ಸ್ನೇಹಿತರಿಂದಲೇ ಯುವತಿ ಹತ್ಯೆ, ಆರೋಪಿಗಳ ಬಂಧನ

KannadaprabhaNewsNetwork |  
Published : Mar 15, 2025, 01:04 AM IST
14ಎಚ್‌ವಿಆರ್‌1 | Kannada Prabha

ಸಾರಾಂಶ

ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ರಮೇಶ್ ಬ್ಯಾಡಗಿ (22) ಕೊಲೆಯಾದ ಯುವತಿ.

ಹಾವೇರಿ: ತುಂಗಭದ್ರಾ ನದಿಯಲ್ಲಿ ಅಪರಿಚಿತ ಯುವತಿ ಶವ ಸಿಕ್ಕ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ದೊರೆತಿದ್ದು, ಸ್ನೇಹಿತರಿಂದಲೇ ಯುವತಿ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ರಾಣಿಬೆನ್ನೂರಿನಲ್ಲಿ ನರ್ಸ್‌ ಆಗಿದ್ದ ಯುವತಿಯನ್ನು ಮೂವರು ಸೇರಿ ಕೊಲೆ ಮಾಡಿ ತುಂಗಭದ್ರಾ ನದಿಯಲ್ಲಿ ಶವ ಎಸೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ರಮೇಶ್ ಬ್ಯಾಡಗಿ (22) ಕೊಲೆಯಾದ ಯುವತಿ. ಮಾ. 6ರಂದು ಯುವತಿಯ ಮೃತದೇಹ ರಾಣಿಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಕೆರೂರು ತಾಲೂಕು ಹಳೇವೀರಾಪುರ ಗ್ರಾಮದ ನಯಾಜ್‌ ತಂದೆ ಇಮಾಮ್‌ಸಾಬ್‌ ಬೆಣ್ಣಿಗೇರಿ (28) ಬಂಧಿತ ಆರೋಪಿ. ಈತನ ಸ್ನೇಹಿತರಾದ ರಟ್ಟಿಹಳ್ಳಿ ತಾಲೂಕಿನ ಮಾಸೂರಿನ ದುರ್ಗಾಚಾರಿ ಬಡಿಗೇರ ಹಾಗೂ ವಿನಾಯಕ ನಾಗಪ್ಪ ಪೂಜಾರಿ ಎಂಬವರನ್ನು ಚಿತ್ರದುರ್ಗದ ಬಳಿ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಮಾ. 6ರಂದು ಫತ್ತೇಪುರ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ಅಪರಿಚಿತ ಶವ ಸಿಕ್ಕಿರುವ ಬಗ್ಗೆ ಬಂದ ದೂರಿನ ಆಧಾರದಲ್ಲಿ ಹಲಗೇರಿ ಪೊಲೀಸರು ಯುಡಿಆರ್‌ (ಅಸಹಜ ಸಾವು) ಕೇಸ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ನಂತರ ಮೃತದೇಹವನ್ನು ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರು ಇಲ್ಲದ ಕಾರಣ ಶವವನ್ನು ಹೂಳಲಾಗಿತ್ತು. ದೇಹದ ಮೇಲೆ ಬಲವಾಗಿ ಹೊಡೆದು ಗಾಯ ಆಗಿರುವ ಅಂಶ ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಹಲಗೇರಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು.

ಅತ್ತ ಮಾ. 3ರಂದೇ ಸ್ವಾತಿ ಕಾಣೆಯಾಗಿರುವ ಕುರಿತು ಸ್ವಾತಿ ಪೋಷಕರು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೃತಳ ವಾರಸುದಾರರು ಮತ್ತು ಆರೋಪಿತರ ಪತ್ತೆ ಕಾರ್ಯ ಆರಂಭಿಸಿದ ಪೊಲೀಸರಿಗೆ ಮಿಸ್ಸಿಂಗ್‌ ಕಂಪ್ಲೇಂಟ್‌ನಲ್ಲಿ ಯುವತಿ ಚಹರೆ ಬಗ್ಗೆ ಸಿಕ್ಕ ಮಾಹಿತಿ ತಾಳೆಯಾದ್ದರಿದ ನದಿಯಲ್ಲಿ ಸಿಕ್ಕ ಶವ ಸ್ವಾತಿ ರಮೇಶ ಬ್ಯಾಡಗಿ ಎಂಬುದು ಖಚಿತವಾಯಿತು. ಆಗ ಆರೋಪಿತರ ಪತ್ತೆ ಕಾರ್ಯ ಇನ್ನಷ್ಟು ಚುರುಕುಗೊಳಿಸಿದ ಪೊಲೀಸರಿಗೆ ಸ್ವಾತಿ ಕೊಲೆಗಾರರು ಯಾರು ಎಂಬುದು ಖಚಿತವಾಯಿತು.ಸ್ನೇಹಿತನೇ ಕೊಲೆಗಾರ: ರಾಣಿಬೆನ್ನೂರಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಸ್ವಾತಿ ಹಾಗೂ ಪ್ರಮುಖ ಆರೋಪಿ ನಯಾಜ್‌ ಇಬ್ಬರೂ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು.

