ಕನ್ನಡಪ್ರಭ ವಾರ್ತೆ ಬೆಳಗಾವಿ
ಆರೋಗ್ಯಕರ ಬದುಕಿಗೆ ಯೋಗ ಅತ್ಯಗತ್ಯ. ಪ್ರತಿದಿನವು ಯೋಗ ಮಾಡುವುದರಿಂದ ಮನಸಿನ ಹಾಗೂ ದೇಹದ ಆರೋಗ್ಯ ಉತ್ತಮ ಪಡಿಸಿಕೊಳ್ಳಬಹುದು. ಯೋಗದಿಂದ ಬೌದ್ಧಿಕ ಬೆಳವಣಿಗೆ ಜತೆಗೆ ಸಾಮಾಜಿಕ ಬದುಕಿನಲ್ಲಿ ಉತ್ತಮ ಜೀವನ ನಡೆಸಲು ಸಹಕಾರಿಯಾಗಲಿದೆ. ಇಂದಿನ ಯುವ ಪೀಳಿಗೆ ತಮ್ಮ ದಿನಚರಿಯಲ್ಲಿ ಯೋಗ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಇತರೆ ಇಲಾಖೆಗಳ ಸಹಯೋಗದಲ್ಲಿ ಶುಕ್ರವಾರ ಕೆಪಿಟಿಸಿಎಲ್ ಭವನದಲ್ಲಿ ನಡೆದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯ ಆಧುನಿಕ ಒತ್ತಡ, ಕಲಬೆರಿಕೆ ಆಹಾರ, ಶ್ರಮರಹಿತ ಜೀವನದಿಂದ ವೈಜ್ಞಾನಿಕ ಸಾಧನಗಳ ದುರ್ಬಳಕೆ ಮಾಡಿಕೊಂಡು ದುಶ್ಚಟಗಳಿಂದ ಅನೇಕ ರೋಗಗಳಿಗೆ ಬಲಿಯಾಗಿದ್ದಾನೆ. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ನಾವು ಯೋಗವನ್ನು ಅಭ್ಯಾಸ ಮಾಡಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಜಿಲ್ಲಾ ಆಯುಷ್ ಅಧಿಕಾರಿ ಶ್ರೀಕಾಂತ ಸುಣಧೋಳಿ, ಜರ್ಮನಿ, ಫ್ರಾನ್ಸ್, ಕೆನಡಾ, ಇಂಗ್ಲೆಂಡ್, ರಷ್ಯಾ ದೇಶದ ಯೋಗ ಪಟುಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ, ಎನ್.ಜಿ.ಒ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಯೋಗ ಈಗ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಚೀನಾದಲ್ಲೂ ನಮ್ಮ ದೇಶದ ಯೋಗಪಟುಗಳು ಯೋಗ ಕಲಿಸುತ್ತಿದ್ದಾರೆ. ಇದು ದೇಶದ ಸಾಂಸ್ಕೃತಿಕ ಪರಂಪರೆಗೆ ಸಂದ ಗೌರವ. ವಿದೇಶಗಳಲ್ಲಿ ಯೋಗ ಜನಪ್ರಿಯತೆ ಗಳಿಸಿದೆ. ಯೋಗ ಮಾಡುವುದರಿಂದ ಆರೋಗ್ಯಕರ ಜೀವನಶೈಲಿ ರೂಪಗೊಳ್ಳಲಿದೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ದಿನಚರಿಯಲ್ಲಿ ಯೋಗ ಪದ್ಧತಿ ರೂಡಿಸಿಕೊಳ್ಳಬೇಕು.-ಜಗದೀಶ ಶೆಟ್ಟರ್,
ನೂತನ ಸಂಸದರು.