೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ । ಸ್ವಸ್ಥ ಹಾಸನಕ್ಕೆ ಯೋಗ ಹಾದಿ
ಕನ್ನಡಪ್ರಭ ವಾರ್ತೆ ಹಾಸನಪ್ರಸ್ತುತ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸಕ್ಕರೆ ಕಾಯಿಲೆ, ಹೃದಯಾಘಾತ ಸಂಭವಿಸುತ್ತಿದ್ದು, ಯಾವ ವೈದ್ಯರ ಬಳಿ ಹೋದರೂ ಮೊದಲು ಹೇಳುವುದು ಯೋಗ ಮಾಡಿ ಎಂದು. ಹಾಗಾಗಿ ಎಲ್ಲಾ ಕಾಯಿಲೆಗಳಿಗೂ ಯೋಗ ಒಂದೇ ಮದ್ದಾಗಿದೆ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಅಭಿಪ್ರಾಯಪಟ್ಟರು.
ನಗರದ ನಗರದ ಸಾಲಗಾಮೆ ರಸ್ತೆ ಬಳಿ ಇರುವ ಜಿಲ್ಲಾ ಹಾಕಿ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಯುವಜನ ಸಬಲೀಕರಣ, ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಸೇರಿದಂತೆ ವಿವಿಧ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.‘ನಾವು ಯೋಗ ದಿನ ಎನ್ನುವುದನ್ನು ಬಿಟ್ಟು ನಾವೆಲ್ಲರೂ ಯೋಗದ ಹಾದಿಯಲ್ಲಿ ಪ್ರತಿದಿನ ಯೋಗಾ ಮಾಡುವುದರಿಂದ ತಮ್ಮ ಸ್ವಾಸ್ಥ್ಯಕ್ಕೆ ಉತ್ತಮವಾದ ನಡೆ ಕಂಡುಕೊಳ್ಳಬಹುದು. ಪ್ರಸ್ತುತದಲ್ಲಿ ೨೫ ವರ್ಷಕ್ಕೆ ಡಯಾಬಿಟಿಸ್, ಹೃದಯಾಘಾತ ಸಂಭವಿಸುತ್ತಿದೆ. ಎಲ್ಲಾ ಕಾಯಿಲೆಗಳಿಗೂ ಒಂದೇ ಮದ್ದು ಎಂದರೆ ಯೋಗ. ಸ್ವಸ್ಥ ಹಾಸನ ನಗರವನ್ನು ರೂಪಿಸಬೇಕಿದೆ. ನೀರನ್ನು ಮಿತವಾಗಿ ಬಳಕೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.
ಪ್ಲಾಸ್ಟಿಕ್ ಮುಕ್ತ ಹಾಸನವನ್ನಾಗಿ ಮಾಡಬೇಕು. ತಮ್ಮ ಸುತ್ತ ಮುತ್ತಲಿನ ಪರಿಸರವನ್ನು ಉತ್ತಮವಾಗಿಡಲು ಗಿಡ ಮರಗಳನ್ನು ಬೆಳೆಸಬೇಕು. ಸ್ವಚ್ಛತೆ ವಿಚಾರದಲ್ಲಿ ಈ ಹಾಸನ ನಗರವನ್ನು ಪ್ರಥಮ ಸ್ಥಾನಕ್ಕೆ ಕೊಂಡೂಯ್ಯಲು ಎಲ್ಲರೂ ಒಟ್ಟಿಗೆ ಕಾರ್ಯನಿರ್ವಹಿಸಬೇಕು ಎಂದರು.ಶಾಸಕ ಎಚ್.ಪಿ.ಸ್ವರೂಪ್ ಮಾತನಾಡಿ, ಹಾಸನದಲ್ಲಿ ಇರುವ ಉದ್ಯಾನದಲ್ಲಿ ಯೋಗ ಪ್ರಿಯರು ಯೋಗಾಭ್ಯಾಸ ಮಾಡುತ್ತಿದ್ದು, ಶಾಲಾ ಕಾಲೇಜುಗಳಲ್ಲಿ ವಾರಕ್ಕೊಮ್ಮೆ ಎರಡು ಬಾರಿಯಾದರೂ ಯೋಗಾಭ್ಯಾಸ ಮಾಡುವ ಜತೆಗೆ ಯೋಗದ ಬಗ್ಗೆ ಪಠ್ಯದಲ್ಲೂ ಸೇರಿಸಬೇಕು. ಯೋಗ ಮಾಡುವುದರಿಂದ ಮನಸ್ಸಿಗೆ ಉಲ್ಲಾಸ, ದೈಹಿಕವಾಗಿ ಸದೃಢತೆ ಜೊತೆಗೆ ಆರೋಗ್ಯವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ನಗರದ ಸ್ವಚ್ಛತೆ ವಿಚಾರವಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಜುಲೈ ೧ ರಿಂದ ಪ್ಲಾಸ್ಟಿಕ್ ವಿಚಾರದಲ್ಲಿ ಒಂದು ನಿರ್ಧಾರ ಕೈಗೊಳ್ಳಲಾಗುವುದು. ಪ್ಲಾಸ್ಟಿಕ್ ಉದ್ಯೋಗ ಮಾಡುತ್ತಿದ್ದರೆ ಕೂಡಲೇ ನಿಲ್ಲಿಸಬೇಕು. ಸ್ವಚ್ಛತೆಯಲ್ಲಿ ಹಾಸನ ಹಿಂದೆ ಉಳಿದಿದ್ದು, ಸ್ವಚ್ಛತೆಯಲ್ಲಿ ಹಾಸನವನ್ನು ಮೊದಲ ಸ್ಥಾನಕ್ಕೆ ತರಬೇಕು ಎಂದು ಮನವಿ ಮಾಡಿದರು.ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ‘ನಾನು ಕೂಡ ಮೊದಲು ಯೋಗವನ್ನು ಮಾಡುತ್ತಿದ್ದು, ಈಗ ಕೆಲಸದ ಒತ್ತಡದಲ್ಲಿ ಸಾಧ್ಯವಾಗುತ್ತಿಲ್ಲ. ಯೋಗದಿಂದ ಹೊರಗೆ ಉಳಿದರೆ ನೀರಿನಿಂದ ಮೀನನ್ನು ಹೊರಗೆ ತೆಗೆದು ಹಾಕಿದಂತೆ. ಯೋಗದಲ್ಲಿ ಹೆಣ್ಣು ಮಕ್ಕಳೇ ಹೆಚ್ಚು ಅಳವಡಿಸಿಕೊಳ್ಳುತಿದ್ದಾರೆ. ಯೋಗ ಎಂಬುದು ಹೆಣ್ಣು ಮಕ್ಕಳಿಗೆ ಮಾತ್ರವಲ್ಲ. ಎಲ್ಲರಿಗೂ ಸೇರಿದೆ’ ಎಂದು ಕಿವಿಮಾತು ಹೇಳಿದರು.
ಯೋಗವನ್ನು ಪ್ರತಿನಿತ್ಯ ಅಳವಡಿಸಿಕೊಂಡರೆ ದೇಹದ ಪ್ರತಿ ಅಂಗಾಂಗಗಳಿಗೆ ಚೇತನ ಬರುತ್ತದೆ. ಯೋಗ ಎಂಬುದು ಸಮಾಜಕ್ಕೆ ಅತ್ಯವಶ್ಯಕವಾಗಿಬೇಕು ಎಂಬುದು ಘೋಷವಾಕ್ಯವಾಗಿದೆ. ಸಮಾಜಕ್ಕೆ ಒಳಿತನ್ನು ಮಾಡುವವರು ಉತ್ತಮ ಆರೋಗ್ಯವನ್ನು ಪಡೆದುಕೊಂಡಿರುತ್ತಾರೆ. ಯೋಗಾಭ್ಯಾಸ ಮಾಡುವುದರ ಮೂಲಕ ಅದರ ಪ್ರಯೋಜನವನ್ನು ಪಡೆಯಬಹುದು ಎಂದು ಸಲಹೆ ನೀಡಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಡಾ. ಗುರುಬಸವರಾಜು, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ತಹಸೀಲ್ದಾರ್ ಶ್ವೇತ ಎನ್.ರವೀಂದ್ರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ. ಹರೀಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ ಮೂಸೆ ಬ್ಯಾರಿ, ಸಂಚಾಲಕ ಬಿ.ಎಂ. ಲಕ್ಷ್ಮಿಕಾಂತ್, ಡಾ ಜಿ.ಎಸ್. ರವೀಂದ್ರ, ಶ್ರೀ ಧರ್ಮಸ್ಥಳ ಆಯುರ್ವೇದಿಕ್ ಆಸ್ಪತ್ರೆ ಹಾಗೂ ಮಹಾವಿದ್ಯಾಲಯದ ನರಸಿಂಹ ಎನ್.ರಾವ್, ಶೈಲಜಾ, ಪತಂಜಲಿ ಯೋಗಾ ಪರಿವಾರದ ಶೇಷಪ್ಪ, ಗಿರೀಶ್ ಇದ್ದರು.