ಕನ್ನಡಪ್ರಭ ವಾರ್ತೆ ಮೈಸೂರು
ಯೋಗಾಭ್ಯಾಸಕ್ಕೆ ಕ್ರಿಯಾತ್ಮಕ ಮತ್ತು ಚಲನಶೀಲತೆ ಬಹಳ ಮುಖ್ಯ. ಹೆಚ್ಚು ಚೈತನ್ಯಶೀಲ ಮತ್ತು ದೃಢವಾದ ದೇಹವನ್ನಿಟ್ಟುಕೊಳ್ಳಲು ಯೋಗ ಸಹಕಾರಿಯಾಗಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ಭಾರತೀಯ ಯೋಗ ಒಕ್ಕೂಟ, ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಕ್ರೀಡಾ ಸಂಘ, ಗ್ಲೋಬಲ್ ಯೋಗ ಫೋರಂ, ಮೈಸೂರು ಜಿಲ್ಲಾ ಯೋಗ ಕ್ರೀಡಾ ಫೌಂಡೇಷನ್ ಹಾಗೂ ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ನಗರದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಆಯೋಜಿಸಿರುವ ಯೋಗ ಕ್ರೀಡಾ ಚಾಂಪಿಯನ್ ಷಿಪ್ ಸ್ಪರ್ಧೆಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಯೋಗಾಭ್ಯಾಸಕ್ಕೆ ಕ್ರಿಯಾತ್ಮಕ ಮತ್ತು ಚಲನಶೀಲತೆ ಬಹಳ ಮುಖ್ಯ. ಹೆಚ್ಚು ಚೈತನ್ಯಶೀಲ ಮತ್ತು ದೃಢವಾದ ದೇಹವನ್ನಿಟ್ಟುಕೊಳ್ಳಲು ಯೋಗ ಸಹಕಾರಿ. ಸ್ಪರ್ಧೆಗಳು ನಮ್ಮನ್ನು ನಾವು ಉತ್ತಮಗೊಳಿಸಿಕೊಳ್ಳುವುದಕ್ಕೆ ಪೂರಕವಾಗಿವೆ ಎಂದರು.ಆಧುನಿಕ ಯೋಗ ಹುಟ್ಟಿದ್ದು ಮೈಸೂರಿನಲ್ಲಿ. ಆಧುನಿಕ ಯೋಗ ಪಿತಾಮಹ ಟಿ. ಕೃಷ್ಣಮಾಚಾರ್ ಅವರು ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಆ ಸಮಯದಲ್ಲಿ ಸ್ಥಾಪಕ ಕುಲಪತಿಯಾಗಿದ್ದರು. ಬಳಿಕ ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಯೋಗ ವಿಭಾಗ ತೆರೆದು ತರಬೇತಿ ಆರಂಭಿಸಿದ ಟಿ. ಕೃಷ್ಣಮಾಚಾರ್, ಬಿ.ಕೆ.ಎಸ್. ಅಯ್ಯಂಗಾರ್, ಪಟ್ಟಾಭಿ ಜೋಯಿಷ್ ಅವರಿಗೆ ಯೋಗ ತರಬೇತಿ ನೀಡಿದ್ದರಿಂದ ಯೋಗದಲ್ಲಿ ಮೈಸೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ ಎಂದು ಹೇಳಿದರು.
ಭಾರತೀಯ ಸಂಸ್ಕೃತಿ ಮತ್ತು ಮನೋಶಕ್ತಿಯ ತಳಹದಿಯ ಮೇಲೆ ವಿಕಸಿತ ಭಾರತದ ಕನಸು ನನಸಾಗಲಿದೆ. ಆಧುನಿಕ ಯೋಗ ಜಾಗತಿಕ ಹರಡುವಿಕೆಯ ಮೇಲೆ ಪ್ರಭಾವ ಬೀರಿ, ಅದರ ಅಭ್ಯಾಸದಿಂದ ಕ್ರಿಯಾತ್ಮಕವಾಗಿ ವಿಕಸನಗೊಂಡಿದೆ. ಭಾರತೀಯರು ಜೀವನ ನಡೆಸುವ ವಿಧಾನ ಮತ್ತು ಆಧ್ಯಾತ್ಮಿಕತೆ ಯೋಗಾಭ್ಯಾಸದಿಂದ, ಯೋಗದ ತಾತ್ವಿಕ ಆಧಾರದಿಂದ ಬಂದಿದೆ. ಈ ಅಂಶವನ್ನು ನಾವು ತಿಳಿವಳಿಯಬೇಕು ಎಂದು ಅವರು ಹೇಳಿದರು.