ಗದಗ: ದೈನಂದಿನ ಜೀವನದಲ್ಲಿ ನಮ್ಮ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಯೋಗವು ಮುಖ್ಯ ಪಾತ್ರ ವಹಿಸುತ್ತದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.
ಅವರು ಶುಕ್ರವಾರ ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಮತ್ತು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಗದಗ-ಬೆಟಗೇರಿ ನಗರಸಭೆ ಆಶ್ರಯದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ನಮಗೆ ದಿನನಿತ್ಯ ಆಹಾರ ಮತ್ತು ನೀರಿನ ಅವಶ್ಯಕತೆಯಂತೆಯೇ ಯೋಗವನ್ನು ಸಹ ರೂಢಿಸಿಕೊಳ್ಳಬೇಕು. ದೈನಂದಿನ ಚಟುವಟಿಕೆ ಸರಿಯಾಗಿ ಮಾಡಲು ಯೋಗ ಸಹಾಯಕಾರಿಯಾಗುತ್ತದೆ. ಪ್ರತಿಯೊಬ್ಬರೂ ಮನಸ್ಸು ಮತ್ತು ದೇಹದ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರತಿನಿತ್ಯ ಸೂರ್ಯ ನಮಸ್ಕಾರ, ಪ್ರಾಣಾಯಾಮ ಮತ್ತು ಧ್ಯಾನ ಇವುಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಮಾತನಾಡಿ, ನಾವು ಈಗ 10ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ. ಪ್ರತಿದಿನವು ನಾವು ನಮ್ಮ ಆರೋಗ್ಯ ಸಂರಕ್ಷಣೆಗೆ ಸ್ವಲ್ಪ ಸಮಯವನ್ನು ಕಲ್ಪಿಸಿಕೊಂಡು ಯೋಗಾಭ್ಯಾಸದಲ್ಲಿ ತೊಡಗಬೇಕು. ಇದರಿಂದ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದಾಗಿದೆ. ಯೋಗಾಭ್ಯಾಸದಲ್ಲಿ ತೊಡಗಲು ಎಲ್ಲರೂ ಗಮನ ನೀಡಬೇಕು ಎಂದರು.ಜಿಲ್ಲಾ ಆಯುಷ್ ಅಧಿಕಾರಿ ಡಾ. ಮಲ್ಲಿಕಾರ್ಜುನ ಉಪ್ಪಿನ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ದೇಶವು ಪ್ರಪಂಚಕ್ಕೆ ಯೋಗವನ್ನು ದೊಡ್ಡ ಕೊಡುಗೆಯಾಗಿ ಕೊಟ್ಟಿದೆ. ಆರೋಗ್ಯ ಸಂರಕ್ಷಣೆಗೆ ಯೋಗವು ಅತಿ ಮುಖ್ಯವಾಗಿದ್ದು, ಜಗತ್ತಿನ ಹಲವು ದೇಶಗಳು ಈ ಯೋಗ ದಿನ ಆಚರಿಸುತ್ತಿವೆ ಎಂದರು.
ಬೃಹತ್ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಎಸ್ಪಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಎಂ., ಡಿಡಿಪಿಐ ಎಂ.ಎ. ರಡ್ಡೇರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಯೋಗ ಸಂಸ್ಥೆಗಳ ಮುಖ್ಯಸ್ಥರು, ನಿಮಾ (ನ್ಯಾಶನಲ್ ಇಂಟ್ರಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್), ಸರ್ಕಾರೇತರ ಸಂಘ ಸಂಸ್ಥೆಯವರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಯೋಗಾಸಕ್ತರು ಹಾಜರಿದ್ದರು.ಡಾ. ಸತೀಶ ಹೊಂಬಾಳಿ ಯೋಗಾಭ್ಯಾಸ ನಡೆಸಿಕೊಟ್ಟರು. ಡಾ. ಹಿರೇಗೌಡ್ರ ಕಾರ್ಯಕ್ರಮ ನಿರೂಪಿಸಿದರು. ಸಂಜೀವ ನಾರಪ್ಪನವರ ವಂದಿಸಿದರು. ಬ್ರಹ್ಮಕುಮಾರಿ ಅಕ್ಕನವರು ಧ್ಯಾನ ಹಾಗೂ ಶಾಂತಿ ಮಂತ್ರವನ್ನು ಪ್ರಸ್ತುತಪಡಿಸಿದರು.