- ಸಂಕಲ್ಪ ಫೌಂಡೇಷನ್‌ನಿಂದ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಮುಂಭಾಗ ಯೋಗ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಯೋಗ ಎನ್ನುವುದು ಪುರಾತನ ಕಾಲದಿಂದ ಬಂದಿರುವ ಒಂದು ಕಲೆ. ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಯಾವುದೇ ರೀತಿಯ ಕಾಯಿಲೆಗಳು ಸುಳಿಯುವುದಿಲ್ಲ ಎಂದು ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿ ಗೌಡರ ಚನ್ನಬಸಪ್ಪ ಅಭಿಪ್ರಾಯಪಟ್ಟರು.ನಗರದ ಹಳೇ ಪೇಟೆಯ ಶ್ರೀ ದುರ್ಗಾಂಬಿಕಾ ದೇವಸ್ಥಾನ ಮುಂಭಾಗದಲ್ಲಿ ಭಾನುವಾರ ಮುಂಜಾನೆ ಸಂಕಲ್ಪ ಫೌಂಡೇಷನ್ ನೇತೃತ್ವದಲ್ಲಿ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ಯೋಗ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿನಿತ್ಯ ಅವರವರ ವಯಸ್ಸಿಗೆ ತಕ್ಕಂತೆ ಯೋಗ ಮಾಡುವುದು, ಹಸಿರು ತರಕಾರಿ, ಹಣ್ಣು ಹಂಪಲುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಪ್ರತಿದಿನ ಬಹಳಷ್ಟು ಜನರು ದಾವಣಗೆರೆ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆಗೆ ತಮ್ಮ ಕಾಯಿಲೆ ಬಗ್ಗೆ ತಿಳಿದುಕೊಳ್ಳಲು ಹೋಗುತ್ತಿರುವುದನ್ನು ನೋಡಿದ್ದೇವೆ. ಆದ್ದರಿಂದ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಯೋಗ ಮಾಡುವುದರಿಂದ ನಮ್ಮ ಮುಖದಲ್ಲಿ ಕಾಂತಿ ಹೆಚ್ಚುತ್ತದೆ. ಮನಸ್ಸಿನಲ್ಲಿ ಹೊಸ ಪರಿವರ್ತನೆ ಮೂಡುತ್ತದೆ. ನಿತ್ಯ ಯೋಗ ಮಾಡುವುದರಿಂದ ರೋಗಮುಕ್ತರಾಗಲು ಸಾಧ್ಯ ಎಂದು ತಿಳಿಸಿದರು.ಪಾಲಿಕೆ ಸದಸ್ಯ ಎಲ್.ಡಿ.ಗೋಣೆಪ್ಪ ಮಾತನಾಡಿ, ನಿತ್ಯ ದೇವರಿಗೆ ನಿತ್ಯ ಪೂಜೆ, ಪುನಸ್ಕಾರ, ನೈವೇದ್ಯ, ಪ್ರಾರ್ಥನೆಯನ್ನು ಮಾಡುತ್ತೇವೆ. ಅದೇ ರೀತಿಯಾಗಿ ಪ್ರತಿನಿತ್ಯ ಎಲ್ಲರೂ ಯೋಗಾಸನ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು. ಇಲ್ಲಿ ಯೋಗ ಗುರುಗಳು ನಿಮಗೆ ವಿವಿಧ ಸರಳ ಆಸನಗಳನ್ನು ಬೋಧನೆ ಮಾಡುತ್ತಿದ್ದಾರೆ. ಅವುಗಳನ್ನು ನಿತ್ಯ ರೂಢಿ ಮಾಡಿಕೊಳ್ಳಿರಿ. ಅಮ್ಮನವರ ಸನ್ನಿಧಿಯಲ್ಲಿ ಯೋಗ ಕಾರ್ಯಕ್ರಮ ಮಾಡುತ್ತಿರುವುದರಿಂದ ಈ ಹಳೇ ದಾವಣಗೆರೆ ಭಾಗದ ಜನರಿಗೆ ಅನುಕೂಲವಾಗುತ್ತಿದೆ ಎಂದು ಹೇಳಿದರು.
