ಚಂದನ ಶೆಟ್ಟಿ ಸಂಗೀತಕ್ಕೆ ಯುವಜನತೆ ಫಿದಾ

KannadaprabhaNewsNetwork |  
Published : Oct 25, 2026, 03:15 AM IST
24ಹಗಗ್ಹಗ್ದಗಬ ್ಗ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರುಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಐತಿಹಾಸಿಕ 202ನೇ ಕಿತ್ತೂರು ವಿಜಯೋತ್ಸವದ ಮೊದಲ ದಿನವೇ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಐತಿಹಾಸಿಕ 202ನೇ ಕಿತ್ತೂರು ವಿಜಯೋತ್ಸವದ ಮೊದಲ ದಿನವೇ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು.

ಗ್ರಾಮೀಣ ಸೊಗಡು ಸೇರಿದಂತೆ ವಿವಿಧ ಕಲಾಪ್ರ ಕಾರಗಳ ಅನಾವರಣಕ್ಕೆ ಮೂರು ಪ್ರಮುಖ ವೇದಿಕೆಗಳು ಸಜ್ಜಾಗಿದ್ದವು. ಮಳೆಯ ನಡುವೆಯೂ ಕಲಾವಿದರ ಪ್ರದರ್ಶನಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೊದಲ ದಿನವಾದ ಶುಕ್ರವಾರ ಮಳೆಯ ಕಾರಣದಿಂದ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಮಳೆಯನ್ನೂ ಲೆಕ್ಕಿಸದೆ ಜನರು ಸಂಗೀತ ಕಾರ್ಯಕ್ರಮಗಳತ್ತ ಹರಿದುಬಂದರು. ಖ್ಯಾತ ಸಂಗೀತಗಾರ ಚಂದನ್ ಶೆಟ್ಟಿ ಹಾಗೂ ಶಮಿತಾ ಮಲ್ನಾಡ್ ಮತ್ತು ತಂಡಗಳ ಸಂಗೀತ ಸಂಜೆ ಪ್ರೇಕ್ಷಕರನ್ನು ರಂಜಿಸಿತು. ಚಂದನ್ ಶೆಟ್ಟಿ ತಂಡದ ರ‍್ಯಾಪ್ ಹಾಡುಗಳಿಗೆ ಯುವಜನತೆ ಮನಸೋತರೆ, ಶಮಿತಾ ಮಲ್ನಾಡ್ ಹಾಗೂ ಸಂಗಡಿಗರು ಮೆಲೋಡಿ, ಭಕ್ತಿಗೀತೆ ಮತ್ತು ಚಲನಚಿತ್ರ ಗೀತೆಗಳ ಮೂಲಕ ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿದರು.

ಇದಕ್ಕೂ ಮೊದಲು ಕು. ಸಹನಾ ಬೋಗೂರ ಹಾಗೂ ಪ್ರಿಯಾಂಕ ತಿಲಗಾರ ಅವರ ಸಂಗೀತ ಕಾರ್ಯಕ್ರಮಗಳು ಸುಮಧುರವಾಗಿ ಮೂಡಿಬಂದವು. ಹೊಸ ಪ್ರತಿಭೆಗಳಿಗೆ ಪ್ರಮುಖ ವೇದಿಕೆಯಲ್ಲಿ ಅವಕಾಶ ಕಲ್ಪಿಸುವ ಮೂಲಕ ಉತ್ಸವವು ಕಲಾವಿದರಿಗೆ ಪ್ರೋತ್ಸಾಹ ನೀಡಿತು. ಯದುಕುಮಾರ ಹಾಗೂ ತಂಡದ ನಾದಸ್ವರ ವಾದನ, ಲೋಕೇಶ ಚಕ್ಕರೆ ಮತ್ತು ತಂಡದ ಸಂಗೀತ ಪ್ರಸ್ತುತಿ ತುಂತುರು ಮಳೆಯ ನಡುವೆಯೂ ಕಲಾರಸಿಕರನ್ನು ಸೆಳೆಯಿತು. ಹನುಮಂತ ನರೇಗಲ್ ಹಾಗೂ ತಂಡದ ವಚನ ಗಾಯನ, ನಾಗರತ್ನಾ ಅವರಗೋಳ ತಂಡದ ವಯಲಿನ್ ವಾದನ, ಪ್ರಕಾಶ ಮಲ್ಲಿಗವಾಡ ತಂಡದ ನೃತ್ಯರೂಪಕ ಹಾಗೂ ನಾಗರಾಜ ಜೋರಾಪೂರ ತಂಡದ ಹಾಸ್ಯ ಸಂಜೆ ಪ್ರೇಕ್ಷಕರ ಗಮನ ಸೆಳೆದವು.

