ಯಶವಂತಪುರ ಬಿಜೆಪಿ ಅಭ್ಯರ್ಥಿ ಘೋಷಣೆ ಸಂಚಲನ!

KannadaprabhaNewsNetwork |  
Published : Jul 29, 2025, 01:01 AM ISTUpdated : Jul 29, 2025, 04:18 AM IST
BSY

ಸಾರಾಂಶ

ಮುಂಬರುವ ವಿಧಾನಸಭಾ ಚುನಾವಣೆಗೆ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಆಪ್ತ ಎಂ.ರುದ್ರೇಶ್‌ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 ಬೆಂಗಳೂರು :  ಮುಂಬರುವ ವಿಧಾನಸಭಾ ಚುನಾವಣೆಗೆ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಆಪ್ತ ಎಂ.ರುದ್ರೇಶ್‌ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಜು.26ರಂದು ಯಶವಂತಪುರದ ಎಂ.ರುದ್ರೇಶ್‌ ಅವರ ನಿವಾಸದಲ್ಲಿ ನಡೆದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದ ಯಡಿಯೂರಪ್ಪ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಂ.ರುದ್ರೇಶ್‌ ಅವರನ್ನು ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು. ಅವರ ಗೆಲುವು ತಡೆಯಲು ಯಾರಿಗೂ ಸಾಧ್ಯವಿಲ್ಲ. ಈಗಾಗಲೇ ಜನ ಎಂ.ರುದ್ರೇಶ್‌ ಅವರನ್ನು ಶಾಸಕರಾಗಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ಹೀಗಾಗಿ ಅವರನ್ನು ದೊಡ್ಡ ಅಂತರ ಮತಗಳಿಂದ ಗೆಲ್ಲಿಸಿ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಎಂ.ರುದ್ರೇಶ್‌ ಟಿಕೆಟ್‌ ಘೋಷಣೆ ಮಾಡಿದ್ದಕ್ಕೆ ಪಕ್ಷದಲ್ಲಿ ಚರ್ಚೆ ಆರಂಭವಾಗಿದೆ. ತಮ್ಮ ಆಪ್ತನಿಗೆ ಈಗಲೇ ಟಿಕೆಟ್‌ ಘೋಷಣೆ ಮಾಡಿರುವುದು ಸರಿಯಲ್ಲ. ಜೆಡಿಎಸ್‌ ಜತೆಗೆ ಮೈತ್ರಿ ಇರುವಾಗ ಏಕಪಕ್ಷೀಯವಾಗಿ ಟಿಕೆಟ್‌ ಘೋಷಣೆ ಸರಿಯಲ್ಲ ಎಂದು ಪಕ್ಷದಲ್ಲೇ ಚರ್ಚೆಗಳು ಆರಂಭಗೊಂಡಿವೆ.

ನನ್ನ ಮೇಲಿನ ಪ್ರೀತಿಗೆ ಹೇಳಿಕೆ: ರುದ್ರೇಶ್‌

ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಎಂ.ರುದ್ರೇಶ್‌, ನಾನು ಯಶವಂತಪುರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ. 2008ರಲ್ಲೇ ಯಶವಂತಪುರಕ್ಕೆ ಅಭ್ಯರ್ಥಿಯಾಗಬೇಕಿತ್ತು. ಆದರೆ, ಪಕ್ಷದ ಸೂಚನೆ ಮೇರೆಗೆ ರಾಮನಗರಕ್ಕೆ ಹೋಗಿದ್ದೆ. ಟಿಕೆಟ್‌ ಸಂಬಂಧ ಅಂತಿಮವಾಗಿ ಹೈಕಮಾಂಡ್‌ ತೀರ್ಮಾನ ಮಾಡಲಿದೆ. ಯಡಿಯೂರಪ್ಪ ಅವರು ನನ್ನ ಹೆಸರು ಘೋಷಣೆ ಮಾಡುವಾಗ ಜೆಡಿಎಸ್‌ನ ಜವರಾಯಿಗೌಡ ಸಹ ಇದ್ದು, ಖುಷಿಪಟ್ಟಿದ್ದಾರೆ. ನನ್ನ ಮೇಲಿನ ಪ್ರೀತಿಯಿಂದ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಲಿ ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂದಿದ್ದಾರೆ. 

 ಹೈಕಮಾಂಡ್‌ ತೀರ್ಮಾನವೇ  ಅಂತಿಮ: ರಾಜ್ಯಾಧ್ಯಕ್ಷ ಬಿವೈವಿ

ಬಿ.ಎಸ್‌.ಯಡಿಯೂರಪ್ಪ ಅವರು ಹಿರಿಯರು. ಪಕ್ಷದ ಅಧ್ಯಕ್ಷರಾಗಿದ್ದವರು. ಪ್ರಸ್ತುತ ಸೆಂಟ್ರಲ್‌ ಎಲೆಕ್ಷನ್‌ ಕಮಿಟಿ ಸದಸ್ಯರು. ಎಂ.ರುದ್ರೇಶ್‌ ಅವರ ಮೇಲಿನ ಪ್ರೀತಿಯಿಂದ ಈ ಹೇಳಿಕೆ ನೀಡಿದ್ದಾರೆ. ಆದರೆ, ಅಂತಿಮ ತೀರ್ಮಾನ ಹೈಕಮಾಂಡ್‌ ಮಾಡಲಿದೆ. ಟಿಕೆಟ್‌ ಕುರಿತು ನಮ್ಮ ಕೋರ್‌ ಕಮಿಟಿ ಚರ್ಚಿಸಲಿದೆ. ಸದ್ಯಕ್ಕೆ ಚುನಾವಣೆ ಇಲ್ಲ. ಯಾವುದೇ ಕ್ಷೇತ್ರದ ಟಿಕೆಟ್‌ ಅಂತಿಮ ಮಾಡುವುದು ಹೈಕಮಾಂಡ್‌. ಶಿಕಾರಿಪುರ ಸೇರಿ ಎಲ್ಲವನ್ನೂ ಹೈಕಮಾಂಡ್‌ ತೀರ್ಮಾನ ಮಾಡಲಿದೆ. ಈ ವಿಷಯವನ್ನು ನಾನು ಹೆಚ್ಚು ಬೆಳೆಸಲು ಹೋಗುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

PREV
Read more Articles on

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್