ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಟಿಎಪಿಸಿಎಂಎಸ್ ಸಮುದಾಯ ಭವನದ ಆವರಣದಲ್ಲಿ ತಾಲೂಕಿನ ವಿವಿಧ ಸಂಘ- ಸಂಸ್ಥೆಗಳು ಒಗ್ಗೂಡಿ ಆಯೋಜಿಸಿದ್ದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿಯವರ ಮೊದಲನೇ ವರ್ಷದ ಪುಣ್ಯ ಸ್ಮರಣೆ ಮತ್ತು ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಸಂಸ್ಥಾಪಕ ಸ್ವಾಮೀಜಿ ಭೈರವೈಕ್ಯ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಕೆ.ಆರ್.ಪೇಟೆ ಪಟ್ಟಣದ ಮಣ್ಣಿನಲ್ಲಿ ಹುಟ್ಟಿ ಬೆಳೆದವರು. ಪಟ್ಟಣದ ಶ್ರೀಮಂತ ಬಸ್ ತಿಮ್ಮೇಗೌಡರ ಕುಟುಂಬದಲ್ಲಿ ಜನಿಸಿ ಅಂದಿನ ಕಾಲದಲ್ಲಿಯೇ ಲೆಕ್ಕಪರಿಶೋಧಕ (ಸಿಎ) ಪದವೀಧರರಾಗಿದ್ದರು. ಆದರೂ ಎಲ್ಲವನ್ನೂ ತ್ಯಜಿಸಿ ಸನ್ಯಾಸ ದೀಕ್ಷೆ ಪಡೆದು ಧಾರ್ಮಿಕ ಸುಧಾರಣೆಯ ಮೂಲಕ ಸಮಾಜ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು. ಶ್ರೀಗಳ ನೆನಪಿಗಾಗಿ ಪಟ್ಟಣದ ಯಾವುದಾದರೊಂದು ಪ್ರಮುಖ ರಸ್ತೆಗೆ ಅಥವಾ ವೃತ್ತಕ್ಕೆ ಅವರ ಹೆಸರನ್ನಿಡಬೇಕು ಎಂದು ಹೇಳಿದರು.ನಾನು ಕೆಂಗೇರಿ ಮಠದ ಪೀಠಾಧಿಪತಿಯಾಗಿದ್ದರೂ ನನಗೆ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಋಣವಿದೆ. ಆದಿ ಚುಂಚನಗಿರಿ ಮಠದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ಮತ್ತು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಭೈರವೈಕ್ಯ ಶ್ರೀ ಕುಮಾರ ಚಂದ್ರಶೇಖರನಾಥ ಶ್ರೀಗಳಿಬ್ಬರೂ ನನಗೆ ಆರಾಧ್ಯ ದೇವರುಗಳು. ಚಂದ್ರಶೇಖರನಾಥ ಶ್ರೀಗಳು ನನಗೆ ಮಠದ ಪೀಠ ನೀಡಿ ಸೇವಾ ದೀಕ್ಷೆ ನೀಡಿದರೆ ಡಾ.ಬಾಲಗಂಗಾಧರನಾಥ ಶ್ರೀಗಳು ಧರ್ಮದ ದಾರಿಯನ್ನು ತೋರಿಸಿದವರು ಎಂದು ಹೇಳಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಸಂವಿಧಾನ ಮತ್ತು ನಾಗರಿಕ ಸಮಾಜ ರಚನೆಯ ಪರಿಕಲ್ಪನೆಗೂ ಮುನ್ನ ನಮ್ಮ ಸಮಾಜವನ್ನು ತಿದ್ದಿ ಹದ್ದುಬಸ್ತಿನಲ್ಲಿ ಇಟ್ಟಿದ್ದವು ಮಠಗಳು. ಮಠಗಳ ನಿರಾಕರಣೆ ಸಲ್ಲದು. ಜನರಿಗೆ ಶಿಕ್ಷಣ, ಆರೋಗ್ಯ ಮತ್ತು ಸಂಸ್ಕೃತಿ ನೀಡುತ್ತಿರುವ ಮಠಗಳನ್ನು ನಾವು ತಿರಸ್ಕರಿಸುವ ಬದಲು ಅವುಗಳ ಉನ್ನತ ಕಾರ್ಯಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಟಿ.ಮಂಜು ಅವರು ಗುರುವಂದನೆ ಸಲ್ಲಿಸಿ ಮಾತನಾಡಿ, ಸರ್ಕಾರಿ ಅಧಿಕಾರಿಗಳಾಗಿದ್ದಾಗ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಸರ್ಕಾರಿ ನಿಯಮಗಳ ಕಟ್ಟುಪಾಡಿಗೆ ಒಳಗಾಗಿ ಕೆಲಸ ಮಾಡಬೇಕಾಗಿತ್ತು. ಅವರು ಅಧಿಕಾರ ತ್ಯಜ್ಯಿಸಿ ಸಂನ್ಯಾಸ ಸ್ವೀಕರಿಸಿದ್ದು, ಸಮಾಜವನ್ನು ತಿದ್ದುವ ಮತ್ತು ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ನುಡಿದರು.