ಹಲವಾರು ಸಮಾಜಮುಖಿ ಸೇವೆ:ಸಂಕಲ್ಪ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಜಿ.ಮಹಾಂತೇಶ ಮಾತನಾಡಿ, ನಮ್ಮ ಫೌಂಡೇಷನ್‌ನಿಂದ ಕಳೆದ ನಾಲ್ಕು ವರ್ಷಗಳಿಂದ ಬಡಜನರಿಗೆ ಆರೋಗ್ಯ ತಪಾಸಣೆ ಶಿಬಿರ, ಉಚಿತ ಕಣ್ಣಿನ ತಪಾಸಣೆ ಶಿಬಿರ, ಪ್ರಥಮ ಚಿಕಿತ್ಸೆ, ರಕ್ತದಾನ ಶಿಬಿರ, ಮಕ್ಕಳಿಗೆ ನೋಟ್ ಬುಕ್ ವಿತರಣೆ ಸೇರಿದಂತೆ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಎಲ್ಲರಿಗೂ ಉತ್ತಮ ಆರೋಗ್ಯ ಸಿಗಲಿ ಎಂಬ ಉದ್ದೇಶದಿಂದ ಈ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇಂದು ದುಗ್ಗಮ್ಮನ ಸನ್ನಿಧಿಯಲ್ಲಿ ಯೋಗಾಸನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಫೌಂಡೇಷನ್ ಗೌರವಾಧ್ಯಕ್ಷ ಕಣಕುಪ್ಪಿ ಕರಿಬಸಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಪ್ರಚಾರಕ ಹರೀಶ, ಯೋಗ ಶಿಕ್ಷಕರಾದ ಪ್ರಕಾಶ ಉತ್ತಂಗಿ, ಶಿವಪುತ್ರಪ್ಪ, ಎಲ್.ಡಿ.ಸುರೇಶ, ಎಂ.ಸಿ. ವಿಜಯಕುಮಾರ, ರಾಮಚಂದ್ರ ಡಿ. ಶೆಟ್ಟರ್, ನಾಗರಾಜ್ ಕೆ. ಕುರುಡೇಕರ್, ಎಸ್.ಪ್ರಭಾಕರ, ರಾಜು ಬದ್ದಿ, ಕೆ.ಜೆ.ಬದರಿಪ್ರಸಾದ, ನಾಗರಾಜ, ರೇವಣಸಿದ್ದಯ್ಯ ಹಿರೇಮಠ, ಪ್ರಕಾಶ, ರೇವಣಯ್ಯ, ಕುಮಾರಸ್ವಾಮಿ, ಎನ್.ಶ್ರೀಕಾಂತ, ದುಗ್ಗಪ್ಪ, ಕಿರಣಕುಮಾರ, ರವಿ, ಮಂಜುನಾಥ, ಸಂಕಲ್ಪ ಯೋಗ ಶಾಲೆ ಪದಾಧಿಕಾರಿಗಳು, ಮಹಿಳೆಯರು, ಇತರರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಪ್ರತಿಭಾ ಪ್ರಾರ್ಥಿಸಿದರೆ, ಬಿ.ಎಸ್. ನಾಗಭೂಷಣ ಕಾರ್ಯಕ್ರಮ ನಿರೂಪಿಸಿದರು.
- - - -23ಕೆಡಿವಿಜಿ31ಃ:ದಾವಣಗೆರೆಯಲ್ಲಿ ಸಂಕಲ್ಪ ಫೌಂಡೇಷನ್‌ನಿಂದ ನಡೆದ ಯೋಗ ಕಾರ್ಯಕ್ರಮವನ್ನು ಗೌಡರ ಚನ್ನಬಸಪ್ಪ ಉದ್ಘಾಟಿಸಿದರು.-23ಕೆಡಿವಿಜಿ32ಃ:
ದಾವಣಗೆರೆಯಲ್ಲಿ ಸಂಕಲ್ಪ ಫೌಂಡೇಷನ್‌ನಿಂದ ನಡೆದ ಯೋಗ ಕಾರ್ಯಕ್ರಮದಲ್ಲಿ ಕಣಕುಪ್ಪಿ ಕರಿಬಸಪ್ಪ ಯೋಗ ತರಬೇತಿ ನೀಡಿದರು.