- ಸತೀಶ ಪೂಜಾರಿ ಇತರರ ವಿರುದ್ಧ ಸಚಿವ ಎಸ್ಸೆಸ್ಸೆಂ ವಾಗ್ದಾಳಿ
- - -
ಕನ್ನಡಪ್ರಭ ವಾರ್ತೆ ದಾವಣಗೆರೆಹಿಂದೂ- ಮುಸ್ಲಿಂ ಯಾರೇ ಆಗಿರಲಿ, ಎಲ್ಲರೂ ನೆಮ್ಮದಿ ಹಾಗೂ ಸಾಮರಸ್ಯದಿಂದ ಬಾಳಬೇಕು. ಯಾರೇ ಆಗಿರಲಿ ಎಲ್ಲಾದರೂ ಕಾಲು ಕೆರೆದು ಜಗಳ ಮಾಡಿದರೆ ನಾನಂತೂ ಸುಮ್ಮನಿರಲ್ಲ. ಒಳಗೆ ಹಾಕಿಸುತ್ತೇನಷ್ಟೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಎಚ್ಚರಿಕೆ ನೀಡಿದರು.
ಹಿಂದೂ ಜಾಗರಣಾ ವೇದಿಕೆಯ ಸತೀಶ ಪೂಜಾರಿ ಕುರಿತು ಮಾತನಾಡಿದ ಸಚಿವರು, ಅವರಿಗೆ ಬೇರೆ ಕೆಲಸವೇ ಇಲ್ಲವೇನು? ಬಾ ನನ್ನ ಮನೆ ಮುಂದೆ, ಮನೆ ಮುಂದಿನ ಪಾರ್ಕ್‌ನಲ್ಲಿ ಫ್ಲೆಕ್ಸ್‌ಗಳನ್ನು ಹಾಕಿಸು. ಮಟ್ಟಿಕಲ್ಲು ಪ್ರದೇಶದಲ್ಲಿ ಹಿಂದು-ಮುಸ್ಲಿಂ ಎಲ್ಲರೂ ಇದ್ದಾರೆ. ಅಲ್ಲಿ ಹೋಗಿ ಮುಸ್ಲಿಮರ ಮನೆ ಮುಂದೆಯೇ ಫ್ಲೆಕ್ಸ್ ಹಾಕಬೇಕಾ? ಬೇರೆ ಕೆಲಸ ಇಲ್ಲವಾ? ಅಲ್ಲಿ ಏನಾದರೂ ಒಬ್ಬನೇ ಒಬ್ಬ ಮುಸ್ಲಿಂ ಅವತ್ತು ಇದ್ದಿದ್ದರೂ ದೊಡ್ಡ ರಂಪರಾಡಿ ಮಾಡುತ್ತಿದ್ದರು. ಯಾವೊಬ್ಬ ಮುಸ್ಲಿಮರೂ ಅವತ್ತು ಅಲ್ಲಿರಲಿಲ್ಲ. ಮುಸ್ಲಿಮರು ಬರಲಿ ಬರಲಿ ಅಂತಲೇ ಕಾಯುತ್ತಿದ್ದರು ಎಂದು ಸಚಿವರು ಕಿಡಿಕಾರಿದರು.
ಹಿಂದೂಗಳಾಗಲೀ, ಮುಸ್ಲಿಮರಾಗಲೀ ದಾವಣಗೆರೆಯಲ್ಲಿ ಅಣ್ಣ- ತಮ್ಮಂದಿರಂತೆ ಬಾಳುತ್ತಿದ್ದಾರೆ. ಅದನ್ನು ಹಾಳು ಮಾಡುವುದು ಬೇಡ. 1994ರಲ್ಲಿ ಆಗಿದ್ದನ್ನೆಲ್ಲಾ ನಾವು, ನೀವುಗಳೂ ನೋಡಿದ್ದೇವೆ. ಅಂತಹದ್ದೆಲ್ಲಾ ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಇಂತಹ ಘಟನೆಗಳಿಂದ ಯಾರೂ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು ಎಂದು ಚಾಟಿ ಬೀಸಿದರು.
- - -