಮಾಜಿ ಸಿಎಂ ಯಡಿಯೂರಪ್ಪ ಅವರು ಹುಟ್ಟುಹಬ್ಬ ಅಂಗವಾಗಿ ಕುಟುಂಬ ಸದಸ್ಯರ ಸಮೇತ ಸ್ವಕ್ಷೇತ್ರ ಶಿಕಾರಿಪುರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ತೆರಳಿ ಬೃಂದಾವನದ ದರ್ಶನಾಶೀರ್ವಾದ ಪಡೆದರು.-27ಕೆಎಸ್.ಕೆಪಿ3: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹುಟ್ಟುಹಬ್ಬ ಅಂಗವಾಗಿ ಶಿಕಾರಿಪುರದಲ್ಲಿ ಕಾರ್ಯಕರ್ತರಿಂದ ಬೃಹತ್ ಮಾಲಾರ್ಪಣೆ ಹಾಕಿ, ಅಭಿನಂದನೆ ಸಲ್ಲಿಸಲಾಯಿತು.

Share this article