ಎತ್ತಿನಹೊಳೆ ಯೋಜನೆ : ಕೊರತೆ ನೀಗಿಸಲು ಹೊಸ ಚಿಂತನೆ - ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Sep 07, 2024, 01:35 AM ISTUpdated : Sep 07, 2024, 04:50 AM IST
ಎತ್ತಿನಹೊಳೆ | Kannada Prabha

ಸಾರಾಂಶ

ಎತ್ತಿನಹೊಳೆ ಯೋಜನೆಯಲ್ಲಿ ಕೊರತೆ ಬೀಳುತ್ತಿರುವ ನೀರನ್ನು ತಗ್ಗು ಪ್ರದೇಶದ ಹಳ್ಳಗಳಿಂದ ಸಂಗ್ರಹಿಸಿ ಪೂರೈಸಲು ಸರ್ವೆ ಕಾರ್ಯ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 2027ರ ವೇಳೆಗೆ ಯೋಜನೆಯ ಎರಡನೇ ಹಂತ ಪೂರ್ಣಗೊಳ್ಳಲಿದ್ದು, ಏಳು ಜಿಲ್ಲೆಗಳಿಗೆ ಕುಡಿಯುವ ನೀರು ತಲುಪಲಿದೆ.

 ಹಾಸನ : ಎತ್ತಿನಹೊಳೆ ಯೋಜನೆಯಡಿ ವಾರ್ಷಿಕ 19 ಟಿಎಂಸಿ ನೀರು ದೊರೆಯುತ್ತಿದೆ. ಆದರೆ, ಈ ಯೋಜನೆಗೆ 24.5 ಟಿಎಂಸಿ ನೀರಿನ ಅವಶ್ಯಕತೆ ಇರುವುದರಿಂದ ಕೊರತೆ ಬೀಳುವ ನೀರನ್ನು ತಗ್ಗು ಪ್ರದೇಶದಲ್ಲಿ ಇರುವ ಇತರ ಹಳ್ಳಗಳಿಂದ ಸಂಗ್ರಹಿಸಿ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶುಕ್ರವಾರ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಸಕಲೇಶಪುರ ತಾಲ್ಲೂಕಿನ ಬೈಕೆರೆ ದೊಡ್ಡನಗರದ ಪಂಪ್‌ಹೌಸ್ ಮತ್ತು ಹೆಬ್ಬಹಳ್ಳಿಯ 4ನೇ ವಿತರಣಾ ತೊಟ್ಟಿ ಬಳಿ ಚಾಲನೆ ನೀಡಿ ಅವರು ಮಾತನಾಡಿದರು.

ಈ ಯೋಜನೆಯಡಿ 7 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು 14 ಟಿಎಂಸಿ ಹಾಗೂ ಆ ಜಿಲ್ಲೆಗಳ 527 ಕೆರೆಗಳನ್ನು ತುಂಬಿಸಲು 10.5 ಟಿಎಂಸಿ ನೀರಿನ ಅವಶ್ಯಕತೆ ಇದೆ. ಅಂದರೆ ಒಟ್ಟು 24.5 ಟಿಎಂಸಿ ನೀರಿನ ಅಗತ್ಯ ಬೀಳುತ್ತಿದೆ. ಆದರೆ, ಕಳೆದ ಹತ್ತು ವರ್ಷಗಳ ತಾಂತ್ರಿಕ ವರದಿ ಪ್ರಕಾರ ಎತ್ತಿನಹೊಳೆಯಲ್ಲಿ ಸರಾಸರಿ 19.5 ಟಿಎಂಸಿ ನೀರು ಲಭ್ಯವಾಗುತ್ತದೆ. ಹೀಗಾಗಿ ಕೊರತೆ ಬೀಳುವ ನೀರನ್ನು ತಗ್ಗಿನ ಹಳ್ಳಗಳಿಂದ ಸಂಗ್ರಹಿಸಿ ಪೂರೈಸುವ ಚಿಂತನೆಯಿದ್ದು, ಈ ಹಿನ್ನೆಲೆಯಲ್ಲಿ ಸರ್ವೆ ಕಾರ್ಯ ಆರಂಭ ಮಾಡಲಾಗಿದೆ ಎಂದರು.

