ನವ ವೈದ್ಯರು ವೃತ್ತಿ ಗೌರವ ಹೆಚ್ಚಿಸಲಿ: ಬಸವಂತಪ್ಪ

KannadaprabhaNewsNetwork |  
Published : Oct 06, 2026, 03:00 AM IST
5ಕೆಡಿವಿಜಿ1-ದಾವಣಗೆರೆಯಲ್ಲಿ ಸೋಮವಾರ ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಪಿಜಿ ಸೆಂಟರ್‌ನಿಂದ 29ನೇ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿದ ಸಚಿವ ಕೆ.ಎಸ್.ಬಸವಂತಪ್ಪ. | Kannada Prabha

ಸಾರಾಂಶ

ನಿಸ್ವಾರ್ಥ ಸೇವೆಗೆ ಮತ್ತೊಂದು ಹೆಸರಾದ ವೈದ್ಯಕೀಯ ವೃತ್ತಿಯು ಎಲ್ಲರಿಗೂ ಒಲಿಯದು. ಅಂತಹ ವೃತ್ತಿಯನ್ನು ಕೇವಲ ಹಣ ಸಂಪಾದನೆ ಮಾರ್ಗ ಮಾಡಿಕೊಳ್ಳದೇ, ಸೇವಾ ಮನೋಭಾವದಿಂದ ಬಡವರು, ದುರ್ಬಲರು, ಅಸಹಾಯಕರು, ರೈತರು, ಗ್ರಾಮೀಣರ ಆರೋಗ್ಯದ ಕಾಪಾಡುವ ಮೂಲಕ ಪವಿತ್ರ ವೃತ್ತಿಯಾಗಿಸಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದ್ದಾರೆ.

- ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಪಿಜಿ ಸೆಂಟರ್‌ನಿಂದ 29ನೇ ಪದವಿ ಪ್ರದಾನ ಸಮಾರಂಭ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನಿಸ್ವಾರ್ಥ ಸೇವೆಗೆ ಮತ್ತೊಂದು ಹೆಸರಾದ ವೈದ್ಯಕೀಯ ವೃತ್ತಿಯು ಎಲ್ಲರಿಗೂ ಒಲಿಯದು. ಅಂತಹ ವೃತ್ತಿಯನ್ನು ಕೇವಲ ಹಣ ಸಂಪಾದನೆ ಮಾರ್ಗ ಮಾಡಿಕೊಳ್ಳದೇ, ಸೇವಾ ಮನೋಭಾವದಿಂದ ಬಡವರು, ದುರ್ಬಲರು, ಅಸಹಾಯಕರು, ರೈತರು, ಗ್ರಾಮೀಣರ ಆರೋಗ್ಯದ ಕಾಪಾಡುವ ಮೂಲಕ ಪವಿತ್ರ ವೃತ್ತಿಯಾಗಿಸಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.

ನಗರದ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಸೋಮವಾರ ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಪಿಜಿ ಸೆಂಟರ್‌ನಿಂದ 29ನೇ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯಕೀಯ ವೃತ್ತಿ ಸೇವಾ ಮನೋಭಾವದಿಂದ ಕೂಡಿರಲಿ. ನವ ವೈದ್ಯರು ಬಡವರು, ರೈತರು, ಕೂಲಿಕಾರರ ನೋವಿಗೆ ಸ್ಪಂದಿಸಲಿ ಎಂದರು.

