ಎತ್ತಿನಹೊಳೆ ಯೋಜನೆ: ಸೂಕ್ತ ಪರಿಹಾರ ನೀಡದೆ ಜಮೀನು ವಶಕ್ಕೆ ಪಡೆಯದಂತೆ ಆಗ್ರಹ

KannadaprabhaNewsNetwork |  
Published : Sep 27, 2026, 02:00 AM IST
25ಎಚ್ಎಸ್ಎನ್7 :  | Kannada Prabha

ಸಾರಾಂಶ

ಇದರ ನಡುವೆ ಅಧಿಕಾರಿಗಳು ಏಕಾಏಕಿ ಜಮೀನಿಗೆ ಆಗಮಿಸಿ ತೆಂಗಿನ ಮರಗಳನ್ನು ಕಡಿದು ಹಾಕಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮರಗಳಲ್ಲಿ ಫಸಲು ಇದ್ದರೂ ಯಾವುದೇ ಮುನ್ನೆಚ್ಚರಿಕೆ ಅಥವಾ ಸಮರ್ಪಕ ಮಾಹಿತಿ ನೀಡದೆ ಮರಗಳನ್ನು ತೆರವುಗೊಳಿಸಲಾಗಿದೆ ಎಂದು ಅವರು ದೂರಿದರು.

ಕನ್ನಡಪ್ರಭ ವಾರ್ತೆ ಹಾಸನ

ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಗಂಗೂರು ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆ ವ್ಯಾಪ್ತಿಗೆ ಜಮೀನು ಕಳೆದುಕೊಳ್ಳುತ್ತಿರುವ ರೈತರಿಗೆ ಸೂಕ್ತ ಪರಿಹಾರ ನೀಡದೆ ಕಾಮಗಾರಿ ನಡೆಸುತ್ತಿರುವುದನ್ನು ವಿರೋಧಿಸಿ, ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಸಂತ್ರಸ್ತ ಗಂಗೂರು ಗ್ರಾಮದ ರೈತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಈ ಕುರಿತು ಮಾಧ್ಯಮದೊಂದಿಗೆ ರೈತ ಜಿ.ಎಸ್. ರಮೇಶ್ ಮಾತನಾಡಿ, ೨೦೧೮ರಲ್ಲಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ, ಯೋಜನೆ ವ್ಯಾಪ್ತಿಗೆ ಬರುವ ಜಮೀನಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿ ಜಮೀನು ಪಡೆದುಕೊಂಡಿದ್ದರು. ಆದರೆ, ಬಳಿಕ ಹಲವು ರೈತರ ಸರ್ವೆ ನಂಬರ್‌ಗಳಲ್ಲಿ ಬದಲಾವಣೆ ಹಾಗೂ ದೋಷಗಳಿರುವುದು ಕಂಡುಬಂದಿದ್ದು, ಅವುಗಳನ್ನು ಸರಿಪಡಿಸುವ ಜವಾಬ್ದಾರಿ ನಮ್ಮದೇ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಸುಮಾರು ಎಂಟು ವರ್ಷ ಕಳೆದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಆರೋಪಿಸಿದರು. ಯೋಜನೆ ವ್ಯಾಪ್ತಿಯಲ್ಲಿ ಸುಮಾರು ೧೪೫ ರೈತರ ಜಮೀನುಗಳ ಸರ್ವೇ ನಂಬರ್‌ಗಳಲ್ಲಿ ದೋಷಗಳಿದ್ದು, ಇದಕ್ಕೆ ರೈತರು ಹೊಣೆಯಲ್ಲ. ಕಂದಾಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದಲೇ ಸಮಸ್ಯೆ ಉಂಟಾಗಿದ್ದು, ಮೊದಲು ದಾಖಲೆಗಳನ್ನು ಸರಿಪಡಿಸಿ, ನಂತರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಇದೀಗ ಅಧಿಕಾರಿಗಳು ದಯಾ ಪರಿಹಾರವೆಂಬ ಹೆಸರಿನಲ್ಲಿ ಪ್ರತಿಯೊಬ್ಬರಿಗೂ ಸುಮಾರು ₹ ೨.೫ ಲಕ್ಷ ಪರಿಹಾರ ಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ. ಈ ಮೊತ್ತಕ್ಕೆ ರೈತರ ಒಪ್ಪಿಗೆ ಇಲ್ಲ. ಸೂಕ್ತ ಪರಿಹಾರ ನೀಡಿದ ಬಳಿಕವೇ ಜಮೀನಿನಲ್ಲಿ ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿದರು.

ತಮ್ಮ ಮೂರು ಎಕರೆ ಐದು ಗುಂಟೆ ಪಿತ್ರಾರ್ಜಿತ ಜಮೀನು ಯೋಜನೆಗೆ ಒಳಪಡುತ್ತಿದ್ದು, ಅದನ್ನೇ ಅವಲಂಬಿಸಿರುವ ಮೂರು ಕುಟುಂಬಗಳ ಹಲವು ಸದಸ್ಯರು ಜೀವನ ನಡೆಸುತ್ತಿದ್ದಾರೆ. ಜಮೀನು ಸಂಪೂರ್ಣ ಕಳೆದುಕೊಂಡರೆ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಆದ್ದರಿಂದ ಜಮೀನಿಗೆ ನ್ಯಾಯಯುತ ಪರಿಹಾರ ನೀಡಬೇಕು ಎಂದು ರಮೇಶ್ ಮನವಿ ಮಾಡಿದರು. ಇದರ ನಡುವೆ ಅಧಿಕಾರಿಗಳು ಏಕಾಏಕಿ ಜಮೀನಿಗೆ ಆಗಮಿಸಿ ತೆಂಗಿನ ಮರಗಳನ್ನು ಕಡಿದು ಹಾಕಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮರಗಳಲ್ಲಿ ಫಸಲು ಇದ್ದರೂ ಯಾವುದೇ ಮುನ್ನೆಚ್ಚರಿಕೆ ಅಥವಾ ಸಮರ್ಪಕ ಮಾಹಿತಿ ನೀಡದೆ ಮರಗಳನ್ನು ತೆರವುಗೊಳಿಸಲಾಗಿದೆ ಎಂದು ಅವರು ದೂರಿದರು. ನಮ್ಮ ಜಮೀನು ಪಡೆದುಕೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಜಮೀನಿಗೆ ನ್ಯಾಯಯುತ ಹಾಗೂ ಸೂಕ್ತ ಪರಿಹಾರ ನೀಡಬೇಕು. ಸರ್ವೆ ನಂಬರ್‌ಗಳಲ್ಲಿರುವ ದೋಷಗಳನ್ನು ಸರಿಪಡಿಸುವವರೆಗೆ ನಮ್ಮ ಮೇಲೆ ಒತ್ತಡ ಹೇರಬಾರದು. ಪರಿಹಾರ ನೀಡದೆ ಕಾಮಗಾರಿ ಮುಂದುವರಿಸಿದರೆ ರೈತರಿಗೆ ಅನ್ಯಾಯವಾಗಲಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗಂಗೂರು ಗ್ರಾಮದ ರಾಕೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೀಟ, ರೋಗ, ಕಳೆ ನಿಯಂತ್ರಣಕ್ಕೆ ಆರ್ಕಿವೋ ಅಸ್ತ್ರ!
ಕಲೆ, ಸಂಸ್ಕೃತಿ, ಪರಂಪರೆಗೆ ಹವ್ಯಕರ ಕೊಡುಗೆ ಅಪಾರ