ಕಲಘಟಗಿ: ಗ್ರಾಮೀಣ ಭಾಗದಲ್ಲಿ ಮೂಲ ಜನಪದ ಕಲಾವಿದರು ಇಂದಿನ ಯುವ ಜನತೆಗೆ ತಮ್ಮ ವಿದ್ಯೆಯನ್ನು ಕಲಿಸುವಂತಾಗಲಿ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಹೇಳಿದರು.
ತಾಲೂಕಿನ ದಾಸ್ತಿಕೊಪ್ಪ ಸರ್ಕಾರಿ ಪ್ರಥಮ ದರ್ಜೆ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್ತಿನ ತಾಲೂಕು ಘಟಕ ಉದ್ಘಾಟನೆ ಮತ್ತು ಪದಗ್ರಹಣ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಜನಪ್ರತಿನಿಧಿಗಳು ಸರ್ಕಾರದ ಹೆಚ್ಚಿನ ಅನುದಾನವನ್ನು ಜನಪದ ಉಳಿವಿಗೆ ಮೀಸಲಿಡಲು ಆಗ್ರಹಿಸಿದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದ ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ ಮಾತನಾಡಿ, ಯುವಜನತೆ ತಂದೆ- ತಾಯಿಗೆ ಒಳ್ಳೆಯ ಮಗನಾಗಿ ಗ್ರಾಮೀಣ ಸೊಗಡನ್ನು ನವೀನ ತಂತ್ರಜ್ಞಾನದ ಜತೆಗೆ ಮುನ್ನಡೆಸಿ. ಸಮುದಾಯ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಹಿರಿದಾಗಿದೆ. ನಮ್ಮ ಧರ್ಮ, ಸಂಸ್ಕೃತಿ ಪರಂಪರೆ ಉಳಿಸಲು ಚಿಂತನೆ ನಡೆಸಿರಿ ಎಂದರು.ಅಧ್ಯಕ್ಷತೆ ವಹಿಸಿದ್ದ ಕಜಾಪ ಜಿಲ್ಲಾಧ್ಯಕ್ಷ ಈರಪ್ಪ ಎಮ್ಮಿ ಮಾತನಾಡಿ, ಜಿಲ್ಲೆಯ ತುಂಬೆಲ್ಲ ಕಜಾಪ ಘಟಕಗಳನ್ನು ಮುನ್ನೆಲೆಗೆ ತರುವುದರ ಜತೆಗೆ ಜಾನಪದ ಕಾರ್ಯಗಾರ ಹಮ್ಮಿಕೊಳ್ಳಲಾಗುವುದು. ಯುವಕರು ಜಾನಪದ ತಿಳಿದುಕೊಂಡು ಮುಂದಿನ ತಲೆಮಾರಿಗೆ ಪರಿಚಯಿಸಿರಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತ, ಲಲಿತಕಲೆ ಉಳಿಸಿ ಬೆಳೆಸಲು ತಾವು ಕಾರ್ಯ ನಿರ್ವಹಿಸುತ್ತಿದ್ದು, ಜನತೆಯ ಸಹಕಾರ ಮುಂದುವರೆಯಲಿ. ಜನಪದ ನಮ್ಮ ಜೀವನದಲ್ಲಿ ಅವಿಭಾಜ್ಯವಾಗಿದೆ ಎಂದರು.ಜಾನಪದ ಗಾರುಡಿಗ ಎಂ.ಆರ್. ತೋಟಗಂಟಿ, ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಶಿವಣ್ಣ ಅದರಗುಂಚಿ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸೋಮಲಿಂಗ ಒಡೆಯರ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಚ್.ಎನ್. ಸುನಗದ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಅಶೋಕ ಅರ್ಕಸಾಲಿ ಅವರು ರಂಗಭೂಮಿ ಸಂಭಾಷಣೆ, ಲಾವಣಿಪದ, ಹಂತಿಪದ, ರಂಗ ಗೀತೆಗಳನ್ನು ಹಾಡಿ ಸೇರಿದ ಜನರಿಗೆ ಜಾನಪದ ಅರಿವು ಮೂಡಿಸಿದರು.
ಕಜಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಸಿಬ್ಬಂದಿಗಳಿಗೆ, ಸಂಗೀತ, ಸಾಹಿತ್ಯ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ ಗಣ್ಯ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.ಜಾನಪದ ನಾಡಗೀತೆಯನ್ನು ಶಾಸ್ತ್ರೀಯ ಸಂಗೀತದ ಶಿಕ್ಷಕಿ ಪದ್ಮಾಕ್ಷಿ ಒಡೆಯರ ನಡೆಸಿಕೊಟ್ಟರು. ಬೆಳಗ್ಗೆ ಕಾಲೇಜಿನ ಆವರಣದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸಿದರು. ದೇವರಕೊಂಡ ಬಾಲಯೋಗಿ ಮಾಣಿಕ್ಯ ಚನ್ನ ವೃಷಬೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು,
ಈ ವೇಳೆ ಕೆಎಂಎಫ್ ನಿರ್ದೇಶಕಿ ಗೀತಾ ಮರಲಿಂಗನ್ನವರ, ಮುಖಂಡರಾದ ಕಿರಣ ಪಾಟೀಲ ಕುಲಕರ್ಣಿ, ಎಸ್.ಎಸ್. ಪಾಟೀಲ, ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಲೂತಿಮಠ, ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಇಮಾಮಸಾಬ ವಲೇಪ್ಪನವರ, ಕಸಾಪ ತಾಲೂಕು ಅಧ್ಯಕ್ಷ ರಮೇಶ ಸೋಲಾರಗೋಪ್ಪ, ಪ್ರಾಂಶುಪಾಲ ಎಫ್.ಎನ್. ಜಾಲಿಹಾಳ, ವಕೀಲರ ಸಂಘದ ಅಣ್ಣಪ್ಪ ಓಲೆಕಾರ, ಕಜಾಪ ತಾಲೂಕು ಅಧ್ಯಕ್ಷ ನಿಂಗಪ್ಪ ದೊಡ್ಡಪೂಜಾರ, ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗಪ್ಪ ರಂಗಾಪುರ ಸೇರಿದಂತೆ ಹಲವರಿದ್ದರು.