ಯುವ ಜನರು ಏಡ್ಸ್‌ ಬಗ್ಗೆ ಜಾಗೃತರಾಗಿರಬೇಕು

KannadaprabhaNewsNetwork | Published : Dec 17, 2023 1:45 AM

ಸಾರಾಂಶ

ಏಡ್ಸ್ ರೋಗವು ಎಚ್.ಐ.ವಿ ವೈರಸ್‌ನಿಂದ ಹರಡುವ ರೋಗವಾಗಿದ್ದು, ಇದು ದೇಹದ ರಕ್ಷಣಾ ವ್ಯವಸ್ಥೆಯನ್ನು ಕುಂದಿಸುತ್ತದೆ ಹಾಗೂ ದೇಹದಲ್ಲಿ ರೋಗ ನಿರೋದಕ ಶಕ್ತಿ ಕಡಿಮೆ ಮಾಡುತ್ತದೆ. ಈ ರೋಗವು ಮುಖ್ಯವಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ, ಸಂಸ್ಕರಿಸದ ಸೂಜಿ ಮತ್ತು ಸಿರೆಂಜ್‌ಗಳನ್ನು ಬಳಸುವುದರಿಂದ, ಸೋಂಕಿತ ವ್ಯಕ್ತಿಯಿಂದ ರಕ್ತದಾನ ಮತ್ತು ರಕ್ತದ ಪದಾರ್ಥಗಳನ್ನು ಪಡೆಯುವುದರಿಂದ ಹಾಗೂ ತಾಯಿಯಿಂದ ಮಗುವಿಗೆ, ಹೀಗೆ ಪ್ರಮುಖವಾಗಿ ೪ ಕಾರಣಗಳಿಂದ ಹರಡುತ್ತದೆ.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಐಸಿಟಿಸಿ ವಿಭಾಗ ಆಲೂರು, ತಾಲೂಕು ಕಾನೂನು ಸೇವಾ ಸಮಿತಿ ಆಲೂರು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಆಲೂರು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ನಿರ್ಮಲ ಎಮ್ ಸಿ ಆಲೂರು ಇವರು ನೆರವೇರಿಸಿದರು. ಅವರು ಮಾತನಾಡುತ್ತಾ, ಇಂದಿನ ಯುವಜನತೆ ಏಡ್ಸ್ ರೋಗದ ಬಗ್ಗೆ ಜಾಗೃತರಾಗಿರಬೇಕು ಹಾಗೂ ಯುವಜನರಲ್ಲಿ ಕಾನೂನು ಅರಿವು ಮತ್ತು ಆರೋಗ್ಯದ ಅರಿವಿರುವುದು ಅತೀ ಮುಖ್ಯವಾಗಿದೆ ಎಂದು ತಿಳಿಸಿದರು. ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಒಮ್ಮೆ ಜೀವನದ ಗುರಿಯನ್ನು ನೆನಪಿಟ್ಟುಕೊಂಡು ಅದರ ಸಾಧನೆಯತ್ತ ಹೆಜ್ಜೆ ಇಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅದೇ ರೀತಿ ಇಂದಿನ ವಿದಾರ್ಥಿಗಳು ಎಲ್ಲಾ ರಂಗಗಳಲ್ಲಿಯೂ ಕಾರ್ಯಪ್ರವೃತ್ತರಾಗಲು ಉತ್ತಮ ವಿದ್ಯಾಭ್ಯಾಸದತ್ತ ಗಮನಹರಿಸುವಂತೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಬಸವರಾಜ್ ಸಾಗರ್ ಎಚ್.ಎಲ್. ನವರು ಮಾತನಾಡುತ್ತಾ ಏಡ್ಸ್ ರೋಗವು ಎಚ್.ಐ.ವಿ ವೈರಸ್‌ನಿಂದ ಹರಡುವ ರೋಗವಾಗಿದ್ದು, ಇದು ದೇಹದ ರಕ್ಷಣಾ ವ್ಯವಸ್ಥೆಯನ್ನು ಕುಂದಿಸುತ್ತದೆ ಹಾಗೂ ದೇಹದಲ್ಲಿ ರೋಗ ನಿರೋದಕ ಶಕ್ತಿ ಕಡಿಮೆ ಮಾಡುತ್ತದೆ. ಈ ರೋಗವು ಮುಖ್ಯವಾಗಿ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ, ಸಂಸ್ಕರಿಸದ ಸೂಜಿ ಮತ್ತು ಸಿರೆಂಜ್‌ಗಳನ್ನು ಬಳಸುವುದರಿಂದ, ಸೋಂಕಿತ ವ್ಯಕ್ತಿಯಿಂದ ರಕ್ತದಾನ ಮತ್ತು ರಕ್ತದ ಪದಾರ್ಥಗಳನ್ನು ಪಡೆಯುವುದರಿಂದ ಹಾಗೂ ತಾಯಿಯಿಂದ ಮಗುವಿಗೆ, ಹೀಗೆ ಪ್ರಮುಖವಾಗಿ ೪ ಕಾರಣಗಳಿಂದ ಹರಡುತ್ತದೆ.