ಬಡವರು, ರೈತರು, ಕೂಲಿಕಾರರು ಸೇರಿದಂತೆ ವಿವಿಧ ವರ್ಗದ ಜನರು ವೈದ್ಯರಲ್ಲಿ ಚಿಕಿತ್ಸೆಗೆ ಬರುತ್ತಾರೆ. ಅಂತಹವರ ಆರ್ಥಿಕ ಪರಿಸ್ಥಿತಿ ಅರಿತು, ಮಾನವೀಯತೆಯಿಂದ ಉತ್ತಮ ಚಿಕಿತ್ಸೆ ನೀಡುವುದು ವೈದ್ಯರ ಜವಾಬ್ದಾರಿ ಆಗಬೇಕು. ಈಚಿನ ದಿನಗಳಲ್ಲಿ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಆಯುರ್ವೇದ ಚಿಕಿತ್ಸೆಯತ್ತ ಜನರ ಒಲವು ಹೆಚ್ಚುತ್ತಿದೆ. ಆಯುರ್ವೇದ ಚಿಕಿತ್ಸಾ ಪದ್ಧತಿ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚುತ್ತಿದೆ. ಈ ಕ್ಷೇತ್ರದಲ್ಲಿ ವೈದ್ಯರಿಗೆ ಉತ್ತಮ ಅವಕಾಶಗಳಿವೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ, ಜ್ಞಾನ ಮತ್ತು ಕೌಶಲ್ಯವನ್ನು ಸಮಾಜದ ಆರೋಗ್ಯ ಸೇವೆಗೆ ಬಳಸಿಕೊಳ್ಳಿ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಶಿಕ್ಷಣ, ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನ ಅಲಂಕರಿಸುತ್ತಿರುವುದು ಹೆಮ್ಮೆಯ ಸಂಗತಿ. ವಿದ್ಯಾರ್ಥಿಗಳು ತಮಗೆ ದೊರೆತಿರುವ ಅವಕಾಶ ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಜೊತಗೆ ಸಮಾಜಕ್ಕೆ ಕೊಡುಗೆ ನೀಡಬೇಕು. ವೈದ್ಯಕೀಯ ಪದವಿ ಪಡೆದು ವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ನವ ವೈದ್ಯರು ತಮ್ಮ ತಂದೆ-ತಾಯಿ ತ್ಯಾಗ, ಪರಿಶ್ರಮ ಎಂದಿಗೂ ಮರೆಯಬಾರದು. ಮಕ್ಕಳನ್ನು ವೈದ್ಯರಾಗಿಸಲು ಪೋಷಕರು ಕಷ್ಟ ಎದುರಿಸಿದ್ದು, ಹೆತ್ತವರನ್ನು ಗೌರವದಿಂದ ನೋಡಿಕೊಳ್ಳುವುದೇ ವೈದ್ಯ ವೃತ್ತಿಗೆ ನೀವು ಸಲ್ಲಿಸುವ ಮೊದಲ ಗೌರವವಾಗಿದೆ ಎಂದರು.

ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರೂ ತಂದೆ-ತಾಯಿ, ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿಗೆ ಹೆಮ್ಮೆ ತರುವ ರೀತಿಯ ಲ್ಲಿ ಸೇವೆ ಮಾಡಿ. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಮೂಲಕ ತಾವು ಶಿಕ್ಷಣ ಪಡೆದ ಸಂಸ್ಥೆಗೆ ಕೀರ್ತಿ ತನ್ನಿ. ಉತ್ತಮ ವೈದ್ಯರಾಗುವ ಜೊತೆಗೆ ಸಮಾಜಕ್ಕೆ ಮಾದರಿ ಪ್ರಜೆಗಳಾಗಿ ರೂಪುಗೊಳ್ಳಿ. ವೃತ್ತಿ ಗೌರವ ಹೆಚ್ಚಿಸುವಂತೆ ನೀವೆಲ್ಲರೂ ಸೇವೆ ಮಾಡಬೇಕು ಎಂದು ಕೆ.ಎಸ್.ಬಸವಂತಪ್ಪ ಸಲಹೆ ನೀಡಿದರು.

ದಕ್ಷಿಣ ಕ್ಷೇತ್ರ ಶಾಸಕ ಸಮಥ೯ ಶಾಮನೂರು ಮಾತನಾಡಿ, ವೈದ್ಯಕೀಯ ಪದವಿ ಬಳಿಕ ವೈದ್ಯರು ಕೇವಲ ಕ್ಲಿನಿಕ್‌, ಆಸ್ಪತ್ರೆಗೆ ಸೀಮಿತರಾಗದೇ, ಸಮುದಾಯದ ಆರೋಗ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ದೇಶದ ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಸಮುದಾಯ ವೈದ್ಯಕೀಯದ ಪಾತ್ರ ಅತ್ಯಂತ ಮಹತ್ವದ್ದು. ನಗರ, ಗ್ರಾಮೀಣ ಪ್ರದೇಶಗಳಲ್ಲಿ ಜನರು ಅನೇಕ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ನಿರ್ಲಕ್ಷಿಸುತ್ತಾರೆ. ಗ್ಯಾಂಗ್ರಿನ್, ಎಕ್ಸಿಮಾ ಸೇರಿದಂತೆ ಹಲವು ಕಾಯಿಲೆ ಉಲ್ಬಣಿಸಿ, ಗಂಭೀರ ಹಂತ ತಲುಪಿದ ನಂತರ ವೈದ್ಯರ ಬಳಿ ಬರುವ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಗೆ ಕಡಿವಾಣ ಹಾಕಲು ವೈದ್ಯರು ಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಅಶ್ವಿನಿ ಆಯುರ್ವೇದಿಕ್ ಕಾಲೇಜು ಯೋಗ ದಿನಾಚರಣೆ ಸೇರಿದಂತೆ ವಿವಿಧ ಆರೋಗ್ಯ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ. ಗ್ರಾಮೀಣ ಭಾಗದಲ್ಲಿ ಒಂದು ವಾರದ ಕಾಲ ತರಬೇತಿ, ಆರೋಗ್ಯ ಜಾಗೃತಿ ಶಿಬಿರ ನಡೆಸುವ ಮೂಲಕ ಜನರಿಗೆ ಆರೋಗ್ಯದ ಕುರಿತು ಅರಿವು ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಕಾರ್ಯಕ್ರಮ ಇನ್ನಷ್ಟು ವಿಸ್ತರಿಸಬೇಕು. ವೈದ್ಯಕೀಯ ಪದವಿ ಪಡೆಯುವಲ್ಲಿ ವಿದ್ಯಾರ್ಥಿಗಳ ಪರಿಶ್ರಮದ ಜೊತೆಗೆ ಹೆತ್ತವರು, ಕುಟುಂಬ ಸದಸ್ಯರು, ಬೋಧಕರ ಪಾತ್ರವೂ ಮಹತ್ವದ್ದಾಗಿದೆ. ಹಲವು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಗುರುಗಳ ಪರಿಶ್ರಮವನ್ನು ನವ ವೈದ್ಯರು ಸದಾ ಸ್ಮರಿಸಬೇಕು ಎಂದು ಹೇಳಿದರು.

