ಬೆಂಗಳೂರು: ಎತ್ತಿನಹೊಳೆ ಯೋಜನೆಗೆ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಅರಣ್ಯ ಇಲಾಖೆ ಅನುಮತಿಸಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇನ್ನೊಂದು ವಾರದಲ್ಲಿ ಬಾಕಿ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಭೆಯಲ್ಲಿ ಸೂಚಿಸಲಾಗಿದೆ.
ವಿಧಾನಸೌಧದಲ್ಲಿ ಎತ್ತಿನಹೊಳೆ ಯೋಜನೆ ಸಂಬಂಧ ಗುರುವಾರ ಡಿ.ಕೆ.ಶಿವಕುಮಾರ್ ಅವರು ವಿವಿಧ ಸಚಿವರೊಂದಿಗೆ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಹಾಸನ ಮತ್ತು ತುಮಕೂರು ಜಿಲ್ಲೆಗಳ 277 ಎಕರೆ (111 ಹೆಕ್ಟೇರ್) ಭೂಮಿ ಬಳಕೆಗೆ ರಾಜ್ಯಕ್ಕೆ ಅನುಮತಿಸಿದೆ. ಅದಕ್ಕಾಗಿ ರಾಜ್ಯ ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ನೀಡುವುದು ಹಾಗೂ ದಂಡ ಮತ್ತು ಮಿಟಿಗೇಷನ್ ಪ್ಲ್ಯಾನ್ ಸೇರಿ ₹257 ಕೋಟಿಗಳನ್ನು ಅರಣ್ಯ ಇಲಾಖೆಗೆ ಪಾವತಿಸುವಂತೆ ಸೂಚಿಸಲಾಗಿತ್ತು.
ಅದಕ್ಕೆ ಸಂಬಂಧಿಸಿ ಗುರುವಾರ ಸಭೆ ನಡೆಸಿದ ಡಿ.ಕೆ.ಶಿವಕುಮಾರ್, ಕೇಂದ್ರ ಪರಿಸರ ಸಚಿವಾಲಯದ ಸೂಚನೆಯಂತೆ ಅರಣ್ಯ ಇಲಾಖೆಗೆ ನಿಗದಿತ ಪರ್ಯಾಯ ಭೂಮಿಯನ್ನು ಕಂದಾಯ ಇಲಾಖೆಯಿಂದ ನೀಡಬೇಕು ಎಂದು ಸೂಚಿಸಿದರು. ಜತೆಗೆ ದಂಡ ಮತ್ತು ಮಿಟಿಗೇಷನ್ ಪ್ಲ್ಯಾನ್ ಸೇರಿ ₹257 ಕೋಟಿಗಳನ್ನು ಇನ್ನೊಂದು ದಿನಗಳಲ್ಲಿ ಪಾವತಿಸಿ ಇನ್ನೊಂದು ವಾರದಲ್ಲಿ ಕಾಮಗಾರಿ ಆರಂಭಿಸುವಂತೆ ನಿರ್ದೇಶಿಸಿದರು.
ಸಭೆ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆಯು ಕೆಲ ಷರತ್ತುಗಳನ್ನು ವಿಧಿಸಿದೆ. ಅದರಂತೆ ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ಬದಲಿ ಭೂಮಿ ಹಸ್ತಾಂತರ ಮಾಡಲಾಗುತ್ತಿದೆ. ಶೇ.10ರಷ್ಟು ಭೂಮಿ ವರ್ಗಾವಣೆ ಬಾಕಿಯಿತ್ತು. ಮುಂದಿನ ಒಂದು ವಾರದಲ್ಲಿ ಆ ಪ್ರಕ್ರಿಯೆ ನಡೆಯಲಿದೆ. ಅದರ ಜತೆಗೆ ತುಮಕೂರು ಭಾಗದಲ್ಲೂ ಭೂಸ್ವಾಧೀನಕ್ಕೆ ಸರ್ವೇ ನಡೆಸಲು ಕ್ರಮ ಕೈಗೊಳ್ಳಲಾಗುವುದು. ಭೂಸ್ವಾಧೀನಕ್ಕೆ ಸಂಬಂಧಿಸಿ ಇರುವ ತಡೆ ನಿವಾರಿಸಿ, ಸೂಕ್ತ ಭದ್ರತೆಯೊಂದಿಗೆ ಸರ್ವೇ ಕಾರ್ಯ ಆರಂಭಿಸಲಾಗುವುದು. ಚಿಕ್ಕಬಳ್ಳಾಪುರ-ಕೋಲಾರ ಭಾಗಕ್ಕೆ ನೀರು ಪೂರೈಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೇಕೆದಾಟು ಯೋಜನೆಗೆ ಡಿಪಿಆರ್ ಸಿದ್ಧಪಡಿಸಲಾಗಿದೆ. ಅದನ್ನು ಸಹ ಸಮಿತಿ ಮುಂದೆ ಸಲ್ಲಿಕೆ ಮಾಡಲಾಗುವುದು. ಡಿಪಿಆರ್‌ನಲ್ಲಿ ಯೋಜನಾ ವೆಚ್ಚವನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಲಾಗಿದೆ. ಯೋಜನೆಗಾಗಿ 5300 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಬೇಕಿದೆ. ಅದರ ಕುರಿತು ಕಂದಾಯ ಇಲಾಖೆ ಜತೆಗೆ ಮಾತನಾಡಲಾಗುವುದು. ಎಲ್ಲೆಲ್ಲಿ ಭೂಮಿ ಲಭ್ಯತೆಯಿದೆ ಎಂಬುದನ್ನು ಪಟ್ಟಿ ಮಾಡಲು ತಿಳಿಸಿದ್ದು, ಅದನ್ನು ಅರಣ್ಯ ಇಲಾಖೆಗೆ ನೀಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಸಭೆಯಲ್ಲಿ ಸಚಿವರಾದ ಡಾ। ಜಿ.ಪರಮೇಶ್ವರ್, ಕೃಷ್ಣ ಬೈರೇಗೌಡ, ಈಶ್ವರ್ ಖಂಡ್ರೆ, ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಇದ್ದರು.