ಕನ್ನಡಪ್ರಭ ವಾರ್ತೆ ಉಡುಪಿಯುವ ವಕೀಲರು ಜಿಲ್ಲಾಮಟ್ಟಕ್ಕೆ ಸೀಮಿತರಾಗದೇ ಹೈಕೋರ್ಟ್, ಸುಪ್ರೀಂಕೋರ್ಟ್ ನ್ಯಾಯಾಧೀಶರಾಗುವ ಕನಸನ್ನು ಕಂಡು, ಅದನ್ನು ನನಸಾಗಿಸಿಕೊಳ್ಳುವ ಸಾಧನೆ ಮಾಡಬೇಕು ಎಂದು ಹೈಕೋರ್ಟ್ ನ್ಯಾಯಾಧೀಶ ಮತ್ತು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಇ.ಎಸ್. ಇಂದಿರೇಶ್ ಕರೆ ನೀಡಿದ್ದಾರೆ.ಅವರು ಭಾನುವಾರ ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ 125ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಕೇವಲ ಸಂಭ್ರಮಾಚರಣೆ ನಡೆಸಿದರೆ ಸಾಲದು, ಈ ಎರಡು ದಿನ ಇಲ್ಲಿ ಆಗಮಿಸಿದ ರಾಜ್ಯ ಮತ್ತು ರಾಷ್ಟ್ರದ ಹಿರಿಯ ನ್ಯಾಯಾಧೀಶರು ಹಾಗೂ ಹಿರಿಯ ವಕೀಲರಿಂದ ಯುವ ವಕೀಲರು ಸ್ಫೂರ್ತಿಯನ್ನುಪಡೆಯಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗಿದೆ. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಹಾಗೂ ಅವರ ತಂಡದ ಅವಿರತ ಶ್ರಮದ ಫಲವಾಗಿ ಕಾರ್ಯಕ್ರಮವು ಉತ್ತಮವಾಗಿ ಮೂಡಿಬಂದಿದೆ ಎಂದು ಅವರು ಶ್ಲಾಘಿಸಿದರು.ರಾಜ್ಯ ಹೈಕೋರ್ಟ್ ನ್ಯಾಯಾಧೀಶ ನ್ಯಾ.ಸಿ.ಎಂ. ಜೋಷಿ ಮಾತನಾಡಿ, ತಂತ್ರಜ್ಞಾನ ಸಾಕಷ್ಟು ಮುಂದುವರಿಯುತ್ತಿದೆ. ವಕೀಲ ವೃತ್ತಿ ಮುಂದಿನ ದಿನಗಳಲ್ಲಿ ಇದೇ ರೀತಿ ಸಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಲವು ಕಾರಣಗಳಿಗಾಗಿ ವೃತ್ತಿಯ ಆಯಾಮ ಬದಲಾಗುತ್ತದೆ. ಹೀಗಾಗಿ ಮುಂದೆ ಸಾಗುವ ದಾರಿಯ ಬಗ್ಗೆ ಸ್ಪಷ್ಟತೆ ಇರಲಿ ಎಂದರು.ಹೈಕೋರ್ಟ್ ನ್ಯಾಯಾಧೀಶ ನ್ಯಾ. ಎಸ್.ವಿಶ್ವಜಿತ್ ಶೆಟ್ಟಿ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.ವೇದಿಕೆಯಲ್ಲಿ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾ.ಶಿವಶಂಕರ್ ಬಿ.ಅಮರಣ್ಣವರ್, ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ನ್ಯಾ.ಕಿರಣ್.ಎಸ್. ಗಂಗಣ್ಣನವರ್, ಶತಮಾನೋತ್ತರ ರಜತ ಮಹೋತ್ಸವ ಸಮಿತಿಯ ನ್ಯಾಯವಾದಿಗಳಾದ ಎ.ಸಂಜೀವ, ಎಂ.ಶಾಂತರಾಮ್ ಶೆಟ್ಟಿ, ಬಿ.ನಾಗರಾಜ್, ಸತೀಶ್ ಪೂಜಾರಿ, ಸುಮಿತ್ ಹೆಗ್ಡೆ, ಮಿತ್ರಕುಮಾರ್ ಶೆಟ್ಟಿ, ಅಸಾದುಲ್ಲಾ ಕಟಪಾಡಿ, ವಿಲ್ಫ್ರೇಡ್, ಸಂತೋಷ್ ಮೂಡುಬೆಳ್ಳೆ, ರವೀಂದ್ರ ಬೈಲೂರು, ಶಶೀಂದ್ರ ಕುಮಾರ್, ದಿನೇಶ್ ಶೆಟ್ಟಿ, ಗಂಗಾಧರ್ ಎಚ್.ಎಂ., ಆನಂದ್ ಮಡಿವಾಳ, ಎನ್.ಆಚಾರ್ಯ, ಅಮೃತಕಲಾ ಉಪಸ್ಥಿತರಿದ್ದರು.ಶತಮಾನೋತ್ತರ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಸ್ವಾಗತಿಸಿದರು. ಕಾರ್ಯದರ್ಶಿ ಕೆ.ಆರ್. ರಾಮಚಂದ್ರ ಅಡಿಗ ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ನಿರೂಪಿಸಿದರು.ಇದೇ ಸಂದರ್ಭದಲ್ಲಿ ಉಡುಪಿ ವಕೀಲರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಗಳಿಗೆ ಹಾಗೂ ಶತಮಾನೋತ್ತರ ರಜತ ಮಹೋತ್ಸವ ಉಪಸಮಿತಿಗಳ ಸಂಚಾಲಕರನ್ನು ಗೌರವಿಸಲಾಯಿತು.
--------------ಆರೋಪಿಗಳ ಬಗ್ಗೆ ಕಠಿಣ ನಿಲುವು ಬೇಡರಾಜ್ಯ ಹೈಕೋರ್ಟ್ ನ್ಯಾಯಾಧೀಶ ನ್ಯಾ.ಟಿ.ಜಿ. ಶಿವಶಂಕರೇಗೌಡ ಮಾತನಾಡಿ, ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳ ನ್ಯಾಯಾಧೀಶರು ಸಣ್ಣಪುಟ್ಟ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಜಾಮೀನು ನೀಡುವ ಧೈರ್ಯ ತೋರಬೇಕು. ಹಾಗೇ ಮಾಡದೇ ನ್ಯಾಯಾಧೀಶ ಕಠಿಣ ನಿಲುವುಗಳಿಂದ ಯುವ ವಕೀಲರ ಬೆಳವಣಿಗೆಗೆ ಹೊಡೆತ ಬೀಳುತ್ತದೆ. ಹೀಗಾಗಿ ಮ್ಯಾಜಿಸ್ಟ್ರೇಟರ್‌ಗಳು ಕಾನೂನಿನ ವ್ಯಾಪ್ತಿಯೊಳಗೆ ವಕೀಲರನ್ನೂ ಪ್ರೋತ್ಸಾಹಿಸುತ್ತಾ ನ್ಯಾಯದಾನವನ್ನು ಮಾಡಬೇಕು ಎಂದರು.