ಕನ್ನಡಪ್ರಭ ವಾರ್ತೆ ಚಾಮರಾಜನಗರ
ಯುವಕರ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯು ನಿರುದ್ಯೋಗಿಗಳ ಪಾಲಿನ ಆಶಾಕಿರಣವಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ತಿಳಿಸಿದರು.ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಯುವನಿಧಿ ಯೋಜನೆಯ ನೋಂದಣಿ ಜಾಗೃತಿ ಕಾರ್ಯಕ್ರಮದಲ್ಲಿ ‘ಯುವನಿಧಿ ಯೋಜನೆಯ 2025ನೇ ಸಾಲಿನ ನೋಂದಣಿ ಪ್ರಕ್ರಿಯೆ ಆರಂಭ’ ಕುರಿತ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು.
ಡಿಪ್ಲೋಮಾ ಅಥವಾ ಪದವಿ ಮುಗಿಸಿದ ಬಳಿಕ ಮುಂದೇನು ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಎದುರಾಗುವ ಪ್ರಶ್ನೆ. ತಂದೆ-ತಾಯಿ, ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಕನಸು, ಭರವಸೆ ಕಟ್ಟಿಕೊಂಡಿರುತ್ತಾರೆ. ಶಿಕ್ಷಣ ಮುಗಿದ ನಂತರ ಮಕ್ಕಳು ಪೋಷಕರಿಗೆ ಹೊರೆಯಾಗಬಾರದು. ಇದನ್ನು ಮನಗಂಡಿರುವ ಸರ್ಕಾರ ಯುವನಿಧಿ ಯೋಜನೆ ಜಾರಿಗೊಳಿಸಿದೆ. ಯೋಜನೆ ಹಾಗೂ ಯೋಜನೆಯ ಮಾನದಂಡಗಳ ಬಗ್ಗೆ ಎಲ್ಲಾ ಯುವಜನರು ಅರಿವು ಹೊಂದುವುದು ಅಗತ್ಯವಾಗಿದೆ ಎಂದರು.ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕ, ಯುವತಿಯರಿಗೆ 2 ವರ್ಷಗಳಿಗೆ ಡಿಪ್ಲೋಮಾ ಮುಗಿಸಿದವರಿಗೆ 1500 ರು. ಹಾಗೂ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದವರಿಗೆ 3 ಸಾವಿರ ರು. ಗಳನ್ನು ಸರ್ಕಾರವು ನಿರುದ್ಯೋಗ ಭತ್ಯೆಯಾಗಿ ನೀಡಲಿದೆ. ಯೋಜನೆಯ ಸದ್ಭಳಕೆಯಾಗಬೇಕು. ಯುವನಿಧಿ ಯೋಜನೆ ನಿರುದ್ಯೋಗಿಗಳಿಗೆ ಅನ್ವಯವಾಗುವುದರಿಂದ ಯಾರು ನಿರುದ್ಯೋಗಿಗಳಾಗುವುದು ಬೇಡ. ಇದು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳು ಮೊಬೈಲ್‌ಗೆ ಮಾರುಹೋಗದೇ ಓದಿನ ಕಡೆ ಹೆಚ್ಚು ಗಮನ ನೀಡಿ ಉನ್ನತ ವ್ಯಾಸಂಗ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.ಬಡವರ ಪರ ಕಾಳಜಿ ಹೊಂದಿರುವ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳಿಂದ ಜನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಗೃಹಜ್ಯೋತಿ, ಶಕ್ತಿ ಯೋಜನೆಗಳು ಉತ್ತಮ ಪ್ರಗತಿ ಸಾಧಿಸಿವೆ. ಅನ್ನಭಾಗ್ಯದಿಂದ ಜನರು ಹಸಿವು ಮುಕ್ತರಾಗುತ್ತಿದ್ದಾರೆ. ಯುವನಿಧಿಯಡಿ ಹೆಚ್ಚಿನ ನೋಂದಣಿ ಅತ್ಯಾವಶ್ಯಕವಾಗಿದೆ. ನಿರುದ್ಯೋಗಿಗಳಿಗೆ ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗವಕಾಶ ನೀಡಲು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಜಿಲ್ಲಾಧ್ಯಕ್ಷರಾದ ಚಂದ್ರು ಅವರು ತಿಳಿಸಿದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎಚ್.