ಮಕ್ಕಳ ತಜ್ಞ ಡಾ.ಬಾಣಾಪುರ ಮಠ, ಸುಶ್ರುತ ಆಯುರ್ವೇದ ಕಾಲೇಜಿನ ಕಾರ್ಯದರ್ಶಿ ಡಾ. ಬಿ.ಜಿ.ಸತೀಶ, ಸಿಟಿ ಸೆಂಟ್ರಲ್ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಎಲ್.ಸುಬ್ಬರಾವ್, ಡಾ.ಶ್ರೀಶೈಲ ಎಂ.ಬ್ಯಾಡಗಿ, ಕೆಪಿಸಿಸಿ ಸದಸ್ಯ ಬಸವಾಪಟ್ಟಣದ ಬಿ.ಜಿ.ನಾಗರಾಜ, ಅಶ್ವಿನಿ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಮೃತ್ಯಂಜಯ ಎನ್.ಹಿರೇಮಠ, ಟಿ.ಎಚ್.ಎಂ. ಚನ್ನವೀರ ಸ್ವಾಮಿ, ಡಾ. ಎನ್.ಆರ್. ಶಂಕರ ನಾರಾಯಣ, ಡಾ. ಎಂ.ಎಚ್. ಮುಕ್ತ, ಡಾ.ಮಧು, ಡಾ. ಎಂ.ಎಚ್. ಸುಶ್ರುತ್, ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಇದ್ದರು.

- - -

(ಕೋಟ್‌)

ಆಯುರ್ವೇದ ವೈದ್ಯ ಪದ್ಧತಿಯಲ್ಲಿ ರೋಗ ತಡೆಗಟ್ಟುವಿಕೆ, ಆರೋಗ್ಯಕರ ಜೀವನಶೈಲಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದನ್ನು ಸಮಾಜದ ಎಲ್ಲ ವರ್ಗದ ಜನರಿಗೆ ತಲುಪಿಸುವ ಜವಾಬ್ದಾರಿ ನವ ವೈದ್ಯರ ಮೇಲಿದೆ. 2026ನೇ ಸಾಲಿನಲ್ಲಿ ವೈದ್ಯಕೀಯ ಪದವಿ ಪಡೆದ ಎಲ್ಲ ನವ ವೈದ್ಯರು ಆಯುರ್ವೇದ ಚಿಕಿತ್ಸಾ ಪದ್ಧತಿ ಮಹತ್ವ ಜನರಿಗೆ ತಲುಪಿಸಿ, ನಗರ, ಗ್ರಾಮೀಣ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತ ಉತ್ತಮ ವೈದ್ಯರಾಗಿ ರೂಪುಗೊಳ್ಳಬೇಕು.

- ಸಮರ್ಥ ಎಂ.ಶಾಮನೂರು, ಶಾಸಕ.

- - -

-5ಕೆಡಿವಿಜಿ1: ದಾವಣಗೆರೆಯಲ್ಲಿ ಸೋಮವಾರ ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಪಿಜಿ ಸೆಂಟರ್‌ನಿಂದ ನಡೆದ 29ನೇ ಪದವಿ ಪ್ರದಾನ ಸಮಾರಂಭವನ್ನು ಸಚಿವ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಘಟಿತರಾಗಿ ಕ್ರೀಡಾಕೂಟ ಯಶಸ್ವಿಗೊಳಿಸಿ
ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಹೆಚ್ಚುವರಿ 15 ಮೆಗಾವ್ಯಾಟ್ ವಿದ್ಯುತ್‌ಗೆ ಮನವಿ