- ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯಾರ್ಥಿಗಳು ಮತ್ತು ಯುವ ಜನತೆ ತಮ್ಮ ಉಜ್ವಲ ಭವಿಷ್ಯಕ್ಕೆ ದುಶ್ಚಟಗಳಿಂದ ದೂರವಿರಬೇಕು ಎಂದು ಬಸವತತ್ವ ಪೀಠದ ಶ್ರೀ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಸಲಹೆ ಮಾಡಿದರು.ರಾಜ್ಯ ಸರ್ಕಾರಿ ನೌಕರರ ಸಂಘದಿಂದ ನಡೆದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ವಿದ್ಯಾರ್ಥಿ ದಿಸೆಯಲ್ಲಿ ಬಹಳಷ್ಟು ಆಕರ್ಷಣೆಗಳಿರುತ್ತವೆ. ಅವುಗಳ ಹಿಂದೆ ಹೋದರೆ ವಿದ್ಯಾಭ್ಯಾಸ ಮೊಟಕಾಗುತ್ತದೆ. ಬದುಕಿನ ಹಾದಿ ತಪ್ಪುತ್ತದೆ, ಜೀವನದ ಅಧಃಪತನವಾಗುತ್ತದೆ ಎಂದು ಎಚ್ಚರಿಸಿದರು.
ಇಂದು ಮಾದಕ ವಸ್ತುಗಳ ವ್ಯಾಪಾರಸ್ಥರು ವಿದ್ಯಾರ್ಥಿಗಳು ಮತ್ತು ಯುವ ಜನತೆಯನ್ನು ಗುರಿಯಾಗಿಸಿದ್ದಾರೆ. ಮೊಬೈಲ್ ಗಳಲ್ಲೇ ಜೂಜಾಟದ ಆಪ್‌ಗಳಿವೆ. ದೊಡ್ಡ ಸೆಲೆಬ್ರಿಟಿಗಳು ಯುವ ಜನತೆಗೆ ಜೂಜಾಟವಾಡುವಂತೆ ಪತ್ರಿಕೆಗಳ ಮುಖ ಪುಟ ಗಳಲ್ಲಿ ಜಾಹೀರಾತು ಮೂಲಕ ಬಹಿರಂಗವಾಗಿಯೇ ಪ್ರೇರೇಪಿಸುತ್ತಿದ್ದಾರೆ. ಅಂಗಡಿಗಳಲ್ಲಿ ಗುಟ್ಕಾ, ತಂಬಾಕು, ಸಿಗರೇಟು, ಬೀಡಿ, ಮದ್ಯದಂತಹ ರಕ್ತ ಬೀಜಾಸುರರು ರಾರಾಜಿಸುತ್ತಿದ್ದಾರೆ. ವಿದ್ಯಾರ್ಥಿಗಳು ಮತ್ತು ಯುವ ಜನ ಇವುಗಳ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು. ಉತ್ತಮ ಭವಿಷ್ಯಕ್ಕೆ ಅವುಗಳಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.ಭವಿಷ್ಯದ ಜೀವನ ಉಜ್ವಲವಾಗಬೇಕಾದರೆ ಇಂದಿನ ವರ್ತಮಾನದಲ್ಲಿ ನಮ್ಮ ನಡತೆ ಉತ್ತಮವಾಗಿರಬೇಕು. ಪ್ರತಿಭಾ ಪುರಸ್ಕಾರ ಎನ್ನುವುದು ಕೇವಲ ಬೆನ್ನು ತಟ್ಟುವುದು ಎಂಬುದನ್ನು ಅರಿಯಬೇಕು. ಪ್ರತಿಭಾ ಪುರಸ್ಕಾರ, ಸನ್ಮಾನ ಗಳಿಂದ ಮೈಮರೆಯದೇ, ಯಾವುದೇ ಭ್ರಮೆಗೊಳಗಾಗದೆ ಮುಂದಿನ ಶಿಕ್ಷಣವನ್ನು ಶ್ರದ್ಧೆ ಮತ್ತು ಪರಿಶ್ರಮ ದಿಂದ ಮಾಡಬೇಕು ಎಂದು ತಿಳಿ ಹೇಳಿದರು.ವಿದ್ಯಾರ್ಥಿಗಳು ಮತ್ತು ಯುವ ಜನತೆ ಶಕ್ತಿ-ಸಾಮರ್ಥ್ಯ ಸದ್ಬಳಕೆ ಮಾಡಿ, ಶಿಕ್ಷಣವಂತರು, ಸಂಸ್ಕಾರವಂತರೂ ಆಗಬೇಕು. ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವುದರಿಂದ ಇನ್ನೂ ಹೆಚ್ಚಿನ ಸಾಧನೆಗೆ ಅವರನ್ನು ಪ್ರೇರೇಪಿಸಿದಂತಾಗುತ್ತದೆ ಎಂದು ತಿಳಿಸಿದರು.ಸಖರಾಯಪಟ್ಟಣದ ಅವಧೂತರು ಹೇಳುತ್ತಿದ್ದ ಹಾಗೆ ವಿದ್ಯಾರ್ಥಿಗಳು ಕ್ಷಣಿಕ ಸುಖಕ್ಕೆ ಆಕರ್ಷಿತರಾಗದೇ ಶ್ರದ್ಧೆ, ಶಿಸ್ತು, ಪರಿಶ್ರಮ ದಿಂದ ಗುರಿ ಸಾಧಿಸಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಪರಿಸ್ಥಿತಿಯಲ್ಲೂ ಆತ್ಮವಿಶ್ವಾಸ ಕಳೆದು ಕೊಳ್ಳದೇ ಒಂದು ಅವಕಾಶ ತಪ್ಪಿದರೆ ಇನ್ನೊಂದು ಅವಕಾಶದ ಬಾಗಿಲು ತೆರೆಯುತ್ತದೆ ಎಂಬುದನ್ನು ಮನಗಾಣಬೇಕು ಎಂದು ತಿಳಿಸಿದರು.ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಅಂಕಗಳಿಕೆ ಮುಖ್ಯವಲ್ಲ. ಯಾವುದೇ ಕಪ್ಪುಚುಕ್ಕೆ ಇಲ್ಲದೇ ಬದುಕುವುದು ಮುಖ್ಯ ಎಂದು ತಿಳಿಸಿದರು.ಸರ್ಕಾರಿ ನೌಕರರು, ಅಧಿಕಾರಿಗಳು ರೈತ ಪರ ಮತ್ತು ಬಡವರ ಪರವಾಗಿರಬೇಕು. ರೈತರು ಸಹಾಯ ಕೇಳಿ ಬಂದಾಗ ಅವರನ್ನು ಕೂರಿಸಿ ಮಾತನಾಡಿಸಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ತಾವು ಸಂಘದ ಅಧ್ಯಕ್ಷರಾದ ನಂತರ ಕಳೆದ 5 ವರ್ಷಗಳಿಂದ ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು ಕಳೆದ 5 ವರ್ಷಗಳಲ್ಲಿ 50 ಸಾವಿರ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗಿದೆ. ಪ್ರತಿ ವರ್ಷ ರಾಜ್ಯಾದ್ಯಂತ 10 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ತಿಳಿಸಿದರು.ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಮುಂದುವರಿಸುವ ಕುರಿತು ಸರ್ಕಾರದೊಂದಿಗೆ ಅನೇಕ ಬಾರಿ ಚರ್ಚಿಸಲಾಗಿದೆ. ಹಳೆ ಪಿಂಚಣಿ ಯೋಜನೆ ಆದಷ್ಟು ಶೀಘ್ರ ಜಾರಿಗೆ ಬರಲಿದೆ ಎಂದು ತಿಳಿಸಿದರು.ರಾಜ್ಯ ಸರ್ಕಾರಿ ನೌಕರರಿಗೆ ಉಚಿತ ಚಿಕಿತ್ಸೆ ಒದಗಿಸುವ ಆರೋಗ್ಯ ಸಂಜೀವಿನಿ ಯೋಜನೆ ಸದ್ಯದಲ್ಲೇ ಮುಖ್ಯ ಮಂತ್ರಿಗಳಿಂದ ಲೋಕಾರ್ಪಣೆಯಾಗಲಿದೆ. ರಾಜ್ಯದ 5 ಲಕ್ಷ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ವರ್ಗ ಸೇರಿ 25 ಲಕ್ಷ ಜನ ಯೋಜನೆ ಲಾಭ ಪಡೆಯಲಿದ್ದಾರೆ ಎಂದರು.ನಗರದಲ್ಲಿ ನಿರ್ಮಿಸಿರುವ ಸರ್ಕಾರಿ ನೌಕರರ ಭವನದ ಅಭಿವೃದ್ಧಿಗೆ ಅನುದಾನ ನೀಡುವಂತೆ ಶಾಸಕ ಎಚ್.ಡಿ. ತಮ್ಮಯ್ಯ ಹಾಗೂ ವಿಪ ಸದಸ್ಯ ಸಿ.ಟಿ. ರವಿ ಅವರಿಗೆ ಮನವಿ ಮಾಡಿದರು.ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಮಾತನಾಡಿ, ನಗರದಲ್ಲಿ ಸರ್ಕಾರಿ ನೌಕರರ ಭವನದ ನಿರ್ಮಾಣಕ್ಕೆ ಒಂದು ಕೋಟಿ ಅನುದಾನ ಒದಗಿಸಿದ ರಾಜ್ಯಾಧ್ಯಕ್ಷ ಷಡಾಕ್ಷರಿಗೆ ಕೃತಜ್ಞತೆ ಸಲ್ಲಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಗಿರಿಗೌಡ ಮಾತನಾಡಿದರು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ 579 ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಮಾಡಲಾಯಿತು.ಸರ್ಕಾರಿ ನೌಕರರ ಸಂಘದ ಹಾಸನ ಜಿಲ್ಲೆ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ರಾಜ್ಯ ಖಜಾಂಚಿ ವಿ.ವಿ. ಶಿವರುದ್ರಯ್ಯ, ಗೌರವಾಧ್ಯಕ್ಷ ಎಸ್.ಬಸವರಾಜು, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಿ.ಬಳ್ಳಾರಿ, ಹಿರಿಯ ಉಪಾಧ್ಯಕ್ಷ ಸುರೇಶ ಸಿ.ಶಡಶ್ಯಾಳ, ಆರ್. ಮೋಹನ್‌ಕುಮಾರ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನ ಉಪಸ್ಥಿತರಿದ್ದರು.ಹಾಸನ ಚಿಕ್ಕಮಗಳೂರು ಜಿಲ್ಲೆಗಳ ಎಲ್ಲಾ ತಾಲೂಕುಗಳ ಸಂಘದ ಪದಾಧಿಕಾರಿಗಳು ಹಾಜರಿದ್ದರು. 3 ಕೆಸಿಕೆಎಂ 1ಚಿಕ್ಕಮಗಳೂರಿನಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರದ ಸಾನಿಧ್ಯ ವಹಿಸಿದ್ದ ಬಸವತತ್ವ ಪೀಠದ ಶ್ರೀ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕ ಎಚ್.ಡಿ. ತಮ್ಮಯ್ಯ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾಧ್ಯಕ್ಷ ದೇವೇಂದ್ರ ಹಾಗೂ ಪದಾಧಿಕಾರಿಗಳು ಇದ್ದರು.