ಕ್ರೀಡಾ ಕಾರ್ಯಕ್ರಮದಿಂದ ಯುವ ಪ್ರತಿಭೆ ಅನಾವರಣ: ಸಂಸದ ರಾಜಶೇಖರ ಹಿಟ್ನಾಳ

KannadaprabhaNewsNetwork | Published : Jan 15, 2025 12:48 AM

ಸಾರಾಂಶ

ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಯುವ ಪ್ರತಿಭೆಗಳನ್ನು ಗುರುತಿಸಲು ಮ್ಯಾರಥಾನ್ ಸೇರಿದಂತೆ ಹಲವಾರು ಕ್ರೀಡಾ ಕಾರ್ಯಕ್ರಮಗಳನ್ನು ನಗರದಲ್ಲಿ ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.

ಮ್ಯಾರಥಾನ್‌ಗೆ ಚಾಲನೆಕನ್ನಡಪ್ರಭ ವಾರ್ತೆ ಕೊಪ್ಪಳ

ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಯುವ ಪ್ರತಿಭೆಗಳನ್ನು ಗುರುತಿಸಲು ಮ್ಯಾರಥಾನ್ ಸೇರಿದಂತೆ ಹಲವಾರು ಕ್ರೀಡಾ ಕಾರ್ಯಕ್ರಮಗಳನ್ನು ನಗರದಲ್ಲಿ ವಿವಿಧ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಕೆ. ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.

ನಗರದಲ್ಲಿ ಮಂಗಳವಾರ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳ ಸಹಯೊಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮ್ಯಾರಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಕ್ರೀಡೆಗಳ ಆಯೋಜನೆಗೆ ಜಿಲ್ಲೆಯ ಜನಪ್ರತಿನಿಧಿಗಳು, ವಾಣಿಜ್ಯೋದ್ಯಮಿಗಳು ಹಾಗೂ ವಿವಿಧ ಸಂಘ- ಸಂಸ್ಥೆಯವರು ಸಹಕಾರ ನೀಡಿದ್ದಾರೆ. 15 ದಿನಗಳವರೆಗೆ ವಿವಿಧ ಕ್ರೀಡಾ ಕಾರ್ಯಕ್ರಮಗಳು ನಡೆಯಲಿವೆ. ಎಲ್ಲರೂ ಸೇರಿ ಶ್ರೀ ಗವಿಸಿದ್ಧೇಶ್ವರ ಜಾತ್ರೆಗೆ ಮೆರಗು ತರೋಣ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಕಳೆದ ಹತ್ತು ವರ್ಷಗಳಿಂದ ಮ್ಯಾರಥಾನ್ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಬರಲಾಗುತ್ತಿದೆ. ಇದರಿಂದ ಎಲ್ಲಾ ಕ್ರೀಡಾ ಪಟುಗಳನ್ನು ಒಟ್ಟಿಗೆ ಸೇರಿಸಲು ಅನುಕೂಲವಾಗಲಿದೆ. ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸುವುದರಿಂದ ಅವರ ಉತ್ಸಾಹ ಇಮ್ಮಡಿ ಆಗಲಿದೆ ಎಂದು ಹೇಳಿದರು.

ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ ಮಾತನಾಡಿ, ಮೈಸೂರು ದಸರಾದಂತೆ ನಮ್ಮಲ್ಲಿಯೂ ಬರುವ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕ್ರೀಡಾ ಕಾರ್ಯಕ್ರಮಗಳು ನಡೆಯಬೇಕು. ಕ್ರೀಡೆಯಿಂದ ಯುವಕರು ಮಾನಸಿಕ ಮತ್ತು ದೈಹಿಕವಾಗಿ ಸಬಲರಾಗುತ್ತಾರೆ. ಇಂದಿನ ಒತ್ತಡ ಜೀವನ ಬದುಕಿನಲ್ಲಿ ಕ್ರೀಡೆ ತುಂಬಾ ಅತ್ಯವಶ್ಯಕವಾಗಿದೆ ಎಂದರು.

ಎಸ್ಪಿ ರಾಮ್ ಎಲ್. ಅರಸಿದ್ದಿ ಮಾತನಾಡಿದರು.

ಮ್ಯಾರಥಾನ್ ಹಳೆ ಆರ್‌ಟಿಒ ಕಚೇರಿ ಹತ್ತಿರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಆರಂಭವಾಗಿ ಗಂಜ ಸರ್ಕಲ್, ಅಶೋಕ ವೃತ್ತ, ಗಡಿಯಾರ ಕಂಬದ ಮಾರ್ಗವಾಗಿ ಗವಿಮಠದವರೆಗೆ ನಡೆಯಿತು. ಇದರಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಸೇರಿದಂತೆ ಒಟ್ಟು 8 ಸ್ಥಾನ ಪಡೆದ ಅಭ್ಯರ್ಥಿಗಳಿಗೆ ಗವಿಮಠದಲ್ಲಿ ಪ್ರಶಸ್ತಿ ಫಲಕದ ಜೊತೆಗೆ ನಗದು ಬಹುಮಾನ ವಿತರಿಸಲಾಯಿತು.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಶ್ರೀನಿವಾಸ ಗುಪ್ತಾ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಕ್ರೀಡಾ ಇಲಾಖೆಯ ಅಧಿಕಾರಿ ವಿಠ್ಠಲ ಚಾಬಗೌಡರ, ಕೃಷ್ಣ ಇಟಂಗಿ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರರಿದ್ದರು.

Share this article