ಮಾ. 3ರಂದು ಸ್ವಾತಿಯನ್ನು ರಟ್ಟೀಹಳ್ಳಿಯಿಂದ ಒಂದು ಬಾಡಿಗೆ ಕಾರಿನಲ್ಲಿ ರಾಣಿಬೆನ್ನೂರಿನ ಪಾರ್ಕ್‌ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಪರಸ್ಪರರಿಗೆ ಕೆಲವು ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಬಂದಿದೆ. ನಂತರ ನಯಾಜ್‌ ತನ್ನ ಸ್ನೇಹಿತರಾದ ದುರ್ಗಾಚಾರಿ ಮತ್ತು ವಿನಾಯಕನನ್ನು ತಾನಿದ್ದಲ್ಲಿಗೆ ಕರೆಸಿಕೊಂಡಿದ್ದಾನೆ. ಸಂಜೆ 4 ಗಂಟೆ ಸುಮಾರಿಗೆ ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಸಮೀಪವಿರುವ ಪಾಳು ಬಿದ್ದಿರುವ ತರಳಬಾಳು ಶಾಲೆಯಲ್ಲಿ ಸ್ವಾತಿಗೆ ಹೊಡೆದು ಟವೆಲ್‌ನಿಂದ ಕುತ್ತಿಗೆಗೆ ಹಾಕಿ ಜಗ್ಗಿ ಕೊಲೆ ಮಾಡಿದ್ದಾರೆ. ನಂತರ ಮೂವರೂ ಸೇರಿ ರಾತ್ರಿ 11 ಗಂಟೆ ವೇಳೆಗೆ ವಿನಾಯಕನ ಬಲೆನೋ ಕಾರಿನ ಡಿಕ್ಕಿಯಲ್ಲಿ ಸ್ವಾತಿಯ ಶವವನ್ನು ಹಾಕಿಕೊಂಡು ಕೂಸಗಟ್ಟಿ ನಂದಿಗುಡಿ ಗ್ರಾಮದ ಮಧ್ಯೆ ಇರುವ ತುಂಗಭದ್ರಾ ನದಿಯ ಸೇತುವೆಯ ಮೇಲಿಂದ ಶವವನ್ನು ಎಸೆದಿದ್ದಾರೆ. ಹತ್ತು ದಿನಗಳ ಬಳಿಕ ಕೊಲೆ ವಿಚಾರ ಬೆಳಕಿಗೆ ಬಂದಂತಾಗಿದೆ.

ಭಿನ್ನಾಭಿಪ್ರಾಯ: ತುಂಗಭದ್ರಾ ನದಿ ತೀರದಲ್ಲಿ ಮಾ. 6ರಂದು ಅಪರಿಚಿತ ಶವ ಸಿಕ್ಕಿತ್ತು. ಮಾ. 11ರಂದು ಅದು ಸ್ವಾತಿ ರಮೇಶ್ ಬ್ಯಾಡಗಿ ಎಂಬುದು ಗೊತ್ತಾಯಿತು. ಮೂವರು ಆರೋಪಿಗಳು ಕೊಲೆ ಹಿಂದೆ ಇದ್ದಾರೆ ಎಂಬುದು ಗೊತ್ತಾಯಿತು. ಆರೋಪಿ ನಯಾಜ್‌ ಎಂಬಾತನನ್ನು ಬಂಧಿಸಲಾಗಿದೆ. ಮೂವರೂ ಆರೋಪಿಗಳ ಪರಿಚಯ ಸ್ವಾತಿಗೆ ಇತ್ತು. ಕೊಲೆಗೂ ಮುನ್ನ ರಾಣಿಬೆನ್ನೂರು ಬಳಿ ಸ್ವಾತಿ ಮತ್ತು ನಯಾಜ್‌ ಮಾತಾಡಿದ್ದಾರೆ. ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯ ಆಗಿತ್ತು. ಬಳಿಕ ಸ್ವಾತಿ ಕೊಲೆ ಮಾಡಿ ತುಂಗಭದ್ರಾ ನದಿಯಲ್ಲಿ ಬಿಸಾಡಿದ್ದಾರೆ. ಇನ್ನಿಬ್ಬರು ಆರೋಪಿಗಳನ್ನೂ ಚಿತ್ರದುರ್ಗದ ಬಳಿ ಬಂಧಿಸಲಾಗಿದೆ ಎಂದು ಎಸ್ಪಿ ಅಂಶುಕುಮಾರ್‌ ತಿಳಿಸಿದ್ದಾರೆ.

ಸ್ವಾತಿ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ

ನರ್ಸ್‌ ಸ್ವಾತಿ ಹತ್ಯೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಒತ್ತಾಯ ಹೆಚ್ಚುತ್ತಿದೆ.

ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ನಿವಾಸದ ಮುಂದೆ ಸ್ಥಳಿಯರು ಪ್ರತಿಭಟನೆ ನಡೆಸಿ ಸ್ವಾತಿ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಹಿಂದೂ ಯುವತಿ ಹತ್ಯೆ ಖಂಡಿಸಿ ಜಸ್ಟೀಸ್ ಫಾರ್ ಸ್ವಾತಿ ಎಂದು ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲಗೇರಿ ಪೊಲೀಸರು ತರಾತುರಿಯಲ್ಲಿ ಯಾಕೆ ಶವಸಂಸ್ಕಾರ ನಡೆಸಿದರು ಎಂದು ಪ್ರಶ್ನಿಸುತ್ತಿದ್ದಾರೆ.

ಸ್ವಾತಿ ಹಂತಕರನ್ನು ಪತ್ತೆ ಹಚ್ಚಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕೆಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಸ್ವಾತಿ ತಾಯಿ ಕೂಡ ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