ಯೋಗ, ಕ್ರೀಡೆಯಿಂದ ಮನಸ್ಸಿಗೆ ನೆಮ್ಮದಿ: ಒಲಂಪಿಯನ್ ಚೆಪ್ಪುಡಿರ ಪೂಣಚ್ಚ

KannadaprabhaNewsNetwork | Published : May 11, 2025 1:25 AM
Follow Us

ಸಾರಾಂಶ

ಮನಸ್ಸಿಗೆ ಒತ್ತಡ ಉಂಟಾದಾಗ ಕ್ರೀಡೆ ಹಾಗೂ ಯೋಗಾಭ್ಯಾಸಗಳಿಂದ ನೆಮ್ಮದಿ ದೊರಕುತ್ತದೆ ಎಂದು ಚೆಪ್ಪುಡಿರ ಪೂಣಚ್ಚ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮನಸ್ಸಿಗೆ ಒತ್ತಡ ಉಂಟಾದಾಗ ಕ್ರೀಡೆ ಹಾಗೂ ಯೋಗಾಭ್ಯಾಸಗಳಿಂದ ನೆಮ್ಮದಿ ದೊರಕುತ್ತದೆ ಎಂದು ಮಾಜಿ ಒಲಂಪಿಯನ್ ಚೆಪ್ಪುಡಿರ ಪೂಣಚ್ಚ ಹೇಳಿದರು.

ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ. ಶಂಕರ್ ಅವರ ಸ್ಮರಣಾರ್ಥ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಒಂದು ತಿಂಗಳುಗಳ ಕಾಲ ನಡೆದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಸೇನೆ, ಕ್ರೀಡೆಗೆ ಹೆಸರುವಾಸಿ:

ಕೊಡಗು ಜಿಲ್ಲೆ ಸೇನೆ ಹಾಗೂ ಕ್ರೀಡೆಗೆ ಹೆಸರುವಾಸಿ, ಅದರಲ್ಲೂ ಹಾಕಿ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ. ತಾನು ಕೂಡ ಇದೇ ಮೈದಾನದಲ್ಲಿ ಆಡಿ ಬೆಳೆದು ಕ್ರೀಡಾ ಶಾಲೆಗೆ ಸೇರಿ ಈ ರೀತಿಯ ಸಾಧನೆ ಮಾಡಲು ಸಹಕಾರಿಯಾಗಿದೆ. ಗುರುಗಳಾದ ಸಿ.ವಿ. ಶಂಕರ್ ಅವರು 120ಕ್ಕೂ ಅಧಿಕ ಮಂದಿ ಅಂತರರಾಷ್ಟ್ರೀಯ ಅಟಗಾರರನ್ನು ತಯಾರು ಮಾಡಿದ್ದು ಅವರಿಗೆ ನಾವೆಲ್ಲರೂ ಋಣಿಯಾಗಿರಬೇಕೆಂದರು. ಇದೀಗ ವಾಂಡರರ್ಸ್ ಕ್ಲಬ್‌ನವರು, ಹಿರಿಯರು ಸೇರಿಕೊಂಡು ಸ್ವಯಂಪ್ರೇರಿತರಾಗಿ ಮಕ್ಕಳಿಗೆ ಯೋಗ, ಕ್ರೀಡಾ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಮಕ್ಕಳು ಸದುಪಯೋಗಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಅತಿಥಿಯಾಗಿದ್ದ ಕ್ರೀಡಾ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್ ಮಾತನಾಡಿ ವಾಂಡರ‍್ಸ್ ಸಂಸ್ಥೆ ದೊಡ್ಡ ಸಂಸ್ಥೆಯಾಗಿದ್ದು, ಅದರಲ್ಲಿ ಆಡಲು ಅವಕಾಶ ಸಿಗುವುದೇ ಕಷ್ಟವಾಗಿತ್ತು. ಆದರೂ ತಮಗೆ ಒಂದು ಬಾರಿ ಆಡಲು ಅವಕಾಶ ಸಿಕ್ಕಿದ್ದನ್ನು ನೆನಪಿಸಿಕೊಂಡರಲ್ಲದೆ. ಈಗಿನ ಪದಾಧಿಕಾರಿಗಳು, ಹಿರಿಯರ ಸಹಕಾರ, ಮಾರ್ಗದರ್ಶನದೊಂದಿಗೆ ಮತ್ತೆ ವಾಂಡರರ್ಸ್ ಕ್ಲಬ್ ಅನ್ನು ಬೆಳೆಸಲು ಪ್ರಯತ್ನಿಸಬೇಕು. ಹಳೆಯ ವೈಭವ ಪುನರಾವರ್ತನೆಯಾಗುವುದರೊಂದಿಗೆ ಕ್ಲಬ್ ಮುಂದುವರಿಯಬೇಕೆಂದು ಆಶಿಸಿದರು.

ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು:

ಮಕ್ಕಳು ಶಿಬಿರಕ್ಕೆ ಮಾತ್ರ ಸೀಮಿತವಾಗಿರದೆ ಶಿಬಿರ ಮುಗಿದ ನಂತರವೂ ಅಭ್ಯಾಸ ಮುಂದುವರಿಸಬೇಕು. ಪೋಷಕರು ಮಕ್ಕಳಿಗೆ ಮೊಬೈಲ್ ಕೊಡದೆ ಮೈದಾನಕ್ಕೆ ಕಳುಹಿಸಬೇಕು. ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ಶಾಲೆಯಿಂದ ಮರಳುವ ಮಕ್ಕಳ ಬ್ಯಾಗ್‌ಗಳನ್ನು ಪರಿಶೀಲಿಸುವ ಕಾರ್ಯ ಮಾಡಬೇಕೆಂದು ಸಲಹೆಮಾಡಿದರು. ಮಕ್ಕಳು ಶಿಬಿರದಲ್ಲಿ ಕಲಿತದ್ದನ್ನು ಮುಂದುವರಿಸಬೇಕು. ತರಬೇತಿ ಪಡೆದು ಮುಂದಿನ ದಿನಗಳಲ್ಲಿ ಜಾತಿ, ಮತ, ಭೇದವಿಲ್ಲದೆ ಕನಿಷ್ಠ ನಾಲ್ಕು ಮಂದಿಯಾದರೂ ಕೊಡಗು ಜಿಲ್ಲೆಯಿಂದ ಒಲಂಪಿಕ್‌ಗೆ ಆಡುವಂತಾಗಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಾಂಡರರ್ಸ್ ಕ್ಲಬ್ ಅಧ್ಯಕ್ಷ ಕೋಟೇರ ಮುದ್ದಯ್ಯ ಮಾತನಾಡಿ ಶಿಬಿರದಲ್ಲಿ ಕಲಿತದ್ದನ್ನು ಮಕ್ಕಳು ಪ್ರತಿದಿನ ಪ್ರಯತ್ನ ಮಾಡಬೇಕು. ಕಲಿಕೆಯನ್ನು ಮುಂದುವರಿಸಬೇಕು. ವ್ಯಾಯಾಮ ನಿರಂತರವಾಗಿರಬೇಕೆಂದು ಕಿವಿ ಮಾತು ಹೇಳೀದರು.

ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ಮಕ್ಕಳಿಗೆ ಯೋಗಾಭ್ಯಾಸ ಹೇಳಿಕೊಟ್ಟ ಯೋಗ ಶಿಕ್ಷಕ ಕೆ.ಕೆ. ಮಹೇಶ್‌ಕುಮಾರ್ ಅವರನ್ನು ವಿದ್ಯಾರ್ಥಿಗಳ ಪೋಷಕರು ಸನ್ಮಾನಿಸಿ ಗೌರವಿಸಿದರು. ಯೋಗದಲ್ಲಿ ರಾಷ್ಟ್ರೀಯ ದಾಖಲೆ ಮಾಡಿದ ಮದೆನಾಡಿನ ಸಿಂಚನಾಳನ್ನು ಗೌರವಿಸಿ ಅಭಿನಂದಿಸಲಾಯಿತು. ಇದರೊಂದಿಗೆ ಸ್ವಯಂ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ ನಿವೃತ್ತ ದೈಹಿಕ ಶಿಕ್ಷಕ ಎಸ್.ಟಿ. ವೆಂಕಟೇಶ್, ಬೊಪ್ಪಂಡ ಶ್ಯಾಂ ಪೂಣಚ್ಚ, ಗಣೇಶ್, ಕುಡೆಕಲ್ ಸಂತೋಷ್, ಕೋಟೇರ ನಾಣಯ್ಯ, ನಾಟೋಳಂಡ ಸುರೇಶ್, ಕಿರಣ್, ತಿಲಕ್ ಹಾಗೂ ಶಿಬಿರದ ಸಂಚಾಲಕ ಬಾಬು ಸೋಮಯ್ಯ ಅವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಶಿಬಿರಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಆಟೋಟ ಸ್ಪರ್ಧೆ ಹಾಗೂ ಪಂದ್ಯಾವಳಿಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಶಿಬಿರದಲ್ಲಿ ಉತ್ತಮವಾಗಿ ಯೋಗ ಮಾಡಿದ ಶಿಬಿರಾರ್ಥಿಗಳು ಹಾಗೂ ಪೋಷಕರುಗಳನ್ನು ಗುರುತಿಸಿ ಅವರುಗಳಿಗೂ ಬಹುಮಾನ ನೀಡಲಾಯಿತು. ನೆರೆದಿದ್ದವರಿಗೆಲ್ಲರಿಗೂ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ವೇದಿಕೆಯಲ್ಲಿ ವಾಂಡರರ್ಸ್ ಉಪಾಧ್ಯಕ್ಷ ಪಾರ್ಥ ಚಂಗಪ್ಪ, ಶಂಕರ್ ಸ್ವಾಮಿ ಅವರ ಪುತ್ರ ಗುರುದತ್, ವಾಂಡರರ್ಸ್ ಖಜಾಂಚಿ ನಂದ ಇದ್ದರು. ವೆಂಕಟೇಶ್ ಕಾರ್ಯಕ್ರಮ ನಿರ್ವಹಿಸಿದರು.