17 ಕೆರೆಗಳಿಗೆ ನೀರು ತುಂಬಿಸಿದ್ದೀರಿ ಸರಿ, ಇಗ್ಗಲೂರು ಡ್ಯಾಂ ಕಟ್ಟಿಸಿದ್ದು ಯಾರು?: ಎಚ್.ಡಿ.ದೇವೇಗೌಡ

KannadaprabhaNewsNetwork | Published : Nov 7, 2024 12:39 AM

ಸಾರಾಂಶ

ಐದು ಗ್ಯಾರಂಟಿ ಅಂತೆ. ಇದರಲ್ಲಿ ಒಂದು ಗ್ಯಾರಂಟಿಗೆ ತೊಂದರೆ ಇದೆ ಅಂತಾ ಒಬ್ಬ ಹೇಳುತ್ತಾನೆ. ಮೋದಿ ಅವರು ಪ್ರತಿ ವರ್ಷ ರೈತರ ಖಾತೆಗೆ ಹಣ ಜಮೆ ಮಾಡುತ್ತಾರೆ. 2 ರುಪಾಯಿ ಅಕ್ಕಿ, 3 ರುಪಾಯಿಗೆ ಗೋದಿ, ಸಕ್ಕರೆ ಕೊಟ್ಟ ವ್ಯಕ್ತಿ ನಿಮ್ಮ‌ ಮುಂದೆ ಕೂತಿದ್ದೇನೆ. ಅನೇಕರು ಚಿಕ್ಕ ಹುಡುಗರು ಪುಸ್ತಕ ಓದಬೇಕು. ಈ ಗೌಡ ಏನು ಮಾಡಿದ್ದಾನೆಂದು ಗೊತ್ತಾಗುತ್ತದೆ. ಆಲಮಟ್ಟಿ ಸೇರಿ ಏಳು ಅಣೆಕಟ್ಟು ಕಟ್ಟಿದ್ದೇನೆ .

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಹದಿನೇಳು ಕೆರೆಗಳಿಗೆ ನೀರು ತುಂಬಿಸಿದ್ದೇನೆ ಎಂದು ಆ ವ್ಯಕ್ತಿ ಹೇಳುತ್ತಾರೆ. ಆದರೆ, ನೀರು ತುಂಬಿಸಲು ಮೂಲ ಕಾರಣವಾದ ಇಗ್ಗಲೂರು ಅಣೆಕಟ್ಟು ಕಟ್ಟಿಸಿದವರು ಯಾರಪ್ಪಾ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಅವರನ್ನು ನೇರವಾಗಿ ಪ್ರಶ್ನೆ ಮಾಡಿದ್ದಾರೆ.

ತಿಟ್ಟಮಾರನಹಳ್ಳಿ, ಮಾಕಳಿ, ನಾಗವಾರ, ಬೇವೂರು ಪ್ರದೇಶಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದ ಅವರು, ಸಿ.ಪಿ.ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.

ಯೋಗೇಶ್ವರ್ ಅವರು ನಾನು ಭಗೀರಥ ಎಂದು ಹೇಳಿಕೊಂಡು ಎರಡು ಚುನಾವಣೆ ಮಾಡಿದರು. ನಾನು‌ ಮುಖ್ಯಮಂತ್ರಿ ಆಗಿದ್ದಾಗ ಎಂಜಿನಿಯರ್ ಗಳನ್ನು ಕರೆತಂದೆ. ಆಗ 150 ಕೋಟಿ ರು. ಬಿಡುಗಡೆ ಮಾಡಿದೆ. ತೆಪ್ಪದಲ್ಲಿ ಹೋಗಿ ಅಣೆಕಟ್ಟೆಯನ್ನು ಉದ್ಘಾಟನೆ ಮಾಡಿದ್ದೆ. ಅದನ್ನೆಲ್ಲವನ್ನೂ ತಾಲೂಕಿನ ಜನರು, ಎಂಜಿನಿಯರ್ ಗಳು ಪ್ರತ್ಯಕ್ಷವಾಗಿ ನೋಡಿದ್ದಾರೆ. ಆಗಲೇ ನಾನು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಸಿದೆ. ನನ್ನ ಬದ್ಧತೆ, ಚನ್ನಪಟ್ಟಣ, ರಾಮನಗರ ಜನರ ಉದ್ಧಾರಕ್ಕಾಗಿ ಇಗ್ಗಲೂರು ಜಲಾಶಯ ಕಟ್ಟಿಸಿದೆ ಎಂದು ಹೇಳಿದರು.

ಆಮೇಲೆ ಸದಾನಂದಗೌಡರು ಸಿಎಂ ಆಗಿದ್ದಾಗ ಹದಿನೇಳು ಕೆರೆಗಳಿಗೆ ನೀರು ತುಂಬಿಸಲು ಹಣ ಕೊಟ್ಟರು. ಅದು ಬಿಜೆಪಿ ಸರ್ಕಾರ, ಯೋಗೇಶ್ವರ್ ಮಾಡಿದ್ದು ಏನೂ ಇಲ್ಲ. ಹಾಗಾದರೆ ಈ ಯೋಗೇಶ್ವರ್ ಏಕೆ ಕಾಂಗ್ರೆಸ್ ಸರ್ಕಾರದಿಂದ ಈ ಕೆಲಸ ಮಾಡಿಸಲಿಲ್ಲ ಎಂದು ಪ್ರಶ್ನಿಸಿದರು.

