ಯೋಗದಿಂದ ಸಮಸ್ಯೆಗಳನ್ನು ಎದುರಿಸಿ ಬದುಕುವ ಶಕ್ತಿ: ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

KannadaprabhaNewsNetwork |  
Published : Feb 16, 2025, 01:45 AM IST
೧೫ಎಸ್.ಆರ್.ಎಸ್೪ಪೊಟೋ೧ (ಶ್ರೀಗಳು ಅಭಿಷೇಕ ನಡೆಸಿದರು.)೧೫ಎಸ್.ಆರ್.ಎಸ್೪ಪೊಟೋ೨ (ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಉಮ್ಮಚಗಿ ಶ್ರೀಮಾತಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಎನ್.ಹೆಗಡೆ ಹಿರೇಸರ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.)೧೫ಎಸ್.ಆರ್.ಎಸ್೪ಪೊಟೋ೩ (ಸಂಯೋಗ ಪ್ರಕೃತಿ ಚಿಕಿತ್ಸಾಲಯದ ಮುಖ್ಯಸ್ಥ ಡಾ.ಅಶ್ವತ್ಥ ಹೆಗಡೆ ದಂಪತಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.) | Kannada Prabha

ಸಾರಾಂಶ

ಸರಿಯಾದ ಸ್ಥಿತಿಯ ಮನಸ್ಸು ನಮ್ಮದಾಗಿದ್ದರೆ ಯಶಸ್ಸು ಸಿಗುತ್ತದೆ. ಆತುರತೆ, ಅನಗತ್ಯ ಆಲೋಚನೆಗಳಿಂದ ಹೊರಬರಬೇಕು. ಮನಸ್ಸು ಸರಿಯಿಲ್ಲದಿರುವುದೇ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಶಿರಸಿ: ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಿ ಬದುಕುವ ಶಕ್ತಿ ಯೋಗದಿಂದ ಬರುತ್ತದೆ. ಪ್ರತಿದಿನ ಬ್ರಾಹ್ಮೀ ಮುಹೂರ್ತದಲ್ಲಿ ಪ್ರತಿಯೊಬ್ಬರೂ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ಅವರು ಶನಿವಾರ ನಗರದ ಯೋಗ ಮಂದಿರದಲ್ಲಿ ಆಯೋಜಿಸಿದ್ದ ಯೋಗಮಂದಿರದ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಯಜ್ಞ ನಡೆಯುವ ಸ್ಥಳಕ್ಕೆ ಅವಶ್ಯವಾಗಿ ಹೋಗಬೇಕು. ಯಜ್ಞದೊಂದಿಗೆ ಪ್ರತಿ ವರ್ಷ ಯೋಗ ಮಂದಿರದಲ್ಲಿ ವಾರ್ಷಿಕೋತ್ಸವ ನಡೆಯುತ್ತದೆ. ಯೋಗದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿಯೇ ಯೋಗ ಮಂದಿರ ನಿರ್ಮಾಣ ಮಾಡಲಾಗಿದೆ. ಯೋಗದ ಜತೆ ಅನೇಕ ಕಾರ್ಯಕ್ರಮಗಳೊಂದಿಗೆ ೨೮ ವರ್ಷಗಳ ಕಾಲ ಯೋಗ ಮಂದಿರ ನಡೆದುಕೊಂಡು ಬಂದಿದೆ. ಸರಿಯಾದ ಸ್ಥಿತಿಯ ಮನಸ್ಸು ನಮ್ಮದಾಗಿದ್ದರೆ ಯಶಸ್ಸು ಸಿಗುತ್ತದೆ. ಆತುರತೆ, ಅನಗತ್ಯ ಆಲೋಚನೆಗಳಿಂದ ಹೊರಬರಬೇಕು. ಮನಸ್ಸು ಸರಿಯಿಲ್ಲದಿರುವುದೇ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸರಿಯಿರುವಿಕೆಯನ್ನು ಪಡೆದುಕೊಳ್ಳುವುದೇ ಯೋಗದ ಮುಖ್ಯ ಉದ್ದೇಶವಾಗಿದೆ. ಪ್ರತಿದಿನ ಮುಂಜಾನೆ ಯೋಗ, ಪ್ರಾಣಾಯಾಮವನ್ನು ಮಾಡುವುದರಿಂದ ಮನಸ್ಸನ್ನು ಸರಿಯಾಗಿರಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಯೋಗದಿಂದ ಬರುತ್ತದೆ. ಯೋಗದಿಂದ ಆರೋಗ್ಯ, ಧರ್ಮ, ಸಂಸ್ಕೃತಿಗಳನ್ನು ಎತ್ತಿಹಿಡಿಯಬಹುದು. ಯೋಗಕ್ಕೆ ಅಷ್ಟು ಪ್ರಾಮುಖ್ಯ ಇದೆ ಎಂದರು.

ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಉಮ್ಮಚಗಿ ಶ್ರೀಮಾತಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ಹಾಗೂ ಸಂಯೋಗ ಪ್ರಕೃತಿ ಚಿಕಿತ್ಸಾಲಯದ ಮುಖ್ಯಸ್ಥ ಡಾ. ಅಶ್ವತ್ಥ ಹೆಗಡೆ ದಂಪತಿ ಅವರನ್ನು ಗೌರವಿಸಿದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ಕೇಂದ್ರ ಮಾತೃ ಮಂಡಳಿ ಅಧ್ಯಕ್ಷೆ ಗೀತಾ ಹೆಗಡೆ, ಶೀಗೇಮನೆ, ಸುನಂದಾ ಭಟ್ಟ, ಕೆ.ವಿ. ಭಟ್ಟ ಮತ್ತಿತರರು ಉಪಸ್ಥಿತರಿದ್ದರು.

ಯೋಗ ಮಂದಿರ ಅಧ್ಯಕ್ಷ ಎಸ್.ಎನ್. ಭಟ್ಟ ಉಪಾಧ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಮಂದಿರ ಕಾರ್ಯದರ್ಶಿ ಸಿ.ಎಸ್. ಹೆಗಡೆ ವರದಿ ವಾಚಿಸಿದರು.

ಮಾತೆಯರು ಭಗವದ್ಗೀತಾ ಧ್ಯಾನ ಶ್ಲೋಕ ಪಠಿಸಿದರು. ನಂದನ ಭಟ್ಟ ಯೋಗ ಪ್ರದರ್ಶಿಸಿದರು. ಭಾರತಿ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ಶಿರಸಿ ಮಾತೃ ಮಂಡಳಿ ಕಾರ್ಯದರ್ಶಿ ಹೇಮಾ ಹೆಗಡೆ ನಿರ್ವಹಿಸಿದರು. ಬೆಳಗ್ಗೆ ರುದ್ರ ಹವನ, ಶತರುದ್ರ, ಸಾಮೂಹಿಕ ಗಣಹವನ, ಮಾತೆಯರಿಂದ ಕುಂಕುಮಾರ್ಚನೆ, ಪಾದಪೂಜೆ, ಭಿಕ್ಷೆ, ಅನ್ನಸಂತರ್ಪಣೆ ನಡೆಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