ಬಳ್ಳಾರಿ: ಆರೋಗ್ಯವೇ ಭಾಗ್ಯ ಎಂಬ ದಿವ್ಯ ಮಂತ್ರಕ್ಕೆ ಜೀವ ತುಂಬುವಂತೆ ಭಾನುವಾರ ಜಿಲ್ಲಾ ಕೇಂದ್ರದಲ್ಲಿ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅತ್ಯಂತ ಸಡಗರ ಮತ್ತು ಉತ್ಸಾಹದಿಂದ ಆಚರಿಸಲಾಯಿತು.
ಪೂರ್ವ ನಿಗದಿಯಂತೆ ಮುಂಜಾನೆ 7 ಗಂಟೆಯಿಂದಲೇ ನೆರೆದ ಸಾವಿರಾರು ಸಾರ್ವಜನಿಕರು ಸೂರ್ಯ ನಮಸ್ಕಾರ, ಪ್ರಾಣಾಯಾಮ ಹಾಗೂ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಅಧಿಕಾರಿಗಳು, ಸಿಬ್ಬಂದಿ, ಶಾಲಾ- ಕಾಲೇಜು ಮಕ್ಕಳು, ಹಿರಿಯ ನಾಗರಿಕರು, ಸಾರ್ವಜನಿಕರು ಎಲ್ಲರೂ ಒಂದೇ ಲಯದಲ್ಲಿ ಯೋಗ ಮಾಡಿ ಗಮನ ಸೆಳೆದರು.
ಪತಂಜಲಿ ಯೋಗ ಸಮಿತಿಯ ಜಿಲ್ಲಾ ಸಂಚಾಲಕ ಹಾಗೂ ಯೋಗ ತರಬೇತುದಾರ ಇಸ್ವಿ ಪಂಪಾಪತಿ ದೈನಂದಿನ ಜೀವನಕ್ಕೆ ಅಗತ್ಯವಿರುವ ಪ್ರಮುಖ ಆಸನಗಳ ಮಹತ್ವವನ್ನು ತಿಳಿಸಿಕೊಡುವ ಮೂಲಕ 45 ನಿಮಿಷಗಳ ಕಾಲ ಯೋಗಾಭ್ಯಾಸ ಮಾಡಿಸಿದರು.ಯೋಗ ಎನ್ನುವುದು ಕೇವಲ ಕಸರತ್ತಲ್ಲ; ಅದು ನಮ್ಮ ಆತ್ಮವನ್ನು ಪ್ರಕೃತಿಯೊಂದಿಗೆ ಜೋಡಿಸುವ ಅದ್ಭುತ ಕಲೆ. ಇಂದಿನ ಒತ್ತಡದ ಜಗತ್ತಿಗೆ ಯೋಗವೇ ಸಂಜೀವಿನಿಯಾಗಿದೆ. ವರ್ಷದ 365 ದಿನಗಳೂ ಯೋಗವನ್ನು ನಮ್ಮ ಜೀವನದ ಒಂದು ಭಾಗವಾಗಿಸಿಕೊಳ್ಳಬೇಕು. ದಿನಕ್ಕೆ ಕೇವಲ 20 ರಿಂದ 30 ನಿಮಿಷಗಳ ಯೋಗಾಭ್ಯಾಸವು ನಮ್ಮನ್ನು ದೈಹಿಕವಾಗಿ ಸದೃಢ ಹಾಗೂ ಮಾನಸಿಕವಾಗಿ ಶಾಂತವಾಗಿಡಬಲ್ಲದು ಎಂದು ತಿಳಿಸಿದರು.
ಯೋಗಾಭ್ಯಾಸದಲ್ಲಿ ಭಾಗವಹಿಸಿದವರೆಲ್ಲರಿಗೂ ಅರಣ್ಯ ಇಲಾಖೆ ವತಿಯಿಂದ ವಿವಿಧ ಬಗೆಯ ಸಸಿ- ಗಿಡಗಳನ್ನು ವಿತರಿಸಲಾಯಿತು.