ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮತ್ತೊಬ್ಬರ ಜೀವ ಉಳಿಸಬಹುದಾಗಿರುವ ರಕ್ತದಾನದಬಗ್ಗೆ ಯುವಜನರು ಆಸಕ್ತಿ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಕಿವಿಮಾತು ಹೇಳಿದರು.ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ ಯುವಜನತೆ ದುಶ್ಚಟಗಳಿಗೆ ಒಳ ಗಾಗದೆ ಆರೋಗ್ಯ ಕಾಪಾಡಿದಲ್ಲಿ ಪುರುಷರು ಪ್ರತೀ ೩ ತಿಂಗಳಿಗೊಮ್ಮೆ, ಮಹಿಳೆಯರು ಪ್ರತೀ ೪ ತಿಂಗಳಿ ಗೊಮ್ಮೆ ರಕ್ತದಾನ ಮಾಡಬಹುದು. ತಮ್ಮ ಇಲಾಖೆಯಿಂದ ಜಿಲ್ಲಾ ನ್ಯಾಯಾಲಯದಲ್ಲಿ ಸಹ ರಕ್ತದಾನ ಶಿಬಿರ ಹಮ್ಮಿಕೊಳ್ಳಲಿದ್ದು ಮುಂದೆ ನಿರಂತರ ರಕ್ತದಾನ ಮಾಡಲು ದಾನಿಗಳನ್ನು ಪ್ರೇರೇಪಿಸ ಲಾಗುವುದು ಎಂದರು.ಜಿಲ್ಲಾ ಆಸ್ಪತ್ರೆ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ.ಮೊಹಮ್ಮದ್ ಅಪ್ರೋಜ್ ಅಹಮ್ಮದ್ ಮಾತನಾಡಿ, ಒಬ್ಬರು ದಾನ ಮಾಡಿದ ರಕ್ತದಿಂದ ಅವಶ್ಯಕತೆ ಇರುವ 3 ರೋಗಿಗಳಿಗೆ ಪ್ರಯೋಜನವಿದೆ. ರಕ್ತ ನೀಡುವ ಮೊದಲು ಪರೀಕ್ಷೆ ನಡೆಸಿದ ಬಳಿಕ ರಕ್ತ ಸಂಗ್ರಹಿಸಲಾಗುತ್ತದೆ. ಇಂದು ರಕ್ತದ ಅವಶ್ಯಕತೆ ತುಂಬಾ ಇದ್ದು 18 ವರ್ಷ ತುಂಬಿದ ಪ್ರತಿಯೊಬ್ಬರೂ ರಕ್ತದಾನ ಮಾಡುವಂತೆ ಮತ್ತು ಪ್ರತಿಯೊಬ್ಬರೂ ತಮ್ಮ ಹಾಗೂ ತಮ್ಮ ಮನೆಯವರ ರಕ್ತದ ಗುಂಪು ಬಗ್ಗೆ ತಿಳಿದು ರಕ್ತದಾನ ಮಾಡಿ, ರಕ್ತದಾನಕ್ಕೆ ಪ್ರೇರೇಪಿಸುವಂತೆ ಕೋರಿದರು.ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬೇಬಿ ಪ್ರಮಾಣ ವಚನ ಬೋಧಿಸಿ ದರು. ಇದೇ ವೇಳೆ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳು ಹಾಗೂ ಸಂಘ ಸಂಸ್ಥೆಗಳಿಗೆ ಇಲಾಖೆಯಿಂದ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರವನ್ನು ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಆರ್.ಪ್ರಭುಕುಮಾರ್ ವಿತರಿಸಿದರು.ಅಧ್ಯಕ್ಷತೆ ವಹಿಸಿದ್ದ ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ತಸ್ನೀಮ್ ಕೌಸರ್ ಮಣಿಯಾರ್ ಮಾತನಾಡಿ, ಇಂದಿನ ಯುವಕರು ರಕ್ತದಾನ ಮಾಡುವಂತೆ ಪ್ರೇರೇಪಿಸಿದರು. ಪ್ರತಿಯೊಬ್ಬರೂ ರಕ್ತದಾನ ಮಾಡಿ ತಮ್ಮ ಸ್ನೇಹಿತರನ್ನು ರಕ್ತದಾನಕ್ಕೆ ಉತ್ತೇಜಿಸುವಂತೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಹರೀಶ್ ಬಾಬು, ಕುಟುಂಬ ಕಲ್ಯಾಣಾಧಿಕಾರಿ ಡಾ.ಶಶಿಕಲಾ, ತಾಲೂಕು ಆರೋಗ್ಯಾಧಿಕಾರಿ ಡಾ.ಸೀಮಾ, ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು. ಪಿಪಿಎಮ್ ಸಂಯೋಜಕ ಕಿರಣ್‌ಕುಮಾರ್ ವಂದಿಸಿದರು.