ದೇಶದ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸಂಸ್ಕೃತಿ ಮತ್ತು ಮನೋಶಕ್ತಿ ತಳಹದಿಯಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಯೋಗ ಅಭ್ಯಾಸದಿಂದ ಏಕಾಗ್ರತೆ ಹಾಗೂ ಮನಸ್ಸಿಗೆ ಶಾಂತಿ ವೃದ್ಧಿಸುತ್ತದೆ. ಯೋಗ ಮನುಷ್ಯನನ್ನು ಮಾನವೀಯ ಗುಣಗಳ ಕಡೆಗೆ ಒತ್ತು ನೀಡುತ್ತದೆ. ಹಾಗಾಗಿ ಯುವಕರು ವಿದ್ಯಾರ್ಥಿ ಜೀವನದಿಂದಲೇ ಯೋಗ ಅಭ್ಯಾಸ ಮಾಡುವ ಕಡೆಗೆ ಒತ್ತು ನೀಡಬೇಕು ಎಂದರು.ಅವಧೂತ ದತ್ತಪೀಠದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತನಾಡಿ, ಇಂದು ಎಲ್ಲರೂ ಅನಗತ್ಯವಾದ ಒತ್ತಡಕ್ಕೆ ಸಿಲುಕಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದಕ್ಕೆಲ್ಲ ಯೋಗದಲ್ಲಿ ಮದ್ದಿದೆ. ಚಿಕ್ಕ ವಿಚಾರಗಳಿಗೂ ಕೊಪಗೊಳ್ಳುವುದರಿಂದ ಉತ್ತಮವಾದ ಉಸಿರಾಟ ಕ್ರಿಯೆ ಕಳೆದುಕೊಳ್ಳುತ್ತೇವೆ. ಎಲ್ಲಾ ವಿಚಾರಗಳಿಗೂ ಉದ್ವೇಗಕ್ಕೆ ಒಳಗಾಗುವುದನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮನಃಶಾಂತಿಗಾಗಿ, ಮಾನಸಿಕ ಆರೋಗ್ಯಕ್ಕಾಗಿ ಧ್ಯಾನದ ಅಗತ್ಯವಿದೆ. ಸ್ವಾಸ್ಥ್ಯ ಜೀವನ ನಡೆಸಲು ಯೋಗ ಸಹಕಾರಿಯಾಗಿದೆ. ಉತ್ತಮ ಜೀವನಕ್ಕೆ ಏಕಾಗ್ರತೆ ಬಹಳ ಮುಖ್ಯ. ಯೋಗದ ಮೊರೆ ಹೋಗಬೇಕು. ಆತ್ಮ ಅರ್ಪಣೆ ಮಾಡಿಕೊಳ್ಳಬೇಕು. ಅದಕ್ಕೂ ಮೊದಲು ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು ಎಂದರು.590 ಯೋಗಪಟುಗಳು ಭಾಗಿ
ಅ. 12 ರವರೆಗೆ ಸ್ಪರ್ಧೆ ನಡೆಯಲಿದ್ದು, ದೇಶದ ವಿವಿಧೆಡೆಯಿಂದ 590 ಯೋಗಪಟುಗಳು ಪಾಲ್ಗೊಂಡಿದ್ದಾರೆ. 145 ಆಕರ್ಷಕ ಯೋಗ, ಜೋಡಿ ಯೋಗ, ರಿದಮಿಕ್ ಯೋಗ ಮತ್ತು ಫ್ರೀ ಫ್ಲೋ ಯೋಗ ಸ್ಪರ್ಧೆ ಆಯೋಜಿಸಲಾಗಿದೆ. 175 ರಾಷ್ಟ್ರೀಯ ಯೋಗ ನಿರ್ಣಾಯಕರು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದಾರೆ.ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವಿಜಯಾನಂದ ತೀರ್ಥರು, ಫೆಡರೇಷನ್ ಆಫ್ ಇಂಡಿಯಾದ ಮುಖ್ಯಸ್ಥ ಅಶೋಕ್ ಕುಮಾರ್ ಅಗರವಾಲ್, ಸಿಇಒ ಇಂದೂ ಅಗರ್ ವಾಲ್, ಅಧ್ಯಕ್ಷ ಅನಿರುದ್ಧ ಗುಪ್ತಾ, ವಿವಿಧ ಯೋಗ ಸಂಸ್ಥೆಗಳ ಪದಾಧಿಕಾರಿಗಳಾದ ಮೈಸೂರು ಮಂಜುನಾಥ್, ವಾಸುದೇವಭಟ್, ಶ್ರೀಹರಿ, ಗುರುರಾಜ್, ಕೆ. ಪ್ರಭು, ಪ್ರೊ.ಎಂ.ಜಿ. ಅಮರನಾಥ್, ಪಿ.ಎನ್. ಗಣೇಶ್ ಕುಮಾರ್, ಎ. ನಟರಾಜು ಇದ್ದರು.