ಯುವತಿಯ ಹುಟ್ಟುಹಬ್ಬದ ದಿನವೇ ರಸ್ತೆಯಲ್ಲಿ ಇರಿತ । ಬಳಿಕ ಬಾವಿಗೆ ಹಾರಿದ ಭಗ್ನಪ್ರೇಮಿ
ಬ್ರಹ್ಮಾವರ: ಮದುವೆ ನಿರಾಕರಿಸಿದ ಯುವತಿಯ ರಸ್ತೆಯಲ್ಲೇ ಇರಿದು ಕೊಂದ ಭಗ್ನಪ್ರೇಮಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕೊಕ್ಕರ್ಣೆಯಲ್ಲಿ ಶುಕ್ರವಾರ ನಡೆದಿದೆ. ಕೊಲೆಯಾದ ಯುವತಿ ರಕ್ಷಿತಾ (20) ಮತ್ತು ಆತ್ಮಹತ್ಯೆ ಮಾಡಿಕೊಂಡ ಯುವಕ ಕಾರ್ತಿಕ್ ಪೂಜಾರಿ (25). ಬ್ರಹ್ಮಾವರ ಸರ್ವೆ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಉದ್ಯೋಗಿಯಾಗಿದ್ದ ರಕ್ಷಿತಾ ಶುಕ್ರವಾರ ಬೆಳಗ್ಗೆ ಎಂದಿನಂತೆ ನಡೆದುಕೊಂಡು ಬಸ್ಸು ನಿಲ್ದಾಣಕ್ಕೆ ತೆರಳುತ್ತಿದ್ದಾಗ ಪುಟ್ಟನಕಟ್ಟೆ ಎಂಬಲ್ಲಿ ಈ ಘಟನೆ ನಡೆಸಿದೆ.ಕಾರ್ತಿಕ್ ಯುವತಿಗೆ ಸಂಬಂಧಿಕನಾಗಿದ್ದು, ಆಕೆಯನ್ನು ಮದುವೆಯಾಗುವುದಕ್ಕೆ ಬಯಸಿದ್ದ. ಆದರೆ ಆಕೆಯ ಮನೆಯವರಿಗೆ ಆತನೊಂದಿಗೆ ಮದುವೆಗೆ ಇಷ್ಟವಿರಲಿಲ್ಲ. ಅದ್ದರಿಂದ 2 ವಾರದ ಹಿಂದೆ ರಕ್ಷಿತಾ ಆತನ ಮೊಬಲ್ ನಂಬರನ್ನು ಬ್ಲಾಕ್ ಮಾಡಿದ್ದಳು.
ಇದರಿಂದ ಕುಪಿತನಾಗ ಕಾರ್ತಿಕ್ ಶುಕ್ರವಾರ ಬೈಕಿನಲ್ಲಿ ಬಂದು ಆಕೆಯನ್ನು ರಸ್ತೆಯಲ್ಲೇ ತಡೆದು ನಿಲ್ಲಿಸಿ, ತನ್ನನ್ನು ಮದುವೆಯಾಗುತ್ತಿಯಾ ಇಲ್ವಾ ಎಂದು ಪ್ರಶ್ನಿಸಿದ್ದಾನೆ, ಆಕೆ ನಿರಾಕರಿಸಿದ್ದು ಆತ ಏಕಾಏಕಿ ಚಾಕುವಿನಿಂದ ಆಕೆಯ ಕುತ್ತಿಗೆ, ಎದೆಯ ಎರಡು ಪಕ್ಕೆಗಳಿಗೆ ಯದ್ವಾತದ್ವಾ ಚುಚ್ಚಿ ಚಾಕು ಮತ್ತು ಬೈಕನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ರಕ್ಷಿತಾಳನ್ನು ಸ್ಥಳೀಯರು ತಕ್ಷಣ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಆಕೆ ಕೊನೆಯುಸಿರೆಳೆದಿದ್ದಾಳೆ.ಘಟನಾ ಸ್ಥಳದಿಂದ ಓಡಿ ಹೋಗಿದ್ದ ಕಾರ್ತಿಕ್‌ನ ಮೃತದೇಹ ಸಂಜೆ ರಕ್ಷಿತಾಳ ಮನೆಯ ಬಳಿ ಇರುವ ಬಾವಿಯಲ್ಲಿ ಪತ್ತೆಯಾಗಿದೆ. ಆತ ಕೊಲೆ ಮಾಡಿದ ಭಯದಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶುಕ್ರವಾರವೇ ರಕ್ಷಿತಾಳ ಹುಟ್ಟುಹಬ್ಬವಾಗಿದ್ದು, ಅದೇ ದಿನ ಆಕೆಯ ಸಾವಿನ ದಿನವೂ ಆಗಿದ್ದು ದುರಂತವಾಗಿದೆ.