ಯೋಗೇಶ್ವರ್ ಕೇವಲ ಬಾಯಿ ಮಾತಿನಲ್ಲಿ ಮಾತ್ರ ಭಗೀರಥ. ಕೃತಿಯಲ್ಲಿ ಅಲ್ಲ. ನಾನು, ಸದಾನಂದಗೌಡರು ಕೃತಿಯಲ್ಲಿ ಮಾಡಿ ತೋರಿಸಿದ್ದೇವೆ. ಸುಳ್ಳು ಹೇಳಿಕೊಂಡು ತಿರುಗಾಡಬಾರದು. ಅವರಿಗೆ ಎಲ್ಲಾ ಪಕ್ಷಗಳು ಆಗಿ ಹೋಗಿವೆ ಎಂದು ಗುಡುಗಿದರು.

ಚನ್ನಪಟ್ಟಣಕ್ಕೆ ಕುಡಿಯುವ ನೀರನ್ನು ಯಾರು ಕೊಟ್ಟಿದ್ದು? ಚನ್ನಪಟ್ಟಣ, ರಾಮನಗರಕ್ಕೆ ತೊರೆಕಾಡನಹಳ್ಳಿಯಲ್ಲಿ ಬೆಂಗಳೂರಿಗೆ ಪಂಪ್ ಮಾಡುವ ನೀರನ್ನು ನಿಮಗೆ ಕೊಟ್ಟಿದ್ದೇನೆ. ನೀರು ಕೊಟ್ಟಿರುವ ವ್ಯಕ್ತಿ ನಾನು ನಿಮ್ಮ‌ ಮುಂದೆ ಜೀವಂತವಾಗಿ ಇದ್ದೇನೆ. ಒಬ್ಬ ಸಾಮಾನ್ಯ ರೈತನ ಮಗ ಏನೇನು ಮಾಡಿದ್ದಾನೆ ಎಂದು ಒಂದು ಪುಸ್ತಕ ಮಾಡಿದ್ದಾರೆ. ಅದನ್ನು ಓದಿ ಎಂದು ಮನವಿ ಮಾಡಿದರು.

2 ರು.ಬೆಲೆಯಲ್ಲಿ ಕೆಜಿ ಅಕ್ಕಿ ಕೊಟ್ಟವನು ನಾನು:

ಐದು ಗ್ಯಾರಂಟಿ ಅಂತೆ. ಇದರಲ್ಲಿ ಒಂದು ಗ್ಯಾರಂಟಿಗೆ ತೊಂದರೆ ಇದೆ ಅಂತಾ ಒಬ್ಬ ಹೇಳುತ್ತಾನೆ. ಮೋದಿ ಅವರು ಪ್ರತಿ ವರ್ಷ ರೈತರ ಖಾತೆಗೆ ಹಣ ಜಮೆ ಮಾಡುತ್ತಾರೆ. 2 ರುಪಾಯಿ ಅಕ್ಕಿ, 3 ರುಪಾಯಿಗೆ ಗೋದಿ, ಸಕ್ಕರೆ ಕೊಟ್ಟ ವ್ಯಕ್ತಿ ನಿಮ್ಮ‌ ಮುಂದೆ ಕೂತಿದ್ದೇನೆ. ಅನೇಕರು ಚಿಕ್ಕ ಹುಡುಗರು ಪುಸ್ತಕ ಓದಬೇಕು. ಈ ಗೌಡ ಏನು ಮಾಡಿದ್ದಾನೆಂದು ಗೊತ್ತಾಗುತ್ತದೆ. ಆಲಮಟ್ಟಿ ಸೇರಿ ಏಳು ಅಣೆಕಟ್ಟು ಕಟ್ಟಿದ್ದೇನೆ ಎಂದು ದೇವೇಗೌಡರು ಹೇಳಿದರು.

ಇವತ್ತು ಕಾಂಗ್ರೆಸ್ ಪಕ್ಷವನ್ನು ದೇಶದಿಂದ ಕಿತ್ತೆಸೆಯುವ ಕೆಲಸ ಆಗಬೇಕು. ಆ ಪಕ್ಷದಿಂದ ದೇಶಕ್ಕೆ ಒಳ್ಳೆಯದಾಗಿಲ್ಲ. ಕಾಂಗ್ರೆಸ್ ಶಾಸಕರು ಲೂಟಿ ಮಾಡಿ ಜೈಲು ಸೇರುತ್ತಿದ್ದಾರೆ. ಇದನ್ನೆಲ್ಲ ಮಾತನಾಡಲು ಯಾರು ಬೇಕು. ಇದಕ್ಕೆಲ್ಲ ಕಡಿವಾಣ ಹಾಕಲು ಯುವಕರನ್ನು ಸೃಷ್ಟಿ ಮಾಡಬೇಕು. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಅಂತಹ ಅಭ್ಯರ್ಥಿ ಬೇಕು ಎಂದು ದೇವೇಗೌಡ ತಿಳಿಸಿದರು.

Share this article