- ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟೀಯ ಮತದಾರರ ದಿನಾಚರಣೆ
ಮತದಾನ ನಮ್ಮ ಹಕ್ಕಾಗಿದ್ದು ಯುವ ಜನರು ತಪ್ಪದೇ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ತಹಸೀಲ್ದಾರ್ ಡಾ.ನೂರಲ್ ಹುದಾ ಕರೆ ನೀಡಿದರು.
ಶುಕ್ರವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಮತದಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿ ಪ್ರಪಂಚದ ಕೆಲವು ದೇಶಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕಿಲ್ಲ. ಆದರೆ, ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಮಹಿಳೆಯರಿಗೂ ಮತದಾನದ ಹಕ್ಕು ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ನಿಮ್ಮ ಮತದಾನದ ಹಕ್ಕನ್ನು ನೀವೇ ಚಲಾಯಿಸ ಬೇಕು. ಅನೇಕ ಸಂದರ್ಭದಲ್ಲಿ ಚುನಾವಣೆಗೆ ಸಿಕ್ಕ ರಜೆ ಸಂದರ್ಭದಲ್ಲಿ ಪ್ರವಾಸಕ್ಕೆ ಹೋಗಿ ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದರು.ಅತಿಥಿಯಾಗಿದ್ದ ತಾಪಂ ಇಒ ಎಚ್.ಡಿ. ನವೀನ್ ಕುಮಾರ್ ಮಾತನಾಡಿ, ಕೆಲವು ದೇಶಗಳಲ್ಲಿ ಈಗಲೂ ಮಹಾರಾಜರ ಆಳ್ವಿಕೆ ಇದೆ. ಆದರೆ, ಭಾರತ ದೇಶದಲ್ಲಿ ಮಾತ್ರ ಚುನಾವಣಾ ಪದ್ಧತಿ ಮೂಲಕವೇ ಸರ್ಕಾರ ರಚನೆಯಾಗುತ್ತಿದೆ. 18 ವರ್ಷ ತುಂಬಿದವರಿಗೆ ಮತದಾನದ ಹಕ್ಕಿದೆ. ಆದರೆ, 18 ವರ್ಷ ತುಂಬಿದ ಶೇ. 25 ರಷ್ಟು ಜನರು ಮತದಾನ ಮಾಡುತ್ತಿರಲಿಲ್ಲ. 1955 ಜ.25 ರಂದು ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿದ್ದು 2011 ರಿಂದ ಯುವ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಜ.25 ರಂದು ರಾಷ್ಟ್ರೀಯ ಮತದಾನ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ಮಾತನಾಡಿ, ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಮತದಾನದ ಮಹತ್ವ ಹಾಗೂ ಪ್ರಜೆ ಗಳಿಗೆ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸಲು ಅನೇಕ ವರ್ಷಗಳಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸುತ್ತಿದೆ. ದೇಶ ಪ್ರಗತಿ ಸಾಧಿಸಬೇಕಾದರೆ ಉತ್ತಮ ನಾಯಕನ ಆಯ್ಕೆ, ಸುಭದ್ರ ಸರ್ಕಾರ ಆರಿಸಬೇಕಾಗಿದೆ. ಕೇರಳ ಮೊದಲ ಬಾರಿಗೆ ಮತದಾನದಲ್ಲಿ ಇವಿಎಂ ಬಳಕೆ ಪರಿಚಯಿಸಿತು. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಪ್ರಮಾಣ ವಚನ ಬೋಧಿಸಿದರು.ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್. ಮಂಜುನಾಥ್, ತಾಪಂ ನರೇಗ ಯೋಜನೆ ಸಹಾಯಕ ನಿರ್ದೇಶಕ ಮನೀಶ್,ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕಿ ಸವಿತ, ಐಕ್ಯೂ.ಎಸಿ ಸಂಚಾಲಕ ಮುಖ್ಯಸ್ಥ ಪ್ರಸಾದ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಸತೀಶ್ ಇದ್ದರು. ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಶಂಕರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.