ಹೊಸಪೇಟೆ: ನಮ್ಮ ದೇಹ ರಚನೆಯಲ್ಲಿ ನಿರ್ನಾಳ ಗ್ರಂಥಿಗಳ ಪಾತ್ರ ಬಹಳ ಮುಖ್ಯವಾಗಿದೆ. ದೇಹದಲ್ಲಿ ಇಂತಹ ಎಂಟು ಗ್ರಂಥಿಗಳಿದ್ದು, ಅವುಗಳನ್ನು ಉತ್ತೇಜಿಸುವುದಕ್ಕೆ ಮತ್ತು ಸಮಸ್ಥಿತಿಯಲ್ಲಿ ಇಡುವುದಕ್ಕೆ ಯೋಗ ಬಹಳ ಸಹಕಾರಿ ಎಂದು ಪತಂಜಲಿ ಯೋಗ ಸಮಿತಿಯ ಗದಗ, ವಿಜಯನಗರ ಜಿಲ್ಲಾ ಪ್ರಭಾರಿ ಡಾ. ಎಸ್.ಬಿ. ಹಂದ್ರಾಳ ಹೇಳಿದರು.
ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ನಿರ್ನಾಳ ಗ್ರಂಥಿಗಳ ಮೇಲೆ ಯೋಗ ಮಾಡುವ ಪರಿಣಾಮಗಳ ಕುರಿತು ಹಲವು ಪ್ರಾತ್ಯಕ್ಷಿಕೆ ಸಹಿತ ಯೋಗ ತರಬೇತಿ ನೀಡಿದ ಅವರು, ನಿರ್ನಾಳ ಗ್ರಂಥಿಗಳು ಉತ್ಪಾದಿಸುವ ರಾಸಾಯನಿಕ ರಸದೂತಗಳೇ ಹಾರ್ಮೋನ್‌ಗಳು, ದೇಹದ ಯಾವ ಭಾಗಕ್ಕೆ ಯಾವ ರೀತಿಯಲ್ಲಿ ಹಾರ್ಮೋನ್ ಪೂರೈಕೆಯಾಗಬೇಕು ಎಂಬುದನ್ನು ನಿರ್ಧರಿಸಿ ಸಂದೇಶ ನೀಡುವ ಮುಖ್ಯ ನಿಯಂತ್ರಣ ಕೇಂದ್ರವೇ ಪಿಟ್ಯುಟರಿ ಗ್ರಂಥಿ ಎಂದು ಹೇಳಿದರು.ಮೆದುಳಿನಲ್ಲಿರುವ ಹೈಪೊಥಲಮಸ್ ಪ್ರಧಾನ ನಿಯಂತ್ರಕ ಶಕ್ತಿಯಾಗಿದ್ದರೆ, ಪಿಟ್ಯುಟರಿ ಗ್ರಂಥಿ ಇತರ ಏಳು ಗ್ರಂಥಿಗಳ ಮೇಲೆ ನಿಯಂತ್ರಣ ಸಾಧಿಸಿ ತನ್ನ ಕೆಲಸ ಮಾಡುತ್ತದೆ. ಗ್ರಂಥಿಗಳು ಸಮಸ್ಥಿತಿಯಲ್ಲಿದ್ದಾಗ ಇಡೀ ದೇಹದ ಕೆಲಸ ಕಾರ್ಯಗಳು ಚೆನ್ನಾಗಿರುತ್ತವೆ. ವಕ್ರಾಸನ, ಗೋಮುಖಾಸನ, ಮರ್ಕಟಾಸನ, ಸರ್ವಾಂಗಾಸನ, ನೌಕಾಸನ, ಅರ್ಧ ಚಂದ್ರಾಸನ, ಪೂರ್ಣ ಉಷ್ಟ್ರಾಸನಗಳಂತಹ ಹಲವು ಆಸನಗಳಿಂದ ನಿರ್ನಾಳ ಗ್ರಂಥಿಗಳು ಸಕ್ರಿಯವಾಗುತ್ತವೆ ಹಾಗು ಸಮಪ್ರಮಾಣದಲ್ಲಿ ಹಾರ್ಮೋನ್‌ಗಳು ಬಿಡುಗಡೆ ಆಗುವಂತೆ ಮಾಡುತ್ತವೆ ಎಂದರು.
ಪತಂಜಲಿ ಯೋಗ ಸಮಿತಿ ಭಾರತ ರಾಜ್ಯ ಪ್ರಭಾರಿ ಕಿರಣಕುಮಾರ್, ರಾಜ್ಯ ಸಮಿತಿ ಸದಸ್ಯ ಬಾಲಚಂದ್ರ ಶರ್ಮಾ, ಬಳ್ಳಾರಿ ಉಸ್ತುವಾರಿ ರಾಜೇಶ್ ಕಾರ್ವಾ, ಫ್ರೀರ್ಡ್ಂ ಪಾರ್ಕ್‌ನ ಸಂಚಾಲಕ ಶ್ರೀರಾಮ್, ಹಿರಿಯ ಯೋಗ ಸಾಧಕರಾದ ಅಶೋಕ್ ಚಿತ್ರಗಾರ, ಮಂಗಳಮ್ಮ, ಕಟ್ಟಾ ನಂಜಪ್ಪ, ವೆಂಕಟೇಶ್ ವಾಸಿ, ವಿಠೋಬ ಬಲ್ಲೂರು ಮತ್ತಿತರರಿದ್ದರು.ಬಾಬಾ ರಾಮ್‌ದೇವ್ ಅವರ ಶಿಷ್ಯ ಹಾಗೂ ಹರಿದ್ವಾರ ಪತಂಜಲಿ ಯೋಗ ಪೀಠದ ಮುಖ್ಯ ಕೇಂದ್ರೀಯ ಪ್ರಭಾರಿ ಸ್ವಾಮಿ ಪರಮಾರ್ಥ ದೇವ್ ಜಿ ಮೇ.1ರಿಂದ 3ರವರೆಗೆ ನಗರದ ಮಲ್ಲಿಗಿ ಹೋಟೆಲ್ ಆವರಣದಲ್ಲಿ ಬೆಳಗ್ಗೆ ಉಚಿತ ಯೋಗ ಶಿಬಿರ ನಡೆಸಿಕೊಡಲಿದ್ದಾರೆ ಎಂದು ಹಿರಿಯ ಯೋಗ ಸಾಧಕ ಅನಂತ ಜೋಶಿ ಹೇಳಿದರು.
ಈ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ನಗರ ಮತ್ತು ಸುತ್ತಮುತ್ತಲಿನ ಜನರು ಅತ್ಯುತ್ತಮ ಗುರು ನೀಡುವ ಯೋಗ ಮಾಹಿತಿ ತಿಳಿದು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.