ಎಚ್.ಐ.ವಿ.ಸೊಂಕು ಹರಡಿದ ನಂತರ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ನಂತರ ಯಾವುದೇ ಅವಕಾಶವಾದಿ ಸೋಂಕುಗಳು ದೇಹವನ್ನು ಸುಲಭವಾಗಿ ಪ್ರವೇಶಿಸುತ್ತವೆ. ಎಚ್.ಐ.ವಿ.ಯನ್ನು ರಕ್ತ ಪರೀಕ್ಷೆಯಿಂದ ಮಾತ್ರ ಪತ್ತೆ ಮಾಡಬಹುದೆಂದು ತಿಳಿಸಿದರು. ಎಚ್.ಐ.ವಿ ಸೋಂಕಿನಲ್ಲಿ ನಮ್ಮ ರಾಜ್ಯವು ದೇಶದಲ್ಲಿ ೯ನೇ ಸ್ಥಾನದಲ್ಲಿದೆ ಹಾಗೂ ಜಿಲ್ಲೆಯಲ್ಲಿ ಇದುವರೆಗೂ ೧೨೦೪೪ ಜನ ಸೋಂಕಿತರಿದ್ದು, ನಮ್ಮ ಆಲೂರು ತಾಲೂಕು ಜಿಲ್ಲೆಯಲ್ಲಿ ೮ನೇ ಸ್ಥಾನದಲ್ಲಿದ್ದು, ಚನ್ನರಾಯಪಟ್ಟಣ ಮೊದಲ ಸ್ಥಾನ ಹಾಗೂ ಎರಡನೇ ಸ್ಥಾನದಲ್ಲಿ ಹಾಸನ ತಾಲೂಕು ಇದೆ ಎಂದು ತಿಳಿಸಿದರು.