ರೂಪಾ ಖಡಗಾಂವಿ ಅವರ ರಂಗಗೀತೆಗಳು, ಧಾರವಾಡದ ರೋಹಿಣಿ ಇಮಾರತಿ ನೃತ್ಯಶಾಲೆಯ ನೃತ್ಯರೂಪಕ ಹಾಗೂ ಮಂಜುಳಾ ಜೋಶಿ ಅವರ ವಚನ ಗಾಯನ ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಇಬ್ರಾಹಿಂ ಸುತಾರ ತಂಡದ ತತ್ವಪದಗಳು, ಮೈಸೂರಿನ ಸುಮಂತ ವಶಿಷ್ಠ ಅವರ ಸುಗಮ ಸಂಗೀತವೂ ಗಮನ ಸೆಳೆದವು. ಬಾಬಾಸಾಬ ಕಾಂಬಳೆ ತಂಡದ ಜೂನಿಯರ್ ಉಪೇಂದ್ರ ಹಾಗೂ ಜೂನಿಯರ್ ರವಿಚಂದ್ರ ಅವರ ಮಿಮಿಕ್ರಿ ಪ್ರದರ್ಶನ ನೆರೆದಿದ್ದ ಜನರನ್ನು ನಗೆಗಡಲಲ್ಲಿ ತೇಲಿಸಿತು. ಬೆಂಗಳೂರಿನ ರಾಮಚಂದ್ರ ಹಡಪದ ತಂಡದ ರಸಮಂಜರಿ ಹಾಗೂ ಶೃತಿಪ್ರಿಯಾ ಅಕಾಡೆಮಿಯ ನೃತ್ಯರೂಪಕವೂ ಪ್ರೇಕ್ಷಕರನ್ನು ರಂಜಿಸಿದವು.

ಪ್ರಚಾರಕ್ಕೆ ವೇದಿಕೆ ಬಳಸಿಕೊಂಡರೇ?:

ಉತ್ಸವದ ಮೊದಲ ದಿನದ ಪ್ರಮುಖ ಆಕರ್ಷಣೆಯಾಗಿದ್ದ ಚನ್ನಮ್ಮಾಜಿಯ ವೇದಿಕೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಚಂದನ್ ಶೆಟ್ಟಿ ಹಾಗೂ ತಂಡದ ಸಂಗೀತ ಸಂಜೆ ಆಯೋಜಿಸಲಾಗಿತ್ತು. ಶುಕ್ರವಾರ ರಾತ್ರಿ ಆರಂಭವಾದ ಕಾರ್ಯಕ್ರಮ ಮಧ್ಯರಾತ್ರಿ 1 ಗಂಟೆಯವರೆಗೂ ಮುಂದುವರಿಯಿತು.