ಜಿ. ಲೋಕೇಶ್ ಮಾತನಾಡಿ, ನಿರುದ್ಯೋಗ ಎನ್ನುವುದು ಎಲ್ಲೆಡೆ ಕಾಣಸಿಗುತ್ತದೆ. ಶಿಕ್ಷಣ ಮುಗಿಸಿದ ಬಳಿಕ ಸರ್ಕಾರಿ ಉದ್ಯೋಗದ ಆಕಾಂಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಕೆಲಸ ಸಿಗುವವರೆಗೆ ಯುವನಿಧಿ ಯೋಜನೆ ವರದಾನವಾಗಿದೆ. ವಿದ್ಯಾರ್ಥಿಗಳು ಸಾಕಷ್ಟು ಪರಿಶ್ರಮದಿಂದ ಉನ್ನತ ಹುದ್ದೆಗಳನ್ನು ಪಡೆಯಬೇಕು. ಜಿಲ್ಲೆಯ ಕೈಗಾರಿಕೆಗಳಲ್ಲಿ ಪಾಲಿಟೆಕ್ನಿಕ್, ಐ.ಟಿ.ಐ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗವಕಾಶಕ್ಕೆ ಆದ್ಯತೆ ನೀಡಬೇಕು ಎಂದರು.ಗ್ಯಾರಂಟಿ ಯೋಜನೆಗಳ ಸಮಿತಿ ತಾಲೂಕು ಸದಸ್ಯ ಸೋಮೇಶ್ವರ ಮಾತನಾಡಿ, ಪದವಿ, ಇನ್ನಿತರೆ ಶಿಕ್ಷಣದ ನಂತರ ಯುವಜನರ ಅಗತ್ಯತೆಗಳಿಗೆ ಯುವನಿಧಿ ಯೋಜನೆ ನೆರವಾಗಲಿದೆ. ನಿರುದ್ಯೋಗಿಗಳು ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಆರ್ಥಿಕವಾಗಿ ಯೋಜನೆಯು ಅನುಕೂಲ ಕಲ್ಪಿಸಿದೆ. ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ಮುಂಚೂಣಿಗೆ ಬರಬೇಕು. ವಿದ್ಯಾರ್ಥಿಯ ಪೋಷಕರ ಭರವಸೆಗಳು ಈಡೇರಬೇಕು ಎಂದು ತಿಳಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಜಿಲ್ಲಾ ಉದ್ಯೋಗಾಧಿಕಾರಿ ಮಹಮ್ಮದ್ ಅಕ್ಬರ್, ಜಿಲ್ಲೆಯಲ್ಲಿ ಯೋಜನೆಯ ನೊಂದಣಿ ಹೆಚ್ಚಿಸುವ ಸಲುವಾಗಿ ಇಲಾಖೆ ವತಿಯಿಂದ ವೃತ್ತಿ ಮಾರ್ಗದರ್ಶನ ಹಾಗೂ ಯುವನಿಧಿ ಯೋಜನೆಯ ಸಂಚಾರಿ ನೋಂದಣಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದುವರೆಗೆ ಚಾಮರಾಜನಗರ ತಾಲೂಕಿನಲ್ಲಿ 1439, ಕೊಳ್ಳೇಗಾಲ 698, ಗುಂಡ್ಲುಪೇಟೆ 875, ಯಳಂದೂರು 222 ಹಾಗೂ ಹನೂರು ತಾಲೂಕಿನಲ್ಲಿ 474 ಮಂದಿ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 3823 ನಿರುದ್ಯೋಗಿಗಳು ನೋಂದಣಿಯಾಗಿದ್ದಾರೆ ಎಂದರು.ಪಂಚ ಗ್ಯಾರಂಟಿ ಯೋಜನೆಗಳ ಸಮಿತಿ ತಾಲೂಕು ಸದಸ್ಯರಾದ ಕುಮಾರ್, ರಾಜು, ರಾಜೇಶ್, ರಮೇಶ್, ಗಣೇಶ್, ಕುಮಾರಸ್ವಾಮಿ, ಮಂಜುಳ, ಪುಟ್ಟಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕ ಸುರೇಶ್‌ಕುಮಾರ್ ಇದ್ದರು.