ಎಚ್‌.ಐ.ವಿ ಸೋಂಕನಿಂದ ದೂರವಿರಲು ಯುವಜನತೆ ಮದುವೆಗೆ ಮುಂಚೆ ಬ್ರಹ್ಮಚರ್ಯವನ್ನು ಪಾಲಿಸಬೇಕು ಹಾಗೂ ಮದುವೆಯಾದ ನಂತರ ಏಕಪತಿ, ಏಕ ಪತ್ನಿ ವ್ರತಸ್ಥರಾಗಿರಬೇಕು ಎಂದು ತಿಳಿಸಿದರು. ಎಚ್.ಐ.ವಿ. ಪಾಸಿಟಿವ್ ಕಂಡುಬಂದರೆ ಅತಂಕ ಪಡದೆ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಎ.ಆರ್‌.ಟಿ ಚಿಕಿತ್ಸೆಯಿಂದ ನಿಯಂತ್ರಣ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಜೊತೆಗೆ ಉತ್ತಮ ಪೌಷ್ಠಿಕ ಆಹಾರ, ಜೀವನ ಶೈಲಿಯ ಬದಲಾವಣೆ, ಯೋಗ, ಪ್ರಾಣಾಯಾಮ, ಉತ್ತಮ ಹವ್ಯಾಸಗಳು ಹಾಗೂ ನಿಯಮಿತ ಚಿಕಿತ್ಸೆಯಿಂದ ಈ ರೋಗವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ಸಲಹೆ ನೀಡಿದರು. ಹಾಗೆಯೇ ಎಚ್‌.ಐ.ವಿ ಬಂದವರನ್ನು ಸಮಾಜದಿಂದ ದೂರವಿಡದೆ ಎಲ್ಲರಂತೆ ಸಮಾನವಾಗಿ ಕಾಣಬೇಕು ಎಂದು ತಿಳಿಸಿದರು. ಆಲೂರು ವಕೀಲರ ಸಂಘದ ಉಪಾದ್ಯಕ್ಷರಾದ ಕುಮಾರ್‌ರವರು ಮಾತನಾಡಿ, ಎಚ್‌.ಐ.ವಿ ಸೋಂಕಿತರಿಗೆ ಉಚಿತ ಕಾನೂನು ಸಲಹೆ ಲಭ್ಯವಿದ್ದು ಅದರ ಸದುಪಯೋಗ ಪಡಿಸುಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಮಂಜುಳರವರು ಮಾತನಾಡಿ, ಇಂದಿನ ಯುವಜನತೆ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಆರೋಗ್ಯಕರ ಜೀವನಕ್ರಮಗಳನ್ನು ಅನುಸರಿಸಿ, ಎಚ್‌.ಐ.ವಿ ಸೋಂಕಿನಿಂದ ದೂರವಿರುವಂತೆ ಸಲಹೆ ನೀಡಿದರು. ಉಪಾರೋಗ್ಯ ಶಿಕ್ಷಣಾಧಿಕಾರಿಗಳಾದ ಅರುಂಧತಿಯವರು ವಿದ್ಯಾರ್ಥಿಗಳಿಗೆ ಎಚ್‌.ಐ.ವಿ. ನಿಯಂತ್ರಣದ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಕಾಂತಮ್ಮ ಪ್ರಾಂಶುಪಾಲರು ಸರ್ಕಾರಿ ಪದವಿ ಪೂರ್ವ ಕಾಲೇಜು ಆಲೂರು ರವರು ಮಾತನಾಡುತ್ತಾ, ಪ್ರತಿ ವರ್ಷ ಡಿಸೆಂಬರ್ ಮಾಹೆಯಲ್ಲಿ ವಿಶ್ವದ ಎಲ್ಲಾ ಕಡೆ ಏಡ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲಾಗುತ್ತಿ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನವರಾಗಿದ್ದು, ಏಡ್ಸ್ ಬಗ್ಗೆ ಹೆಚ್ಚಿನ ಜಾಗೃತರಾಗುವಂತೆ ತಿಳಿಸುತ್ತಾ, ಎಚ್.ಐ.ವಿ ಮುಕ್ತ ಸಮಾಜವನ್ನು ನಿರ್ಮಿಸುವಂತೆ ಕರೆ ನೀಡಿದರು.

ಪ್ರಗತಿ ಜನಪದ ಕಲಾ ತಂಡದ ರಾಮಣ್ಣ ತಂಡದಿಂದ ಏಡ್ಸ್ ಕುರಿತು ಎಚ್.ಐ.ವಿ. ನಿಯಂತ್ರಣ ಆರಿವು ಗೀತೆ ನುಡಿಸಿದರು. ಕಾರ್ಯಕ್ರಮದಲ್ಲಿ ವಕೀಲರಾದ ಮಂಜೇಗೌಡ, ಉಪನ್ಯಾಸಕರಾದ ಶ್ರೀಮತಿ ತ್ರಿವೇಣಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಸತೀಶ್‌, ಐ.ಸಿ.ಟಿ.ಸಿ ವಿಭಾಗದ ಪ್ರಯೋಗ ಶಾಲಾ ತಾಂತ್ರಿಕಾಧಿಕಾರಿಗಳಾದ ಲೋಕೇಶ್, ಕ್ಷಯರೋಗ ಮೇಲ್ವೀಚಾರಕರಾದ ಸತೀಶ್, ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.

Share this article