ಕಾರ್ಯಕ್ರಮದ ಕೊನೆಯ ಹಂತದಲ್ಲಿ ಚಂದನ್ ಶೆಟ್ಟಿ ಅವರು ಅಕ್ಟೋಬರ್ 25ರಂದು ತೆರೆಕಾಣಲಿರುವ ‘ಮೈಮಾಟ’ ಚಿತ್ರದ ಟ್ರೇಲರ್ ಅನ್ನು ಕಿತ್ತೂರು ಉತ್ಸವದ ವೇದಿಕೆಯಲ್ಲಿ ಪ್ರದರ್ಶಿಸಿದರು. ಇದರಿಂದ ಸರ್ಕಾರಿ ಪ್ರಾಯೋಜಿತ ಸಾಂಸ್ಕೃತಿಕ ವೇದಿಕೆಯನ್ನು ವೈಯಕ್ತಿಕ ಅಥವಾ ಚಲನಚಿತ್ರ ಪ್ರಚಾರಕ್ಕೆ ಬಳಸಿಕೊಳ್ಳುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸರ್ಕಾರದ ಆಶ್ರಯದಲ್ಲಿ ನಡೆಯುವ ಐತಿಹಾಸಿಕ ಉತ್ಸವದ ವೇದಿಕೆ ಕಲಾ ಪ್ರದರ್ಶನಗಳಿಗೆ ಮೀಸಲಾಗಿರಬೇಕೇ ಅಥವಾ ಇಂತಹ ಪ್ರಚಾರಕ್ಕೂ ಅವಕಾಶ ನೀಡಬೇಕೇ ಎಂಬ ಬಗ್ಗೆ ಪ್ರಜ್ಞಾವಂತ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಿಂದಿನ ಘಟನೆಯೂ ಮತ್ತೆ ನೆನಪಿಗೆ:

ಈ ಹಿಂದೆ ಕಿತ್ತೂರು ಉತ್ಸವದ ಸಂದರ್ಭದಲ್ಲಿ ಜಿಲ್ಲಾಡಳಿತವು ಅರ್ಜುನ್ ಜನ್ಯ ಹಾಗೂ ತಂಡದ ಸಂಗೀತ ಸಂಜೆ ಆಯೋಜಿಸಿತ್ತು. ಆ ಕಾರ್ಯಕ್ರಮದಲ್ಲಿಯೂ ಚಲನಚಿತ್ರದ ಟ್ರೇಲರ್ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ವಿವಾದ ಉಂಟಾಗಿತ್ತು. ಆಗ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ಸಂಭಾವನೆಯಲ್ಲಿ ಕಡಿತಗೊಳಿಸಿದ್ದರು ಎನ್ನಲಾಗಿದೆ.

ಇದೀಗ ಶುಕ್ರವಾರ ಮಧ್ಯರಾತ್ರಿ ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಿರುವುದು ಚರ್ಚೆಗೆ ಕಾರಣವಾಗಿದೆ. ಹಿಂದಿನ ಘಟನೆಯ ಹಿನ್ನೆಲೆಯಲ್ಲಿ ಈ ಬಾರಿಯ ಟ್ರೇಲರ್ ಪ್ರದರ್ಶನದ ಕುರಿತು ಜಿಲ್ಲಾಡಳಿತ ಯಾವ ನಿಲುವು ತಳೆಯಲಿದೆ? ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಿದೆಯೇ? ಎಂಬ ಪ್ರಶ್ನೆಗಳು ಮೂಡಿವೆ.

ಕಿತ್ತೂರು ವಿಜಯೋತ್ಸವವು ರಾಣಿ ಚನ್ನಮ್ಮನ ಐತಿಹಾಸಿಕ ಹೋರಾಟ, ನಾಡಿನ ಸಂಸ್ಕೃತಿ ಹಾಗೂ ಕಲಾಪರಂಪರೆಯನ್ನು ಸ್ಮರಿಸುವ ಮಹತ್ವದ ಉತ್ಸವವಾಗಿದೆ. ಇಂತಹ ವೇದಿಕೆಗಳ ಆಶಯ ಮತ್ತು ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಮಖಂಡಿ ಸಕ್ಕರೆ ಕಾರ್ಖಾನೆಯಲ್ಲಿ ಗೂಂಡಾಗಿರಿ: ರೈತರ ಆರೋಪ
ಇಂದು ಕಿತ್ತೂರು ಉತ್ಸವದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಭಾಗಿ