ಯೋಗ ಎಂಬುದು ಶರೀರ, ಮನಸ್ಸು ಬೆಸೆಯುವ ವಿಜ್ಞಾನ: ಯೋಗ ತಜ್ಞ ಡಾ.ಗುರುಬಸವರಾಜ್ ಯಲಗಚ್ಚಿನ

KannadaprabhaNewsNetwork | Published : Jun 24, 2024 1:31 AM

ಸಾರಾಂಶ

ಶರೀರ ಹಾಗೂ ಮನಸ್ಸುಗಳನ್ನು ಕೇಂದ್ರೀಕರಿಸಿ ಏಕಾಗ್ರತೆಯ ಕಡೆಗೆ ಒಯ್ಯುವಲ್ಲಿ ಯೋಗದ ಪಾತ್ರ ಮಹತ್ವದ್ದಾಗಿದೆ ಎಂದು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಉಪನ್ಯಾಸಕ, ಆಯುರ್ವೇದ ಮತ್ತು ಯೋಗ ತಜ್ಞ ಡಾ.ಗುರುಬಸವರಾಜ್ ಯಲಗಚ್ಚಿನ ಅಭಿಪ್ರಾಯಪಟ್ಟರು.ಹಾಸನದಲ್ಲಿ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್‌ಆರ್‌ಎಸ್‌ ಪ್ರಜ್ಞಾ ಶಾಲೆಯಲ್ಲಿ ಯೋಗ ದಿನಾಚರಣೆ

ಕನ್ನಡಪ್ರಭ ವಾರ್ತೆ ಹಾಸನ

ಯೋಗ ಎಂಬುದು ಶರೀರ ಮತ್ತು ಮನಸ್ಸನ್ನು ಒಗ್ಗೂಡಿಸಿ ಒಂದನ್ನೊಂದು ಬೆಸೆಯುವ ವಿಜ್ಞಾನವಾಗಿದೆ. ಶರೀರ ಹಾಗೂ ಮನಸ್ಸುಗಳು ಒಂದು ನಾಣ್ಯದ ಎರಡು ಮುಖಗಳಂತಿದ್ದು ಅವೆರಡನ್ನು ಕೇಂದ್ರೀಕರಿಸಿ ಏಕಾಗ್ರತೆಯ ಕಡೆಗೆ ಒಯ್ಯುವಲ್ಲಿ ಯೋಗದ ಪಾತ್ರ ಮಹತ್ವದ್ದಾಗಿದೆ ಎಂದು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಉಪನ್ಯಾಸಕ, ಆಯುರ್ವೇದ ಮತ್ತು ಯೋಗ ತಜ್ಞ ಡಾ.ಗುರುಬಸವರಾಜ್ ಯಲಗಚ್ಚಿನ ಅಭಿಪ್ರಾಯಪಟ್ಟರು.

ನಗರದ ಎಸ್‌ಆರ್‌ಎಸ್‌ ಪ್ರಜ್ಞಾ ವಿದ್ಯಾಶಾಲೆಯಲ್ಲಿ ಜೂ.21 ರಂದು ಹಮ್ಮಿಕೊಂಡ ೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಯೋಗ ಪದದ ಅರ್ಥವನ್ನು ವ್ಯಾಖ್ಯಾನಿಸಿ, ಅದರ ಮಹತ್ವ ಮತ್ತು ಅದರಿಂದ ದೇಹಕ್ಕಾಗುವ ಪ್ರಯೋಜನಗಳನ್ನು ಮಕ್ಕಳಿಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ವಿದ್ಯಾರ್ಥಿಗಳು ಸಣ್ಣ ಕಾಲಾವಧಿಯಿಂದ ಪ್ರಾರಂಭಿಸಿ, ನಂತರ ಇಚ್ಛೆ ಮತ್ತು ಅಗತ್ಯಕ್ಕೆ ತಕ್ಕಂತೆ ಅಭ್ಯಾಸವನ್ನು ವಿಸ್ತರಿಸಿಕೊಂಡು ವಿದ್ಯಾರ್ಜನೆಯಲ್ಲಿ ಗಮನಾರ್ಹ ಸಾಧನೆ ಮಾಡಬಹುದು. ಪ್ರತಿಯೊಬ್ಬರೂ ಜೀವನದಲ್ಲಿ ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ, ಯಶಸ್ಸು ಹಾಗೂ ಮನೋಲ್ಲಾಸರೆಲ್ಲವೂ ಕೈಗೂಡಲು ಯೋಗದ ಅಭ್ಯಾಸ ಮಾಡುವುದು ಇಂದಿನ ಯಾಂತ್ರಿಕ ಯುಗದಲ್ಲಿ ಅವಶ್ಯಕ. ಯೋಗವು ದೈಹಿಕ-ಮಾನಸಿಕ-ಆಧ್ಯಾತ್ಮಿಕ ಅಭ್ಯಾಸವಾಗಿದ್ದು ಮಕ್ಕಳು ಎಳೆಯ ವಯಸ್ಸಿನಿಂದಲೇ ರೂಢಿಸಿಕೊಳ್ಳುವುದರಿಂದ ಮನೋದೈಹಿಕ ಕೌಶಲ್ಯ ವೃದ್ಧಿಗೆ ಸಹಕಾರಿಯಾಗಿ ಉಜ್ಜಲ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ರಾಜಗೋಪಾಲ ಶೆಟ್ಟಿ ಮಾತನಾಡಿ, ‘ಆರೋಗ್ಯವೇ ಭಾಗ್ಯ ಎಂಬಂತೆ ನಮ್ಮ ಎಲ್ಲ ಸಾಧನೆಗೆ ಉತ್ತಮ ಆರೋಗ್ಯವೇ ಮೂಲಮಂತ್ರವಾಗಿದೆ. ಯೋಗ ವಿಶ್ವಕ್ಕೆ ಭಾರತದ ಅತ್ಯಮೂಲ್ಯ ಕೊಡುಗೆ. ಯೋಗ ನಮಗೆ ವ್ಯಾಯಾಮದ ಆಸನಗಳು ಮಾತ್ರವಲ್ಲದೆ ನಾವು ವಿಶ್ವ ಹಾಗೂ ಪ್ರಕೃತಿಯ ಜತೆಗೆ ಏಕತೆಯ ಅರ್ಥವನ್ನು ಕಂಡು ಹಿಡಿಯಲು ನೆರವಾಗುತ್ತದೆ. ಯೋಗವು ನಮ್ಮ ಉತ್ತಮ ಜೀವನ ಶೈಲಿ, ಸ್ಥಿತಪ್ರಜ್ಞೆ ಮತ್ತು ಸದೃಢ ಆರೋಗ್ಯವನ್ನು ಉತ್ತಮವಾಗಿಸುವ ವಿಶೇಷ ಕಲೆಯಾಗಿದೆ. ಪ್ರತಿ ನಿತ್ಯ ಯೋಗ ಮಾಡಿದರೆ ನಮ್ಮ ದೇಹ ಮತ್ತು ಮನಸ್ಸು ಕ್ರಿಯಾಶೀಲವಾಗಿರುತ್ತದೆ. ಕ್ರಮಬದ್ಧ ಹಾಗೂ ನಿಯಮಿತ ಯೋಗ ಅಭ್ಯಾಸವನ್ನು ಚಿಕ್ಕಂದಿನಿಂದಲೇ ಮಾಡುತ್ತ ಬಂದರೆ ಸದೃಢ ಹಾಗೂ ಆರೋಗ್ಯಯುತ ಸಮಾಜಕ್ಕೆ ಬುನಾದಿಯಾಗಬಹುದು’ ಎಂದು ಅಭಿಪ್ರಾಯಪಟ್ಟರು.

ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರದೊಂದಿಗೆ ೧೦ನೇ ಅಂತಾರಾಷ್ಟ್ರೀಯ ಯೋಗ ದಿನ-೨೦೨೪ ಕ್ಕೆ ಚಾಲನೆ ನೀಡಿದರು. ಶಾಲೆಯ ಯೋಗ ಶಿಕ್ಷಕರ ಮಾರ್ಗದರ್ಶನದೊಂದಿಗೆ ಸುಮಾರು ೧ ಗಂಟೆಯ ಕಾಲ ಶಾಲೆಯ ಒಳ ಹಾಗೂ ಹೊರಾಂಗಣದಲ್ಲಿ ವಿವಿಧ ಆಸನಗಳನ್ನು ಪ್ರದರ್ಶಿಸಿದರು.

ಶಾಲಾ ಮಕ್ಕಳು ವಿವಿಧ ಯೋಗಾಸನಗಳ ಪಿರಮಿಡ್ ಪ್ರದರ್ಶನ ನೀಡಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಅಧ್ಯಕ್ಷ ರಾಜಗೋಪಾಲ ಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ ನಟರಾಜ್‌ ಎಂ., ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯೆ ಆಶಾ ನಟರಾಜ್, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Share this article