ಊರಿನ ಹೆಸರು ಬದಲಿಸುವ ಅಧಿಕಾರ ನಿಮಗಿಲ್ಲ: ಪುರುಷೋತ್ತಮ್ ಬಿಳಿಮಲೆ

KannadaprabhaNewsNetwork | Published : Jul 24, 2024 12:24 AM

ಸಾರಾಂಶ

ಕನ್ನಡ ಭಾಷೆಯ ಮೇಲೆ ಪ್ರತಿಯೊಬ್ಬರಿಗೂ ಸ್ವಾಭಿಮಾನ ಇರಬೇಕು. ಆದರೆ ಪ್ರಸ್ತುತ ಕನ್ನಡದ ಮೇಲೆ ಸ್ವಾಭಿಮಾನ ಕಡಿಮೆ ಆಗುತ್ತಿದ್ದು, ಇಂದು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಠ ಮಾಡುವವರು ಕನ್ನಡ ಮಾಧ್ಯಮದವರೇ. ಕನ್ನಡ ಒಂದು ಪರಿಶ್ರಮದ ಭಾಷೆಯಾಗಿ ಉಳಿಯಬೇಕು. ಇಂಗ್ಲೀಷ್, ಫ್ರೆಂಚ್, ಹಿಂದಿ, ಉರ್ದು ಎಲ್ಲಾ ಭಾಷೆ ಕಲಿಯಿರಿ. ಆದರೇ ಕನ್ನಡ ಮರೆಯದಿರಿ. ಹಾಗೆ ಮರೆತರೆ ಅದು ಭಾಷೆಯ ಆತ್ಮಹತ್ಯೆಯಾದಂತೆ.

ಕನ್ನಡಪ್ರಭ ವಾರ್ತೆ ಹಾಸನ

ಕೇವಲ ಐದು ವರ್ಷಗಳ ಕಾಲ ಅಧಿಕಾರಕ್ಕೆ ಬಂದವರಿಗೆ ಈ ನಾಡಿನ ಊರುಗಳ ಹೆಸರನ್ನೇ ಬದಲಾಯಿಸಲು ಅಧಿಕಾರ ಕೊಟ್ಟವರು ಯಾರು? ಸಾವಿರಾರು ವರ್ಷಗಳ ಇತಿಹಾಸದಲ್ಲಿ ಬಂದಿರುವ ಕನ್ನಡ ಪದಗಳನ್ನು ಅಳಿಸುವ ಅಧಿಕಾರ ನಿಮಗಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೋ. ಪುರುಷೋತ್ತಮ್ ಬಿಳಿಮಲೆ ರಾಜ್ಯ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ, ಉನ್ನತ ಶಿಕ್ಷಣ ಇಲಾಖೆ, ಶಿಕ್ಷಣ ಸಚಿವಾಲಯ, ಭಾರತ ಸರಕಾರ, ಮಾನಸ ಗಂಗೋತ್ರಿ ಮೈಸೂರು, ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಕಸಾಪ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಶಾಸ್ತ್ರೀಯ ಕನ್ನಡ ಪಠ್ಯಗಳ ಓದು ಮತ್ತು ಅರ್ಥ್ಯೆಸುವಿಕೆ ಕುರಿತು ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಎಂದು ಅರ್ಥವಾಗಬೇಕಾದರೆ ವ್ಯಾಸ, ಪಂಪ, ಯಕ್ಷಗಾನವು ಗೊತ್ತಿರಬೇಕು. ಮೊಬೈಲಲ್ಲಿ ಬರುವ ವಾಟ್ಸಾಪ್ ಮೆಸೇಜನ್ನು ನೋಡಿಕೊಂಡು ಅದನ್ನು ಫಾರ್ವರ್ಡ್ ಮಾಡಿಕೊಳ್ಳುವ ಬದಲು ಈ ತರಹದ ವಿಚಾರಗಳಿಗೆ ಮನಸ್ಸು ಕೊಟ್ಟರೆ ಸಂಸ್ಕೃತಿ ಉಳಿಯುತ್ತದೆ. ಸಂಸ್ಕೃತ ಕನ್ನಡದ ಸಂಬಂಧ, ಪ್ರಾಕೃತ ಕನ್ನಡದ ಸಂಬಂಧದ ಬಗ್ಗೆ ಹೆಚ್ಚು ಕೆಲಸ ಆಗಬೇಕು. ಕನ್ನಡ ಭಾಷೆಯ ನಡುವೆ ಇರುವ ಸಂಬಂಧವನ್ನು ಇನ್ನು ಗಂಭೀರವಾಗಿ ಅಭ್ಯಾಸ ಮಾಡಬೇಕಾಗಿದೆ. ಕೃಷ್ಣದೇವರಾಯ, ಚಾಲುಕ್ಯರು, ವಿಕ್ರಮಾದಿತ್ಯ, ಎರಡನೇ ಪುಲಕೇಶಿ ಬಾದಾಮಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ಆಳಿದ್ದರು. ವಿಕ್ರಮಾದಿತ್ಯನು ಊರಿನ ಹೆಸರು ಬದಲಾಯಿಸಲಿಲ್ಲ. ಆದರೆ ನಾವು ಊರಿನ ಹೆಸರು ಬದಲಾಯಿಸಿಕೊಂಡು ನಮ್ಮ ಪರಂಪರೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಊರಿನ ಹೆಸರು ಉಳಿಯಬೇಕು ಎಂದು ಕನ್ನಡ ಪ್ರಾಧಿಕಾರದಿಂದ ಯೋಚನೆ ಬಂದಿದೆ. ಅಂತಹ ಕೃಷ್ಣದೇವರಾಯ, ನೃಪತುಂಗನೇ ಊರಿನ ಹೆಸರನ್ನು ಬದಲಾಯಿಸಲಿಲ್ಲ. ಇವರ್‍ಯಾರೋ ಐದು ವರ್ಷ ಅಧಿಕಾರಕ್ಕೆ ಬಂದವರು ನಾಡಿನ ಹಲವು ನಗರ,ಪಟ್ಟಣಗಳ ಹೆಸರು ಬದಲಾಯಿಸಿದರು. ಇವರಿಗೆ ಅಧಿಕಾರ ಕೊಟ್ಟವರು ಯಾರು? ಒಂದು ಊರಿಗೆ ತನ್ನದೇಯಾದ ಪರಂಪರೆ ಇರುತ್ತದೆ. ಹೊಸ ಊರು ನಿರ್ಮಾಣ ಮಾಡಿದರೆ ಹೊಸ ಹೆಸರು ಇಡಬಹುದು, ಆದರೆ ಸಾವಿರಾರು ವರ್ಷಗಳಿಂದ ಬಂದಂತಹ ಕನ್ನಡ ಪದಗಳನ್ನು ಅಳಿಸುವ ಅಧಿಕಾರ ನಿಮಗಿಲ್ಲ ಎಂದು ಗುಡುಗಿದರು.

ಕನ್ನಡ ಭಾಷೆಯ ಮೇಲೆ ಪ್ರತಿಯೊಬ್ಬರಿಗೂ ಸ್ವಾಭಿಮಾನ ಇರಬೇಕು. ಆದರೆ ಪ್ರಸ್ತುತ ಕನ್ನಡದ ಮೇಲೆ ಸ್ವಾಭಿಮಾನ ಕಡಿಮೆ ಆಗುತ್ತಿದ್ದು, ಇಂದು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಠ ಮಾಡುವವರು ಕನ್ನಡ ಮಾಧ್ಯಮದವರೇ. ಕನ್ನಡ ಒಂದು ಪರಿಶ್ರಮದ ಭಾಷೆಯಾಗಿ ಉಳಿಯಬೇಕು. ಇಂಗ್ಲೀಷ್, ಫ್ರೆಂಚ್, ಹಿಂದಿ, ಉರ್ದು ಎಲ್ಲಾ ಭಾಷೆ ಕಲಿಯಿರಿ. ಆದರೇ ಕನ್ನಡ ಮರೆಯದಿರಿ. ಹಾಗೆ ಮರೆತರೆ ಅದು ಭಾಷೆಯ ಆತ್ಮಹತ್ಯೆಯಾದಂತೆ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ಆಸೆಗಳನ್ನು ಇಟ್ಟುಕೊಂಡವರಿಗೆ ಸತ್ಯ ಹೇಳಲು ಧೈರ್ಯ ಇರುವುದಿಲ್ಲ ಹಾಗೂ ಸುಳ್ಳು ಹೇಳುವುದಕ್ಕೆ ಪ್ರಾರಂಭಿಸುತ್ತಾರೆ. ಇವೆರಡೂ ವಿಪರ್ಯಾಸದ ಸಂಗತಿಗಳಾಗಿವೆ. ಶಾಸ್ತ್ರೀಯ ಪಠ್ಯಗಳನ್ನು ಓದುವ ಆಸಕ್ತಿಗಳು ಸತ್ತು ಹೋಗಿವೆ. ಇಂದು ಪಾಠ ಮಾಡುವ ಶಿಕ್ಷಕರೇ ಈ ಪಠ್ಯ ಬೇಡ. ಇದು ಮಕ್ಕಳಿಗೆ ಅರ್ಥವಾಗುವುದಿಲ್ಲ. ಈ ಪಾಠ ಇದ್ದರೆ ಮಕ್ಕಳು ತರಗತಿಗೆ ಬರಲ್ಲ ಎಂಬಿತ್ಯಾದಿ ಮಾತುಗಳನ್ನು ಹೇಳುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಭಾರತೀಯ ಭಾಷಾ ಸಂಸ್ಥಾನ ಮೈಸೂರು ಯೋಜನಾ ನಿರ್ದೇಶಕ ಪ್ರೊ. ಎನ್.ಎಂ. ತಳವಾರ, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಎನ್.ಎಸ್. ತಾರನಾಥ್, ಸಿ.ಎಸ್. ಶಿವಕುಮಾರಸ್ವಾಮಿ, ಆರ್. ಚಲಪತಿ, ಎನ್.ಎಸ್. ಅನ್ನಪೂರ್ಣ, ಶಿಬಿರದ ಸಂಚಾಲಕ ಸಿ.ಎ. ಶಶಿಧರ್ ಇತರರು ಇದ್ದರು.

Share this article