ಯುವ ಜನತೆ ಮತದಾನದ ಕರ್ತವ್ಯದಿಂದ ದೂರಾಗದಿರಿ: ಮಂಜುನಾಥ್ ನಾಯಕ್

KannadaprabhaNewsNetwork | Published : Jan 26, 2024 1:47 AM

ಸಾರಾಂಶ

ಮತದಾನ ಎಂಬುದು ಒಂದು ಹಕ್ಕು ಮತ್ತು ಕರ್ತವ್ಯ ಎನ್ನುವುದು ನಮ್ಮ ದೇಶದ ಪ್ರತಿಯೊಬ್ಬರಿಗೂ ತಿಳಿಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ ಎಂದು ನಗರದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಪಾಲ್ಗೊಂಡು ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ್ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮತದಾನ ಮಾಡುವುದು ನಮ್ಮ ಹಕ್ಕು ಮಾತ್ರವಲ್ಲ ಕರ್ತವ್ಯ ಮತ್ತು ಜವಾಬ್ದಾರಿ ಕೂಡ ಆಗಿದೆ ಎಂದು ಮನಗಂಡು ಯುವಜನತೆ ಹೆಚ್ಚು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರ್ರಾಧಿಕಾರ, ಜಿಲ್ಲಾ ಪಂಚಾಯಿತಿ ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಕುವೆಂಪು ರಂಗಂಂದಿರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮತದಾನ ಎಂಬುದು ಒಂದು ಹಕ್ಕು ಮತ್ತು ಕರ್ತವ್ಯ ಎನ್ನುವುದು ನಮ್ಮ ದೇಶದ ಪ್ರತಿಯೊಬ್ಬರಿಗೂ ತಿಳಿಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ. ಗ್ರಾಮೀಣ ಭಾಗದಲ್ಲಿ ಈ ಕುರಿತಾದ ಅರಿವು ಹೆಚ್ಚಬೇಕು. ನಾವು ಆಯ್ಕೆ ಮಾಡುವ ಜನಪ್ರತಿನಿಧಿಗಳು ಆಡಳಿತ ಮಾತ್ರವಲ್ಲದೆ ಕಾನೂನನ್ನು ಬದಲಿಸುವ ಶಕ್ತಿ ಇರುವುದರಿಂದ ನಮ್ಮ ಆಯ್ಕೆ ಸರಿಯಾಗಿರಬೇಕು ಎಂದರು. ಜಿಲ್ಲಾಧಿಕಾರಿ ಡಾ. ಆರ್‌.ಸೆಲ್ವಮಣಿ ಮಾತನಾಡಿ, ಪ್ರಜಾಪ್ರಭುತ್ವದ ಮೂಲಮಂತ್ರ ಚುನಾವಣೆ. ಪ್ರತಿಯೊಬ್ಬರೂ ಚುನಾವಣೆಯಲ್ಲಿ ಭಾಗವಹಿಸಬೇಕು. ನಗರ ಪ್ರದೇಶದಲ್ಲಿ ಚುನಾವಣಾ ಮತದಾನ ಕಡಿಮೆ ಆಗುತ್ತಿದ್ದು ಯುವಕರು ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಎನ್. ಚಂದನ್ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿ.ಪಂ.ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ ರಾಷ್ಟ್ರೀಯ ಮತದಾನ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ನೆಡೆಸಲಾದ ಪ್ರಬಂಧ, ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಎಎಸ್‌ಪಿ ಅನಿಲ್ ಕುಮಾರ್ ಭೂಮರೆಡ್ಡಿ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಿದರು. ಎಡಿಸಿ ಸಿದ್ದಲಿಂಗರೆಡ್ಡಿ, ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ ಉಪಸ್ಥಿತರಿದ್ದರು.

Share this article