ಕನ್ನಡಪ್ರಭ ವಾರ್ತೆ ಬೆಂಗಳೂರು
ಸೋಮವಾರ ನೂರಾರು ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿ ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಘನತೆಗೆ ಈ ಘಟನೆ ಧಕ್ಕೆ ತಂದಿದ್ದು, ಮೋದಿ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ, ಜೆಫ್ರಿ ಎಪ್‌ಸ್ಟೀನ್ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರ ಹೆಸರಿನ ಉಲ್ಲೇಖ ಇರುವುದು ದೇಶದ ಪ್ರಜಾಪ್ರಭುತ್ವ, ನೈತಿಕತೆ ಮತ್ತು ಪಾರದರ್ಶಕತೆಯ ಕುರಿತು ಗಂಭೀರ ಪ್ರಶ್ನೆ ಏಳುವಂತೆ ಮಾಡಿದೆ. ಈ ಕುರಿತು ಕೇಂದ್ರ ಸರ್ಕಾರದಿಂದ ಸಮಂಜಸ ಸ್ಪಷ್ಟನೆ ನೀಡದಿರುವುದು ಕೂಡ ಅನುಮಾನ ಹೆಚ್ಚಿಸುತ್ತಿದೆ ಎಂದರು.ಅಮೆರಿಕದ ನ್ಯಾಯ ಇಲಾಖೆ ಬಿಡುಗಡೆ ಮಾಡಿರುವ ಹೊಸ ತನಿಖಾ ಕಡತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಭೇಟಿ ನೀಡಿರುವ ವಿಚಾರದಲ್ಲಿ ಕೆಲ ಅಂಶಗಳಿವೆ. ಇದು ಕೇವಲ ರಾಜಕೀಯ ವಿಚಾರವಲ್ಲ, ರಾಷ್ಟ್ರೀಯ ಘನತೆಯ ವಿಷಯವಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ವೇಳೆ ರಸ್ತೆಗಿಳಿಯಲು ಮುಂದಾದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು.