ಯೋಗ ಅಂತರ್‌ ದರ್ಶನಕ್ಕೆ ಸ್ಫೂರ್ತಿಯಾಗಬೇಕು

KannadaprabhaNewsNetwork |  
Published : Jun 22, 2025, 01:18 AM IST
ಪೋಟೋ, 21ಎಚ್‌ಎಸ್‌ಡಿ1: ತಾಲೂಕಿನ ಸಾಣೇಹಳ್ಳಿಯ ಗುರುಪಾದೇಶ್ವರ ಪ್ರೌಢಶಾಲೆ ಮತ್ತು  ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ವಿಶ್ವಯೋಗ ದಿನಾಚರಣೆಯ ನಿಮಿತ್ತ ಆಯೋಜಿಸಿದ್ದ ನಾಲ್ಕು ದಿನಗಳ ಯೋಗ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ  ಸಾನ್ನಿಧ್ಯವಹಿಸಿ  ಮಾತನಾಡಿದರು. | Kannada Prabha

ಸಾರಾಂಶ

ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆದ ಯೋಗ ಶಿಬಿರದಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಯೋಗ ಬಾಹ್ಯ ಪ್ರದರ್ಶನವಲ್ಲ ಅಂತರ್‌ ದರ್ಶನಕ್ಕೆ ಸ್ಫೂರ್ತಿಯಾಗಬೇಕು. ನಮ್ಮ ನಾಡಿಯಲ್ಲಿ ಆಸನಗಳಿಗೆ ಒತ್ತುಕೊಟ್ಟು ಯೋಗ ಮರೆಯುವರು. ಯೋಗ ಮತ್ತು ಆಸನ ಎರಡು ಸೇರಿದಾಗಲೇ ವ್ಯಕ್ತಿಯ ವ್ಯಕ್ತಿತ್ವದ ವಿಕಾಸ ಆಗುವುದು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಗಳ ಆಶ್ರಯದಲ್ಲಿ ಶನಿವಾರ ವಿಶ್ವಯೋಗ ದಿನಾಚರಣೆಯ ನಿಮಿತ್ತ ಆಯೋಜಿಸಿದ್ದ 4 ದಿನಗಳ ಯೋಗ ಶಿಬಿರದ ಮುಕ್ತಾಯ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ದೇಹ, ಮನಸ್ಸು ಮತ್ತು ಬುದ್ಧಿಯ ಸಮಸ್ಥಿತಿ ಕಾಯ್ದುಕೊಳ್ಳುವುದೇ ಯೋಗ. ಯೋಗ ಬೇರೆ, ಆಸನಗಳು ಬೇರೆ. ಆಸನಗಳೇ ಯೋಗವಲ್ಲ. ಆಸನಗಳು ದೇಹದ ಆರೋಗ್ಯಕ್ಕೆ ಸಹಕಾರಿಯಾದರೆ ಯೋಗ ಮನಸ್ಸಿನ ಏಕಾಗ್ರತೆ ನೀಡುತ್ತದೆ. ಏಕಾಗ್ರತೆ ವ್ಯಕ್ತಿಯ ನಡವಳಿಕೆಗಳಲ್ಲಿ ಗಮನಾರ್ಹ ಬದಲಾವಣೆ ತರುವುದು. ಪ್ರಕೃತಿಯ ಮರ-ಗಿಡಗಳನ್ನು, ಪ್ರಾಣಿ-ಪಕ್ಷಿಗಳನ್ನು ನೋಡಿ ಅವುಗಳಂತೆ ಆಸನಗಳನ್ನು ಹಾಕುವುದು ರೂಢಿಯಲ್ಲಿ ಬಂದಿದೆ. ಯೋಗದ ಮುಖ್ಯ ಉದ್ದೇಶ ತನ್ನೊಳಗೆ ತಾನು ನೋಡಿಕೊಂಡು, ದೋಷಗಳನ್ನು ತಿದ್ದಿಕೊಳ್ಳುವುದು. ಇಂದು ಮನುಷ್ಯ ತನ್ನ ಸ್ವಾರ್ಥದಿಂದಾಗಿ ಪ್ರಕೃತಿಯನ್ನು ನಾಶಮಾಡುತ್ತಿದ್ದಾನೆ. ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದೂ ಯೋಗವೇ. ಇದು ಕೇವಲ ಒಂದು ದಿನದ ಆಚರಣೆಯಲ್ಲ ಜೀವನ ವಿಧಾನವಾಗಬೇಕು. ಶರಣರು ಶಿವಯೋಗ ಪರಿಚಯಿಸಿದ್ದಾರೆ. ಯೋಗ ನುಡಿಯವುದಲ್ಲ, ಅಭ್ಯಾಸವಲ್ಲ ಆಚರಣೆ. ವ್ಯಕ್ತಿ ತಾನು ಮೊದಲು ಯೋಗಿಯಾಗಬೇಕು. ಆಗ ವ್ಯಕ್ತಿಯ ಮತ್ತು ತನ್ಮೂಲಕ ಸಮಾಜದ ವಿಕಾಸವಾಗುವುದು ಎಂದರು.

ಆಸನ, ಧ್ಯಾನ, ಪ್ರಾಣಾಯಮದ ಜತೆಗೆ ವಚನ ಹೇಳುವ ಮೂಲಕ ಯೋಗದ ಕಡೆ ಸಾಗಬೇಕು. ಇವೆರೆಡು ಏಕಕಾಲಕ್ಕೆ ನಡೆಯುವಂಥ ಕ್ರಿಯೆಗಳು. ಇವುಗಳ ಮೂಲಕ ನಮ್ಮ ಮನಸ್ಸಿನ ದುರ್ಭಾನೆಗಳನ್ನು ದೂರ ಮಾಡಿಕೊಂಡು ಸದ್ಭಾವನೆ ಬೆಳೆಸಿಕೊಳ್ಳಲು ಸಹಾಯಕವಾಗುವುದು. ಮನುಷ್ಯನಿಗೆ ದೃಢವಾದ ಸಂಕಲ್ಪ, ಇಚ್ಛಾಶಕ್ತಿ ಮತ್ತು ಒಳ್ಳೆಯ ಕೆಲಸ ಮಾಡುವ ಮನಸ್ಸಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದರು.

ಆಸಕ್ತಿ ಬಾಹ್ಯವಾಗಿ ತುಂಬುವಂಥದ್ದಲ್ಲ. ಆಂತರಿಕವಾಗಿ ಬೆಳೆಸಿಕೊಳ್ಳುವಂಥದ್ದು. ಅದು ಕೇವಲ ತೋರಿಕೆಗಾಗಿ ಇರದೆ ನಮ್ಮ ಅಂತಃಸಾಕ್ಷಿಗನುಗುಣವಾಗಿರಬೇಕು. ಯಾರು ಅಂತಃಸಾಕ್ಷಿಯನ್ನು ಸಾಯಿಸಿಕೊಲ್ಳುತ್ತಾರೋ ಆ ವ್ಯಕ್ತಿ ಸತ್ತ ಹಾಗೆ. ಹಾಗಾಗಿ ಇಲ್ಲಿನ ಅಧ್ಯಾಪಕರು ಹಾಗೂ ಮಕ್ಕಳು ಅಂತಃ ಸಾಕ್ಷಿಯನ್ನು ಎಂದೂ ಸಾಯಿಸಿಕೊಳ್ಳದೇ ಸದಾ ಕ್ರಿಯಾಶೀಲವಾಗಿ ಇಟ್ಟುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ನನ್ನನ್ನು ನಾನು ಆರೋಗ್ಯವಂತ, ಶಾಂತಿಯುತ, ಸಂತೋಷಭರಿತ ಮತ್ತು ಪ್ರೀತಿಸುವನನ್ನಾಗಿಸಿಕೊಳ್ಳಲು ಪ್ರಯತ್ನಿಸುವೆ ಎನ್ನುವ ಸಂಕಲ್ಪವನ್ನು ಸಾಮೂಹಿಕವಾಗಿ ಮಾಡಲಾಯಿತು.

ಯಶಸ್ವಿನಿ ಯೋಗ ಸಂಸ್ಥೆಯ ಯೋಗಾಚಾರ್ಯ ದೇವೇಂದ್ರಪ್ಪ ಯೋಗ ತರಬೇತಿ ನೀಡಿದರು. ಅಧ್ಯಾಪಕ ವಿರುಪಾಕ್ಷಪ್ಪ ಅಣ್ಣಿಗೆರಿ ಧ್ಯಾನ, ಚಿಂತನೆಯನ್ನು ನೆರವೇರಿಸಿಕೊಟ್ಟರು. ಮುಖ್ಯೋಪಾಧ್ಯಾಯ ಬಸವರಾಜ್ ಕೆ.ಆರ್ ಮಾತನಾಡಿದರು. ದೈಹಿಕ ಶಿಕ್ಷಕಿ ಶೋಭ ಎಸ್.ಪಿ. ಸ್ವಾಗತಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ನಾಗರಾಜ್ ಎಚ್.ಎಸ್.ವಚನಗೀತೆ ಹಾಡಿದರು. ಇದೇ ಸಂದರ್ಭದಲ್ಲಿ ಯೋಗಾಚಾರ್ಯ ದೇವೇಂದ್ರಪ್ಪ ಮತ್ತು ಅಧ್ಯಾಪಕ ವಿರುಪಾಕ್ಷಪ್ಪನವರನ್ನು ಅಭಿನಂದಿಸಲಾಯಿತು. ಶಾಲಾ ಮುಖ್ಯಸ್ಥರು, ನೌಕರ ವರ್ಗದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!