ಕಮಲನಗರದಲ್ಲಿ ಎಳ್ಳಮಾವಾಸ್ಯೆ ಹಬ್ಬದ ಸಂಭ್ರಮ

KannadaprabhaNewsNetwork | Published : Jan 12, 2024 1:46 AM

ಸಾರಾಂಶ

ಕಮಲನಗರ ತಾಲೂಕಿನ ಡಿಗ್ಗಿ ಗ್ರಾಮದಲ್ಲಿ ಎಳ್ಳಮಾವಾಸ್ಯೆ ಪ್ರಯುಕ್ತ ವಿಷ್ಣುದಾಸ ಶಿಂಧೆ ಅವರ ಹೊಲದಲ್ಲಿ ಬಂಧುಗಳು, ಸ್ನೇಹಿತರೊಂದಿಗೆ ಸಾಮೂಹಿಕ ಪ್ರಾರ್ಥನೆ ಹಾಗೂ ಭೋಜನ ಮಾಡಿದರು.

ಕನ್ನಡಪ್ರಭ ವಾರ್ತೆ ಕಮಲನಗರ

ರೈತರು ಭೂ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಎಳ್ಳಮಾವಾಸ್ಯೆ ಹಬ್ಬವನ್ನು ಗುರುವಾರ ಸಂಭ್ರಮ ಮತ್ತು ಸಡಗರದಿಂದ ಆಚರಿಸಿದರು.

ರೈತರು ಬೆಳಗ್ಗೆಯೇ ಬೇಗನೇ ಎದ್ದು ಸ್ವಾದಿಷ್ಟ ಭೋಜನಗಳ ಜೊತೆ ಕುಟುಂಬ ಸಮೇತ ಹೊಲಗಳಿಗೆ ತೆರಳಿದಲ್ಲದೇ ತಾವು ನಂಬಿರುವ ಭೂ ತಾಯಿಯನ್ನು ಶ್ರದ್ಧೆಯಿಂದ ಪೂಜಿಸುವ ಆಚರಣೆ ಇದಾಗಿದ್ದು, ಶ್ರಮಕ್ಕೆ ತಕ್ಕಂತೆ ಉತ್ತಮ ಫಸಲು ಕೊಡುವ ಭೂ ತಾಯಿಗೆ ಹಾಗೂ ಹೊಲ ಕಾಯ್ವ ಪಾಂಡವರನ್ನು ಪೂಜಿಸಿ, ಹೊಲದಲ್ಲಿನ ಬೆಳೆಯು ಸಮೃದ್ಧವಾಗಿ ಬೆಳೆಯಲಿ ಎಂದು ಪ್ರಾರ್ಥಿಸುವ ಹಬ್ಬವೇ ಎಳ್ಳಮಾವಾಸ್ಯೆಯಾಗಿದೆ.

ಪರಿಸರವನ್ನು ಆರಾಧಿಸುವ ಈ ಹಬ್ಬ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಅನೇಕರು ಕುಟುಂಬ ಸಮೇತ ತಮ್ಮ ಜಮೀನಿಗೆ ಹೋಗಿ ಹೊಲದ ಮಧ್ಯದಲ್ಲಿ ಗುಡಿಸಲು ನಿರ್ಮಿಸಿ ಭೂ ತಾಯಿಯ ಉಡಿ ತುಂಬಿ ಪೂಜೆ ಸಲ್ಲಿಸಿದರು. ವಿವಿಧ ಬಗೆಯ ವಿಶೇಷವಾದ ಮತ್ತು ಸ್ವಾದಿಷ್ಟ ಭೋಜನಗಳ ನೈವೇದ್ಯ ಸಲ್ಲಿಸಿ ಗುಡಿಸಲಿನ ಸುತ್ತಲೂ ಒಲಗ್ಯಾ ಒಲಗ್ಯಾ ಚಲಂಪಲಗ್ಯಾ ಒಲಗ್ಯಾ ಒಲಗ್ಯಾ ಚಲಂಪಲಗ್ಯಾ ಎನ್ನುತ್ತ ಚರಗ ಚೆಲ್ಲಿದರು.

ರೈತರು ಬಂಧುಗಳು ಹಾಗೂ ಸ್ನೇಹಿತರನ್ನು ತಮ್ಮ ಹೊಲಕ್ಕೆ ಊಟಕ್ಕೆ ಆಹ್ವಾನಿಸಿದರು. ಭಜ್ಜಿ, ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಜೋಳದ ಅನ್ನ, ಶೇಂಗಾ ಚಟ್ನಿ, ಅಂಬಲಿ ಮೊದಲಾದ ಖಾದ್ಯಗಳನ್ನು ಉಣಬಡಿಸಿದರು.

ಹೊಲದಲ್ಲಿನ ಮರಗಳಿಗೆ ಮಕ್ಕಳು ಜೋಕಾಲಿ ಹಾಕಿ ಸಂಭ್ರಮದಿಂದ ಆಟವಾಡುತ್ತಾ ಪ್ರೀತಿ, ಬಾಂಧವ್ಯ ಬೆಳೆಯುತ್ತವೆ ಎನ್ನುವ ಅಭಿಪ್ರಾಯ ರೈತರದ್ದಾಗಿದೆ.

ಕಮಲನಗರ, ಡಿಗ್ಗಿ, ಚ್ಯಾಂಡೇಶ್ವರ, ಖತಗಾಂವ, ಸೋನಾಳ, ಕೋಟಗ್ಯಾಳ, ಡೋಣಗಾಂವ, ಮದನೂರ, ಹಕ್ಯಾಳ, ಮುರ್ಕಿ, ತೋರಣಾ ಸೇರಿದಂತೆ ವಿವಿಧೆಡೆ ರೈತರು ರೊಟ್ಟಿಯ ಗಂಟು ಕಟ್ಟಿಕೊಂಡು ಹೊಲಗಳಿಗೆ ತೆರಳಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಚರಗ ಚೆಲ್ಲಿ ಎಳ್ಳಮಾವಾಸ್ಯೆಯನ್ನು ಆಚರಿಸಿದರು.

Share this article