ಎತ್ತಿನಹೊಳೆ ಎರಡನೇ ಹಂತ 2027ಕ್ಕೆ ಮುಗಿಯಲಿದ್ದು, ಕುಡಿಯುವ ನೀರನ್ನು 7 ಜಿಲ್ಲೆಗಳ ಲಕ್ಷಾಂತರ ಮನೆಗಳಿಗೆ ತಲುಪಿಸುತ್ತೇವೆ. ಅದಕ್ಕೆ ಇನ್ನೂ 7 ಸಾವಿರ ಕೋಟಿ ರು. ಅಗತ್ಯವಿದ್ದು, ಕೊಡಲು ಸರ್ಕಾರ ಸಿದ್ಧವಿದೆ. ಪ್ರಸ್ತುತ ಮೊದಲ ಹಂತ ಉದ್ಘಾಟನೆಯಾಗಿದೆ. ಎರಡನೇ ಹಂತ 2027 ಕ್ಕೆ ಮುಕ್ತಾಯಗೊಂಡು ಇಡೀ ಯೋಜನೆ ಯಶಸ್ವಿ ಜಾರಿ ಆಗುತ್ತದೆ. ಲಕ್ಷಾಂತರ ಫಲಾನುಭವಿಗಳಿಗೆ ಯೋಜನೆಯ ಅನುಕೂಲ ತಲುಪಲಿದೆ. ಹತ್ತಾರು ಕೆರೆಗಳನ್ನು ತುಂಬಿಸಲಾಗುತ್ತದೆ ಎಂದು ಹೇಳಿದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕೆಲವರು, ನಿಮ್ಮ ಕಣ್ಣೆದುರಿಗೇ ಇರುವ ಸತ್ಯವನ್ನು ಸುಳ್ಳು ಎಂದು ಬಿಂಬಿಸಿ ನಿಮ್ಮನ್ನು ಏಮಾರಿಸಲು ಯತ್ನಿಸುತ್ತಾರೆ. ಆದ್ದರಿಂದ ಅಪನಂಬಿಕೆ ಸೃಷ್ಟಿಸುವವರ ಮಾತುಗಳನ್ನು ಕೇಳಬೇಡಿ. ನಿಮ್ಮ ಕಣ್ಣೆದುರಿಗೆ ಇರುವುದನ್ನು ನಂಬಿ ಎಂದು ತಿಳಿಸಿದರು.

ಎತ್ತಿನಹೊಳೆಗೆ ನನ್ನ ಕಾಲದಲ್ಲೇ ಭೂಮಿಪೂಜೆ ಆಗಿತ್ತು. ಮೊದಲ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿದ್ದೇನೆ. ಎರಡನೇ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿ ಯೋಜನೆಯನ್ನು ಪೂರ್ಣ ಮಾಡಿ ಕುಡಿಯುವ ನೀರನ್ನು ಕೊಟ್ಟೇ ಕೊಡ್ತೀವಿ. ಕೆರೆಗಳನ್ನು ತುಂಬಿಸುತ್ತೇವೆ. ಯೋಜನೆಗೆ ಅಗತ್ಯವಿರುವ 7 ಸಾವಿರ ಕೋಟಿ ರು.ಗಳನ್ನು ನಮ್ಮ ಸರ್ಕಾರದಿಂದ ಕೊಟ್ಟು ಪೂರ್ಣಗೊಳಿಸುತ್ತೇವೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ರಾಜ್ಯದಲ್ಲಿ ಐತಿಹಾಸಿಕ ಮತ್ತು ಪವಿತ್ರವಾದ ದಿನ. ಗೌರಿ ಹಬ್ಬದ ದಿನ ಗಂಗೆ ಸಕಲೇಶಪುರಿಂದ ಮಾರಮ್ಮನ ಕಣಿವೆಗೆ (ವಾಣಿವಿಲಾಸ) ಹರಿಯುತ್ತಿದ್ದಾಳೆ’ ಎಂದು ಬಣ್ಣಿಸಿದರು.

‘ಏಳೆಂಟು ಜನರು ತಮ್ಮ ಉದ್ಯಮ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ತಡೆಯಾಜ್ಞೆ ತರಲು ಪ್ರಯತ್ನಿಸಿದ್ದರು. ನಿಮ್ಮ ವೈಯಕ್ತಿಕ ವಿಚಾರ ಇದಲ್ಲ. ರಾಜ್ಯದ ಜನರಿಗೆ ನೀರು ಹರಿಯುವ ಯೋಜನೆ ಇದು. ಯಾವ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಹೇಳಿದ್ದೆ. ಅದರಂತೆ ನಡೆದುಕೊಂಡಿದ್ದೇನೆ’ ಎಂದು ಹೇಳಿದರು.

ಈ ಯೋಜನೆ ಪೂರ್ಣಗೊಳ್ಳುವುದಿಲ್ಲ. ಪೂರ್ಣಗೊಂಡರೆ ತಲೆ ಬೋಳಿಸುವುದಾಗಿ ಕೆಲವರು ಹೇಳಿಕೆ ನೀಡಿದ್ದರು. ಅವರು ತಲೆ ಬೋಳಿಸಿಕೊಳ್ಳುವುದು ಬೇಡ. ಒಳ್ಳೆಯ ದಿನ ಒಳ್ಳೆಯ ಮಾತು ಆಡೋಣ. 2027ರ ಒಳಗೆ ಎರಡನೇ ಹಂತವೂ ಮುಗಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ರಾಜಣ್ಣ, ಎಂ.ಬಿ.ಪಾಟೀಲ್, ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅರಣ್ಯಾಧಿಕಾರಿಗಳಿಂದ ಅಡ್ಡಿ: ಸಿಎಂ

ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲು ಕೆಲವು ಕಡೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿರುವುದನ್ನು ನಿಲ್ಲಿಸಬೇಕು. ಅಗತ್ಯವಿದ್ದರೆ ಒಂದು ಸಭೆ ಕರೆದು ಸಮಸ್ಯೆಗಳನ್ನು ಇತ್ಯರ್ಥಪಡಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಯ ಮೇಲೆಯೇ ಅರಣ್ಯಾಧಿಕಾರಿಗಳಿಗೆ ಸೂಚನೆ ಕೊಟ್ಟರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