ಗದಗ: ರಾಜ್ಯದಲ್ಲಿ ಯುವ ವೈದ್ಯರನ್ನು ಐಎಂಎ ಸಂಘಟನೆಯಲ್ಲಿ ಒಗ್ಗೂಡಿಸಿ ವೈದ್ಯಕೀಯದಲ್ಲಿ ಸಾಧನೆ ಹಾಗೂ ಅವರನ್ನು ಜನಮುಖಿ, ಸಮಾಜಮುಖಿಯಾಗಿ ಕಾರ್ಯ ಮಾಡಲು ಅಣಿಗೊಳಿಸಬೇಕಿದೆ ಎಂದು ರಾಜ್ಯ ಐಎಂಎ ಅಧ್ಯಕ್ಷ ಟಿ. ವೀರಭದ್ರಯ್ಯ ತಿಳಿಸಿದರು.ನಗರದ ಲಯನ್ಸ್ ಸ್ಕೂಲ್ ಪ್ರಾಂಗಣದಲ್ಲಿ ಗದಗ ಐಎಂಎ ಶತಮಾನೋತ್ಸವದ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ವೈದ್ಯರನ್ನು ಐಎಂಎ ಕಡೆ ಆಕರ್ಷಿತರನ್ನಾಗಿಸಿ ಅವರು ಐಎಂಎ ಸದಸ್ಯರನ್ನಾಗಿಸುವ ಮತ್ತು ಅವರನ್ನು ಅವಲಂಬಿಸಿರುವ ಕುಟುಂಬಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರೂಪಿಸಲಾದ ಯೋಜನೆಗೆ ಒಳಪಡಿಸಲು ಹಿರಿಯ ವೈದ್ಯರು ಪ್ರೇರಣೆ ನೀಡಬೇಕು. ಕೆಎಸ್‌ಎಸ್‌ಎಸ್ ಯೋಜನೆಯಡಿ ವೈದ್ಯರ ಅವಲಂಬಿತರಿಗೆ ₹1 ಕೋಟಿಯವರೆಗೆ ಪರಿಹಾರವಿದೆ ಎಂದರು.ರಾಜ್ಯದಲ್ಲಿ ವೈದ್ಯರ ಮೇಲೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆಯಂತಹ ಪ್ರಕರಣಗಳನ್ನು ರಾಜ್ಯ ಐಎಂಎ ಗಂಭೀರವಾಗಿ ಪರಿಗಣಿಸಿದ್ದು ಈ ಕುರಿತು ಕ್ರಮ ಜರುಗಿಸಲಾಗಿದೆ. 1926ರ ಡಿಸೆಂಬರ್‌ನಲ್ಲಿ ಗದಗ ಐಎಂಎ ಪ್ರಾರಂಭಗೊಂಡು ಕಳೆದ ೧೦೦ ವರ್ಷಗಳವರೆಗೆ ಕ್ರಿಯಾಶೀಲತೆಯಿಂದ ಕಾರ್ಯ ಮಾಡಿಕೊಂಡು ಬಂದಿದೆ. ಶತಮಾನೋತ್ಸವದ ಸಂಭ್ರಮದಲ್ಲಿ ಜನಮುಖಿ, ಸಮಾಜಮುಖಿಯ ಹಲವಾರು ರಚನಾತ್ಮಕ ಕಾರ್ಯಯೋಜನೆಗಳನ್ನು ಡಾ. ಶ್ರೀಧರ ಕುರಡಗಿ ಅವರ ನೇತೃತ್ವದ ತಂಡ ಸೇವೆಗೆ ಸನ್ನದ್ಧಗೊಂಡಿದೆ. ಗದುಗಿನ ಐವರು ಹಿರಿಯ ವೈದ್ಯರು ರಾಜ್ಯ ಐಎಂಎ ಅಧ್ಯಕ್ಷರಾಗಿ ಇದು ವರೆಗೆ ಸೇವೆ ಸಲ್ಲಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲೂ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡಿದ ಶ್ರೇಯಸ್ಸು ಗದುಗಿಗೆ ಸಲ್ಲುವುದು ಎಂದರು.ಅಧ್ಯಕ್ಷತೆ ವಹಿಸಿದ್ದ ಐಎಂಎ ಅಧ್ಯಕ್ಷ ಡಾ. ಶ್ರೀಧರ ವಿ. ಕುರಡಗಿ ಮಾತನಾಡಿ, ಶತಮಾನೋತ್ಸವ ಕೇವಲ ಕಾಟಾಚಾರಕ್ಕೆ ಆಗದಂತೆ ರಚನಾತ್ಮಕ ಕಾರ್ಯ ಮಾಡಲು ಹಿರಿಯ ವೈದ್ಯರ ಸಲಹೆಯೊಂದಿಗೆ 2026ರ ವರ್ಷದಾದ್ಯಂತ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಿದ್ದು, ಹಂತ- ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದರು.